ಶಾಲಾ ಮಕ್ಕಳಿಗೆ ರಕ್ತ ಹೀನತೆ ಬಗ್ಗೆ ಅರಿವು ಮೂಡಿಸಿ
ಕನ್ನಡಪ್ರಭ ವಾರ್ತೆ ತುಮಕೂರು ಸೆ.2
ಗ್ರಾಮಾಂತರ ಪ್ರದೇಶದಲ್ಲಿರುವ ಶಾಲೆಗಳ ಮಕ್ಕಳಿಗೆ ರಕ್ತಹೀನತೆಯ ಬಗ್ಗೆ ಜಾಗೃತಿ ಮೂಡಿಸಲು ಗುಣಾತ್ಮಕವಾಗಿ ಕಾರ್ಯಕ್ರಮಗಳನ್ನು ನಿಗದಿಪಡಿಸಿ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ 2013-14 ನೇ ಸಾಲಿನ ಜಿಲ್ಲಾ ಮಟ್ಟದ ಮಾಹಿತಿ, ಶಿಕ್ಷಣ ಮತ್ತು ಸಂವಹನ, ಬಿ.ಸಿ.ಸಿ. ಕಾರ್ಯಕ್ರಮಗಳ ಅನುಷ್ಠಾನ ಮತ್ತು ಮೇಲ್ವಿಚಾರಣಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರಕ್ತಹೀನತೆಯ ಬಗ್ಗೆ ಜಾಗೃತಿ ಮೂಡಿಸುವ 45 ಕಾರ್ಯಕ್ರಮಗಳನ್ನು ನಿಗದಿಪಡಿಸಿ ರಾಜ್ಯಮಟ್ಟದಿಂದ ನೀಡಿರುವ ಮಾರ್ಗಸೂಚಿಯಂತೆ ಅನುಷ್ಠಾನಗೊಳಿಸುವಂತೆ ಅವರು ತಿಳಿಸಿದರು.
ತಾಯಂದಿರ ಮರಣ ಪ್ರಮಾಣ ಹಾಗೂ ಶಿಶು ಮರಣ ಪ್ರಮಾಣ ತಡೆಗಟ್ಟುವ ಕುರಿತ ಅರಿವು ಮೂಡಿಸುವ 103 ಕಾರ್ಯಕ್ರಮಗಳನ್ನು ಜಿಲ್ಲೆಗೆ ನೀಡಲಾಗಿದ್ದು, ಕಾರ್ಯಕ್ರಮವೊಂದಕ್ಕೆ 600 ರಂತೆ 61800 ರು. ಬಿಡುಗಡೆಯಾಗಿದ್ದು, ಅದನ್ನು ಕಾರ್ಯಯೋಜನೆಯಲ್ಲಿ ಸೂಚಿಸಿರುವ ಪಟ್ಟಿಯಂತೆ ನಿರ್ವಹಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದರು.
ಅನುಷ್ಠಾನ ಮಾಡಿ: ಶಾಲಾ ಶಿಕ್ಷಕರಿಗೆ ಮತ್ತು ಹದಿಹರೆಯದ ಹೆಣ್ಣುಮಕ್ಕಳಿಗೆ ಆರೋಗ್ಯ ಅರಿವು (ಎ.ಆರ್.ಎಸ್.ಎಚ್.) ಮೂಡಿಸುವ ಕಾರ್ಯಕ್ರಮಗಳನ್ನು ಕ್ರಮವಾಗಿ ಜಿಲ್ಲೆಗೆ 67 ಕಾರ್ಯಕ್ರಮಗಳು ಮತ್ತು 46 ಕಾರ್ಯಕ್ರಮಗಳು ನಿಗದಿಪಡಿಸಿ ಅನುಷ್ಠಾನ ಮಾಡುವಂತೆ ಅವರು ತಿಳಿಸಿದರು.
ಐ.ಇ.ಸಿ. ವಿಭಾಗಕ್ಕೆ ಡಾಟಾ ಎಂಟ್ರಿ ಆಪರೇಟರ್ ಅನ್ನು ಹೊರಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡು ಪ್ರತಿ ತಿಂಗಳು ರು.10ಸಾವಿರ ಮೀರದಂತೆ ಭತ್ಯೆ ಪಾವತಿಸುವಂತೆ ಸಭೆಯಲ್ಲಿ ನಿರ್ಧರಿಸಲಾಯಿತು.
2013-14 ನೇ ಸಾಲಿಗೆ ಐ.ಇ.ಸಿ., ಬಿ.ಸಿ.ಸಿ. ಕಾರ್ಯಕ್ರಮಗಳ ಅನುಷ್ಠಾನ ಯೋಜನೆ ಪ್ರಕಾರ (ಆರ್.ಓ.ಪಿ.) ತುಮಕೂರು ಜಿಲ್ಲೆಗೆ 338800 ರು.ಗಳ ಕ್ರಿಯಾ ಯೋಜನೆಯನ್ನು ಕಾರ್ಯಕ್ರಮವಾರು ಈ ಸಂದರ್ಭ ಪರಿಶೀಲಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಚನ್ನಮಲ್ಲಯ್ಯ, ಡಿ.ಪಿ.ಎಂ.ಓ. ಡಾ. ವೆಂಕಟೇಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗುರುಸಿದ್ದಯ್ಯ ಉಪಸ್ಥಿತರಿದ್ದರು.