ಕ್ರೀಡೆಯಲ್ಲಿ ತಾಲೂಕಿನ ಕೀರ್ತಿ ಹೆಚ್ಚಿಸಿ
ಕುಣಿಗಲ್: ಪದವಿ ಪೂರ್ವ ಹಂತದ ವಿದ್ಯಾರ್ಥಿಗಳು ಮಾನಸಿಕವಾಗಿ, ಬೌದ್ಧಿಕವಾಗಿ ಹೆಚ್ಚಿನ ಸಾಮರ್ಥ್ಯ ಹೊಂದಿದ್ದು, ತಾಲೂಕು ಮಟ್ಟದ ಕ್ರೀಡೆಗಳಲ್ಲಿ ತಮ್ಮ ಉತ್ತಮ ಸಾಮರ್ಥ್ಯ ಪ್ರದರ್ಶಿಸಿ, ಜಿಲ್ಲಾ ಹಾಗೂ ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಉತ್ತಮ ಪ್ರತಿಭೆ ತೋರಿಸುವ ಮೂಲಕ ತಾಲೂಕಿನ ಕೀರ್ತಿ ಹೆಚ್ಚಿಸಬೇಕೆಂದು ಶಾಸಕ ಡಿ.ನಾಗರಾಜಯ್ಯ ತಿಳಿಸಿದರು.
ಸೋಮವಾರ, ಪಟ್ಟಣದ ಮಹಾತ್ಮಗಾಂಧಿ ಪ.ಪೂ.ಕಾಲೇಜು ಆವರಣದಲ್ಲಿ ಹಮ್ಮಿಕೊಳ್ಳಲಾದ ತಾಲೂಕು ಮಟ್ಟದ ಪ.ಪೂ. ಕಾಲೇಜುಗಳ ಕ್ರೀಡಾಕೂಟ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕ್ರೀಡೆಯಲ್ಲೂ ತಾಲೂಕು ಉತ್ತಮ ಸಾಧನೆ ಮಾಡಲು ವಿಫುಲ ಅವಕಾಶಗಳಿದ್ದು, ಶಿಕ್ಷಕರು ಕ್ರೀಡಾಪಟುಗಳಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರತೆಗೆದು ರಾಷ್ಟ್ರ ಮಟ್ಟದ ಉತ್ತಮ ಕ್ರೀಡಾಪಟುಗಳನ್ನು ರೂಪಿಸಿ, ರಾಷ್ಟ್ರಕ್ಕೆ ಕೊಡುಗೆ ನೀಡಬೇಕಿದೆ. ಇನ್ನು ತಾಲೂಕು ಮಟ್ಟದಲ್ಲಿ ನಡೆಯುವ ಕ್ರೀಡಾಕೂಟಗಳಲ್ಲಿ ನಿರ್ಣಾಯಕ ಪಾತ್ರ ವಹಿಸುವ ತೀರ್ಪುಗಾರರ ತಮ್ಮ ತೀರ್ಪುಗಳಿಗೆ ಯಾವುದೆ ಆಕ್ಷೇಪ ಬಾರದಂತೆ ನಿಷ್ಪಕ್ಷಪಾತ ತೀರ್ಪು ನೀಡಿ ಕ್ರೀಡಾಪಟುಗಳ ಸ್ಫೂರ್ತಿ ವೃದ್ಧಿಸಬೇಕೆಂದರು.
ಡಿವೈಎಸ್ಪಿ ಉಮಾರಾಣಿ ಧ್ವಜಾರೋಹಣೆ ನೆರವೇರಿಸಿದರು. ಬಿಇಒ ವಿ.ಜಿ.ಲೋಕೇಶ್ ಉದ್ಘಾಟಿಸಿದರು. ಜಿಪಂ ಸದಸ್ಯ ವೈ.ಎಚ್. ಹುಚ್ಚಯ್ಯ, ಪುರಸಭೆ ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಹರೀಶ್, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ್, ಪ್ರಾಚಾರ್ಯ ಪುಟ್ಟರಾಮೇಗೌಡ, ಕುಮಾರ, ನಂಜಪ್ಪ ಇತರರು ಇದ್ದರು.