ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಆಕ್ರೋಶ
ಕ.ಪ್ರ.ವಾರ್ತೆ ತುಮಕೂರು ಸೆ.2
ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರ ಪೆಟ್ರೋಲ್, ಡಿಸೇಲ್ ಬೆಲೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಳ ಮಾಡಿರುವುದನ್ನು ತುಮಕೂರು ಜಿಲ್ಲಾ ಬಿಜೆಪಿ ಘಟಕದ ಹಿರಿಯ ಜಿಲ್ಲಾ ಉಪಾಧ್ಯಕ್ಷ ಪಿ. ಕೃಪ್ಣಪ್ಪರವರ ನೇತೃತ್ವದಲ್ಲಿ ತುಮಕೂರು ಜಿಲ್ಲಾಧಿಕಾರಿಗಳವರ ಕಚೇರಿ ಎದುರು ಭಾರೀ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿತು.
ಡಿಸೇಲ್, ಪೆಟ್ರೋಲ್ ಬೆಲೆ ಏರಿಕೆಯಿಂದ ಜನಸಾಮಾನ್ಯರ ಬದುಕಿನ ಮೇಲೆ ನೇರ ಪರಿಣಾಮ ಬೀರಿ, ದಿನನಿತ್ಯದ ವಸ್ತುಗಳು ಮತ್ತು ಜೀವನೋಪಯೋಗಿ ಪದಾರ್ಥಗಳ ಮೇಲೆ ಬೆಲೆ ಏರಿಕೆಯಿಂದ ಜೀವನ ನಿರ್ವಹಣೆ ಮೇಲೆ ಹೊಡೆತ ಬೀಳುತ್ತದೆ ಎಂದು ಬಿಜೆಪಿ ಹಿರಿಯ ಉಪಾಧ್ಯಕ್ಷ ಪಿ. ಕೃಷ್ಣಪ್ಪನವರು ಆಕ್ರೋಶ ವ್ಯಕ್ತಪಡಿಸುವುದರ ಜೊತೆಗೆ ಏರಿಕೆ ಮಾಡಿರುವುದನ್ನು ಹಿಂದಕ್ಕೆ ಪಡೆಯಲು ಒತ್ತಾಯಿಸಿದರು.
ಕೇಂದ್ರ ಕಾರಣ: ವಿಶ್ವದ ಮಟ್ಟದಲ್ಲಿ ಡಾಲರ್ ಎದುರು ರೂಪಾಯಿ ಬೆಲೆ ಕುಸಿತಕ್ಕೆ ಕೇಂದ್ರದ ಯುಪಿಎ ಸರ್ಕಾರ ಕಾರಣವಾಗಿದ್ದು, ಇದನ್ನು ತಡೆಗಟ್ಟಲು ಕಾಂಗ್ರೆಸ್ ವಿಫಲವಾಗಿದೆ. ಅಮೇರಿಕನ್ ಡಾಲರ್ ಸೇರಿದಂತೆ ವಿದೇಶಗಳ ಪ್ರಮುಖ ಕರೆನ್ಸಿ ಎದುರು ರುಪಾಯಿ ಮೌಲ್ಯ ಕುಸಿದಿದ್ದು, ಅದರ ಪರಿಣಾಮ ತೈಲೋತ್ಪನ್ನಗಳ ದರ ಏರಿಕೆಯಿಂದ, ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆ ಮಾಡಿದ್ದು, ಇದೊಂದು ಜನರಿಗೆ ನೀಡಿದ ಶಾಕ್ ಎಂದು ಬಿಜೆಪಿ ಬಣ್ಣಿಸಿದೆ.
ಏರಿಕೆ: ಇದಲ್ಲದೆ, ಆಯಾ ರಾಜ್ಯ ಸರ್ಕಾರಗಳು ವಿಧಿಸುವ ಸ್ಥಳೀಯ ತೆರಿಗೆ ಅಥವಾ ವ್ಯಾಟ್ ಅನ್ನು ಆಧರಿಸಿ ದರ ವ್ಯತ್ಯಾಸಗಳಾಗಲಿದ್ದು, ಕಳೆದ ಎರಡು ತಿಂಗಳಿನಿಂದ ಪೆಟ್ರೋಲ್ ದರ 6 ಬಾರಿ ಹೆಚ್ಚಳವಾಗಿದ್ದು, ಜನವರಿಯಿಂದ ಜುಲೈ 17 ರ ವರೆಗೆ 8 ಬಾರಿ ಏರಿಕೆಯಾಗಿದೆ. ಇದೊಂದು ದುರಂತದ ಸಂಗತಿಯಾಗಿದ್ದು, ಜನಸಾಮಾನ್ಯರು ಹೇಗೆ ಜೀವನ ನಿರ್ವಹಣೆ ಮಾಡಲು ಸಾಧ್ಯ ಎಂದು ಬಿಜೆಪಿ ನಗರಾಧ್ಯಕ್ಷ ಕೆ.ಪಿ. ಮಹೇಶ, ನಗರಸಭಾ ಸದಸ್ಯ ಡೆಲ್ಟಾ ರವಿಕುಮಾರ್, ತುರುವೇಕೆರೆ ತಾಲೂಕು ಘಟಕದ ಮಹಿಳಾ ಮೋರ್ಚಾ ಅಧ್ಯಕ್ಷೆ ಅನಿತಾ ನಂಜುಂಡಯ್ಯರವರು ಪ್ರತಿಭಟನಾಗಾರರನ್ನು ಉದ್ದೇಶಿಸಿ ಮಾತನಾಡಿ, ನಿರಂತರವಾಗಿ ಡೀಸೆಲ್, ಪೆಟ್ರೋಲ್ ಮತ್ತು ಗ್ಯಾಸ್ ಸಿಲಿಂಡರ್ ಬೆಲೆಗಳನ್ನು ಏರಿಸುವುದರ ಮೂಲಕ ಜನಸಾಮಾನ್ಯರ ಬದುಕಿನ ಜೊತೆ ಚೆಲ್ಲಾಟವಾಡುತ್ತಿರುವ ಕೇಂದ್ರದ ಯುಪಿಎ ಸರಕಾರದ ಜನವಿರೋಧಿ ನೀತಿಯನ್ನು ಬಿಜೆಪಿ ಉಗ್ರವಾಗಿ ಖಂಡಿಸುತ್ತದೆ ಎಂದರು.
ಅಪಮೌಲ್ಯ: ಕೇಂದ್ರದ ಯುಪಿಎ ಸರಕಾರದ ಅಸಮರ್ಪಕ ಆರ್ಥಿಕ ನೀತಿಗಳಿಂದಾಗಿ ಡಾಲರ್ ಬೆಲೆಯೆದುರು ರೂಪಾಯಿಯ ಮೌಲ್ಯ ಅಪಮೌಲ್ಯಕ್ಕೀಡಾಗಿದೆ. ಇದರಿಂದಾಗಿ ತೈಲ ಬೆಲೆಗಳು ಏರಿಕೆಯಾಗಿದೆ ಎಂಬ ಸಬೂಬನ್ನು ಹೇಳುವ ಕೇಂದ್ರದ ಯುಪಿಎ ಸರ್ಕಾರ ರು. ಮೌಲ್ಯ ಕುಸಿತದ ತಡೆಗೆ ಅಗತ್ಯವಾದ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವಲ್ಲಿ ಮಾತ್ರ ವಿಫಲವಾಗಿದೆ. ಸ್ವತಃ ಆರ್ಥಿಕ ತಜ್ಞರಾದ ಪ್ರಧಾನಿ ಮನಮೋಹನ್ ಸಿಂಗ್ ಮತ್ತು ಅನುಭವೀ ಹಣಕಾಸು ಮಂತ್ರಿ ಪಿ.ಚಿದಂಬರಂ ದೇಶದ ಆರ್ಥಿಕ ವ್ಯವಸ್ಥೆಯ ನಿರ್ವಹಣೆಯಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ. ಕೇಂದ್ರದ ತಪ್ಪು ಆರ್ಥಿಕ ನೀತಿಗಳ ಪರಿಣಾಮವನ್ನು ಸಾಮಾನ್ಯ ಜನರು ಅನುಭವಿಸುವಂತಾಗಿದೆ ಎಂದರು.
ಕೂಡಲೇ ಕೇಂದ್ರ ಸರಕಾರ ಅಗತ್ಯವಾದ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು. ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆ ನಿರ್ಧಾರವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕೆಂದು ಬಿಜೆಪಿ ಆಗ್ರಹಿದೆ. ಕೇಂದ್ರದ ಯುಪಿಎ ಸರಕಾರ ಈ ಬಗ್ಗೆ ತ್ವರಿತವಾಗಿ ಸ್ಪಂದಿಸದೆ ಇದ್ದಲ್ಲಿ ಜನಸಾಮಾನ್ಯರೊಂದಿಗೆ ಬಿಜೆಪಿ ತನ್ನ ಹೋರಾಟವನ್ನು ತೀವ್ರಗೊಳಿಸುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.
ಪ್ರತಿಭಟನಾ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಸಂಘಟನಾ ಪ್ರಧಾನ ಕಾರ್ಯದರ್ಶಿ ಎಸ್. ಅಖಿಲಾನಂದ್, ಮುಖಂಡರಾದ ಧನಪಾಲ್ ಶೆಟ್ಟಿ, ಮಂಜುನಾಥ್, ಸತೀಶ್ ಎಸ್.ಟಿ.ಡಿ. ಉಮೇಶ್, ನಗರ ಸಭಾ ಮಾಜಿ ಸದಸ್ಯ ರಾಮಾಂಜಿನಪ್ಪ (ರಾಮು), ವಿಶ್ವಾಸ್, ಉಪೇಂದ್ರ ಕುಮಾರ್, ಹೊಸಕೋಟೆ ನಟರಾಜ್, ಹರೀಶ್, ಅನಿಲ್, ಎಚ್.ಕೆ. ಬಸವಕುಮಾರ್, ಎಚ್.ಎನ್. ಉಮೇಶ್, ಮಹಿಳಾ ಘಟಕದ ಪ್ರಮುಖರಾದ ಪ್ರೇಮಾ ಹೆಗಡೆ, ಪ್ರೇಮಲತಾ, ಕೋಮಲ, ವಿಜಯಾ ಭಾಸ್ಕರ್, ಬಿ.ಎಸ್. ಯಶೋಧ ಮುಂತಾದವರು ಭಾಗವಹಿಸಿದ್ದರು.