ಚಿಕಿತ್ಸೆಗಿಂತ ಮುನ್ನೆಚ್ಚೆರಿಕೆಯೇ ರೋಗ ನಿಯಂತ್ರಣಕ್ಕೆ ಮದ್ದು
ಕನ್ನಡಪ್ರಭ ವಾರ್ತೆ ತುಮಕೂರು ಸೆ.2
ಕ್ಯಾತಸಂದ್ರದ ಸನ್ರೈಸ್ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ ಅಂಗವಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಯಶಸ್ಸಿಯಾಗಿ ಜರುಗಿತು. 250ಕ್ಕೂ ಹೆಚ್ಚು ಶಿಬಿರದ ಪ್ರಯೋಜನ ಪಡೆದರು.
ಕೆ.ಎನ್. ರುದ್ರಯ್ಯ ಸಮುದಾಯ ಭವನದಲ್ಲಿ ಬೆಳಗ್ಗೆ 8 ರಿಂದ 12 ರವರೆಗೆ ಎಸ್ವಿಎಸ್ ಕ್ಲಿನಿಕ್ ಸಹಯೋಗದಲ್ಲಿ ಏರ್ಪಡಿಸಿದ್ದ ವೈದ್ಯಕೀಯ ತಪಾಸಣಾ ಶಿಬಿರವನ್ನು 33ನೇ ವಾರ್ಡ್ ನಗರಸಭಾ ಸದಸ್ಯೆ ಧನಲಕ್ಷ್ಮೀ ಉದ್ಘಾಟಿಸಿದರು.
ಶಿಬಿರದ ನೇತೃತ್ವ ವಹಿಸಿದ್ದ ಭಾರತೀಯ ವೈದ್ಯಕೀಯ ಶಾಖೆಯ ಜಿಲ್ಲಾ ಕಾರ್ಯದರ್ಶಿ ಡಾ. ಸುರೇಶ್ಬಾಬು ಮಾತನಾಡಿ, ದಿನೇದಿನೇ ಆರೋಗ್ಯದ ಬಗ್ಗೆ ಜನರಲ್ಲಿ ಜಾಗೃತಿ ಹೆಚ್ಚುತ್ತಿದೆ. ಚಿಕಿತ್ಸೆಗಿಂತ ಮುನ್ನೆಚ್ಚರಿಕೆ ವಹಿಸುವುದರ ಮೂಲಕ ಹಲವು ರೋಗಗಳನ್ನು ತಡೆಗಟ್ಟಬಹುದು. ದೈಹಿಕ ವ್ಯಾಯಾಮ, ಯೋಗಾಭ್ಯಾಸದಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದು ಸಲಹೆನೀಡಿದರು.
ಮಧುಮೇಹ ವಂಶವಾಹಿನಿ ರೋಗ. ತಂದೆ, ತಾಯಿಗೆ ಸಕ್ಕರೆ ಕಾಯಿಲೆ ಇದ್ದರೆ ಶೇ.50 ರಷ್ಟು ಮಕ್ಕಳಿಗೆ ರೋಗ ಬರಲಿದೆ. ಮಧುಮೇಹ ಬಗ್ಗೆ ಹೆಚ್ಚು ಭೀತಿಗೊಳ್ಳುವ ಅಗತ್ಯವಿಲ್ಲ. ಸಾಕಷ್ಟು ಮುಂಜಾಗ್ರತೆ ವಹಿಸುವ ಮೂಲಕ ರೋಗವನ್ನು ನಿಯಂತ್ರಿಸಿಕೊಳ್ಳಬಹುದು. ಬೆಳಗಿನ ಹೊತ್ತು ವ್ಯಾಯಾಮ, ನಡಿಗೆ ಮೂಲಕ ಮಧುಮೇಹಕ್ಕೆ ಅರ್ಧ ಚಿಕಿತ್ಸೆ ನೀಡಬಹುದಾಗಿದೆ ಎಂದರು.
ಶ್ಲಾಘನೀಯ: ವಿವೇಕಾನಂದ ಪತ್ತಿನ ಸಹಕಾರಿ ಸಂಘದ ಪಿ. ಮೂರ್ತಿ ಮಾತನಾಡಿ, ಸಹಕಾರಿ ಸಂಘದ ಜೊತೆ, ಜೊತೆಯೇ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ನಿಸ್ವಾರ್ಥ ಸೇವೆಸಲ್ಲಿಸುತ್ತಿರುವ ಸನ್ರೈಸ್ ಸಹಕಾರಿ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಸನ್ರೈಸ್ ಸಹಕಾರಿ ಆಡಳಿತ ಮಂಡಳಿಯವರು ತಮ್ಮ ಸಹಕಾರಿಯ ಸದಸ್ಯರು ಮತ್ತು ಕುಟುಂಬದವರಿಗೆ ಮಾತ್ರ ಆರೋಗ್ಯ ಶಿಬಿರವನ್ನು ಸೀಮಿತಗೊಳಿಸಬಾರದು. ಕ್ಯಾತಸಂದ್ರದ ಎಲ್ಲ ಜನರಿಗೂ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದರೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಕೆ.ಎನ್.ರವಿ ಭರವಸೆಯಿತ್ತರು. ಕಾಂಗ್ರೆಸ್ ಮುಖಂಡ ಶ್ರೀನಿವಾಸ್, ಸಹಕಾರಿ ಸಂಘದ ಅಧ್ಯಕ್ಷ ಸಿ.ಪಿ.ವಿಜಯ್, ಉಪಾಧ್ಯಕ್ಷ ಕೆ. ಚಂದ್ರಮೋಹನ್ ರೆಡ್ಡಿ, ನಿರ್ದೇಶಕರಾದ ರಾಜಕುಮಾರ್, ರವೀಶ್ಕುಮಾರ್, ಯೇಸುದಾಸ್, ಸಿದ್ದರಾಜು, ನಾಗರಾಜ್, ಕೃಷ್ಣಾಚಾರ್ ಮತ್ತಿತರರು ಉಪಸ್ಥಿತರಿದ್ದರು.