ಟಿಎಪಿಸಿಎಂಎಸ್ ವತಿಯಿಂದ ಜನತಾ ಬಜಾರ್ ಪ್ರಾರಂಭ
ಕುಣಿಗಲ್: ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದ ಗ್ರಾಹಕರಿಗೆ ದಿನಬಳಕೆಯ ಉತ್ತಮ ಗುಣಮಟ್ಟದ ಆಹಾರಧಾನ್ಯಗಳನ್ನು ರಿಯಾಯಿತಿ ದರದಲ್ಲಿ ಪೂರೈಸುವ ಉದ್ದೇಶದಿಂದ ಪಟ್ಟಣದ ಟಿಎಪಿಸಿಎಂಎಸ್ ವತಿಯಿಂದ ಜನತಾ ಬಜಾರ್ ಪ್ರಾರಂಭಿಸಲಾಗಿದೆ. ಗ್ರಾಹಕರು, ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಾಸಕ ಡಿ.ನಾಗರಾಜಯ್ಯ ತಿಳಿಸಿದರು.
ಸೋಮವಾರ, ಪಟ್ಟಣದ ಹೃದಯಭಾಗದಲ್ಲಿನ ಕುಣಿಗಲ್ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ (ಟಿಎಪಿಸಿಎಂಸ್)ಗೆ ಸೇರಿದ ಕಲ್ಲುಬಿಲ್ಡಿಂಗ್ನ ಮಳಿಗೆಯೊಂದರಲ್ಲಿ ಜನತಾ ಬಜಾರ್ ಶಾಖೆಯನ್ನು ಉದ್ಘಾಟಿಸಿ ಮಾತನಾಡಿ, ಈ ಹಿಂದೆ ಟಿಎಪಿಸಿಎಂಎಸ್ನಲ್ಲಿ ಜನತಾ ಬಜಾರ್ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಕೆಲವೊಂದು ಕಾರಣಗಳಿಂದಾಗಿ ಸದರಿ ವಿಭಾಗ ಮುಚ್ಚಲಾಗಿತ್ತು. ಈಗ ಯುವ
ಉತ್ಸಾಹಿ ಅಧ್ಯಕ್ಷರ ಮತ್ತು ಮಂಡಳಿಯ ಸತತ ಪರಿಶ್ರಮದಿಂದ ಪಟ್ಟಣ ಸೇರಿದಂತೆ ಗ್ರಾಮಾಂತರ ಪ್ರದೇಶದ ಗ್ರಾಹಕರಿಗೆ ದಿನಬಳಕೆ ಆಹಾರಧಾನ್ಯ ದೊರಕಿಸಿಕೊಡಲು ಜನತಾ ಬಜಾರ್ ಶಾಖೆ ಪ್ರಾರಂಭಿಸಿದ್ದು, ಪಟ್ಟಣದ ಜನತೆ ಸದ್ಬಳಕೆ ಮಾಡಿಕೊಳ್ಳಬೇಕೆಂದರು.
ಇನ್ನಷ್ಟು ಯೋಜನೆ: ಅಧ್ಯಕ್ಷ ಕೆ.ಎಲ್.ಹರೀಶ್, ಸಂಘದ ಆಡಳಿತ ಮಂಡಳಿಯ ನಿರ್ದೇಶಕರ ಸಹಾಯ, ಸಹಕಾರದೊಂದಿಗೆ ಈ ಶಾಖೆಯನ್ನು ಪ್ರಾರಂಭಿಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಗ್ರಾಹಕಸ್ನೇಹಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ಸಹಕಾರಿ ಸಂಘದ ಈ ಮಳಿಗೆ ಜನಸ್ನೇಹಿಯಾಗುವಂತೆ ಮಾಡಲು ಶ್ರಮಿಸುವುದಾಗಿ ತಿಳಿಸಿದರು.
ನಿರ್ದೇಶಕರಾದ ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಿವಣ್ಣ, ತಿರುಮಲಯ್ಯ, ಲಕ್ಷ್ಮಣ, ಹನುಮೇಗೌಡ, ಸೋಮಣ್ಣ ಸೇರಿದಂತೆ ಸಂಘದ ಹಲವು ಸಿಬ್ಬಂದಿ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದು, ಶಾಸಕರು ಕೆಲ ವಸ್ತುಗಳನ್ನು ಖರೀದಿಸಿ, ವ್ಯವಹಾರಕ್ಕೆ ಚಾಲನೆ ನೀಡಿದರು.