ಕರ್ತವ್ಯಪ್ರಜ್ಞೆ ಕೊರತೆಯಿಂದ ರಾಜ್ಯದ ಹಲವೆಡೆ ಕೃತಕ ಬರಗಾಲ
ಕ.ಪ್ರ.ವಾರ್ತೆ ತುಮಕೂರು ಸೆ.3
ಬಯಲು ಸೀಮೆ ಕೆರೆಗಳಿಗೆ ಜಲಾಶಯಗಳ ಹೆಚ್ಚುವರಿ ನೀರು ಹರಿಸುವ ಕುರಿತಂತೆ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೆ.ಟಿ. ಗಂಗಾಧರ್ ಧನಿಯೆತ್ತಿದ್ದಾರೆ. ಇಡೀ ರಾಜ್ಯಕ್ಕೆ ಜಲಾಶಯಗಳ ನೀರಿನ ಸಮರ್ಪಕ ಬಳಕೆ ಮಾಡುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದ್ದು,ಹಲವೆಡೆ ಕೃತಕ ಬರಗಾಲಕ್ಕೆ ಕಾರಣವಾಗಿದೆ ಎಂದು ಆರೋಪಿಸಿದ್ದಾರೆ.
ಅವರು ತುಮಕೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ದಕ್ಷಿಣ ಕರ್ನಾಟಕದ 9 ಜಿಲ್ಲೆಗಳ ಸುಮಾರು 75 ತಾಲೂಕುಗಳಲ್ಲಿ ಮಳೆ ಕೊರತೆಯಿಂದ ಬರಗಾಲ ಆವರಿಸಿದೆ. ಮಲೆನಾಡಿನಲ್ಲಿ ದಾಖಲೆ ಮಳೆ. ಜಲಾಶಯ ಭರ್ತಿ. ಇನ್ನೊಂದೆಡೆ ಬರಗಾಲ. ಭರ್ತಿಯಾಗಿರುವ ಜಲಾಶಯಗಳ ನೀರನ್ನು ಸಮರ್ಪಕವಾಗಿ ಬಳಸಿಕೊಳ್ಳಲಾಗುತ್ತಿಲ್ಲ. ಬಯಲು ಸೀಮೆ ಕೆರೆಗಳಿಗೆ ಈ ಜಲಾಶಯಗಳ ನೀರನ್ನು ಹರಿಸುವಲ್ಲಿ ಸರ್ಕಾರ ವಿಫಲವಾಗಿದೆ. ಕರ್ತವ್ಯ ಪ್ರಜ್ಞೆ ಕೊರತೆಯಿಂದ ರಾಜ್ಯ ಸರ್ಕಾರ ಕೃತಕ ಬರಗಾಲ ಸೃಷ್ಟಿಸಿದೆ ಎಂದು ಆರೋಪಿಸಿದರು.
ಕೃಷಿ, ಪ್ರಾಣಿ, ಪಕ್ಷಿ, ಮನುಷ್ಯನ ಜೀವನಾಧಾರವಾಗಿರುವ ನೀರಿನ ಸಮರ್ಪಕ ಬಳಕೆ ಮಾಡುವಲ್ಲಿ ಸರ್ಕಾರಗಳು ವಿಫಲವಾಗಿವೆ. ಒಂದೇ ರಾಜ್ಯದಲ್ಲಿ ಒಂದೆಡೆ ದಾಖಲೆ ಮಳೆ. ಇನ್ನೊಂದೆಡೆ ಬರ. ಇದೊಂದು ವಿಪರ್ಯಾಸ. ಬರಗಾಲವಿರುವ ಕಡೆ ಜಲಾಶಯಗಳಿಂದ ನೀರು ಹರಿಸಿ ಸಮಸ್ಯೆ ನೀಗಿಸಬಹುದಾಗಿದೆ. ಈ ಕುರಿತು ಸರ್ಕಾರ ಗಂಭೀರವಾಗಿ ಚಿಂತಿಸಬೇಕಿದೆ ಎಂದರು.
ಗೋರಕ್ಸಿಂಗ್ ವರದಿ ಜಾರಿಯಿಲ್ಲ: 2009 ರ ಗೋರಖ್ಸಿಂಗ್ ವರದಿಯನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿಲ್ಲ. ತೆಂಗು, ಅಡಿಕೆ ಬೆಳೆ ನಷ್ಟಕ್ಕೆ ಸಂಬಂಧಿಸಿದಂತೆ ನೀಡಿದ್ದ ಗೋರಖ್ ಸಿಂಗ್ ನೀಡಿದ್ದ ವರದಿಯನ್ನು ಏಕೆ ಜಾರಿಗೊಳಿಸಿಲ್ಲ. ಕೇಂದ್ರ ಸರ್ಕಾರ ಏನು ಮಾಡುತ್ತಿದೆ ಎಂದು ಗಂಗಾಧರ್ ಪ್ರಶ್ನಿಸಿದರು.
ಸಾಲ ವಸೂಲಾತಿ ಬೇಡ: ಬರಗಾಲ ಆವರಿಸಿರುವ 9 ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ರೈತರ ಸಾಲ ವಸೂಲಾತಿ ಮಾಡುವುದು ಬೇಡ. ಕೂಡಲೇ ಸರ್ಕಾರ ಸಾಲ ವಸೂಲಾತಿ ಬೇಡ ಎಂದು ಅಧಿಕಾರಿಗಳಿಗೆ ಆದೇಶ ನೀಡಬೇಕು ಎಂದು ಒತ್ತಾಯಿಸಿದರು.
ಟ್ರ್ಯಾಕ್ಟರ್ ಹರಾಜಿಗೆ ಹೈಕೋರ್ಟ್ ತಡೆ: ಟ್ರ್ಯಾಕ್ಟರ್ ಸಾಲ ನೀತಿಯೇ ಅವೈಜ್ಞಾನಿಕವಾಗಿದೆ. 2 -3 ಎಕರೆ ಇದ್ದವರಿಗೆಲ್ಲಾ ಟ್ರ್ಯಾಕ್ಟರ್ ಸಾಲ ನೀಡಲಾಗಿದೆ. ಬರ, ಮತ್ತಿತರೆ ಕಾರಣಗಳಿಂದಾಗಿ ಅದೇ ಟ್ರ್ಯಾಕ್ಟರ್ಗಳನ್ನು ನಿರ್ದಾಕ್ಷಿಣ್ಯವಾಗಿ ಬ್ಯಾಂಕ್ಗಳು ತಮ್ಮ ವಶಕ್ಕೆ ತೆಗೆದುಕೊಳ್ಳುತ್ತಿವೆ. ಪ್ರಶ್ನಿಸಿದಲ್ಲಿ ಪೊಲೀಸರಿಗೆ ಸಮಾಜ ವಿರೋಧಿ ಕೃತ್ಯ ಮಾಡಿದ್ದಾರೆ ಎಂದು ದೂರು ದಾಖಲಿಸಿ, ಕಿರುಕುಳ ನೀಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರೈತರ ಜೀವನಾಧಾರವಾಗಿರುವ ಎತ್ತುಗಳು, ಟ್ರ್ಯಾಕ್ಟರ್, ಟಿಲ್ಲರ್ ಸೇರಿದಂತೆ ಕೃಷಿ ಉಪಯೋಗಿ ವಸ್ತುಗಳ ವಶ, ಹರಾಜಿಗೆ ಸಂಬಂಧಿಸಿದಂತೆ 1984 ರಲ್ಲೇ ಹೈಕೋರ್ಟ್ ತಡೆ ನೀಡಿದೆ ಎಂಬುದು ಗಮನಾರ್ಹ. ಹೀಗಾಗಿ ಸಾಲ ವಸೂಲಾತಿ ಹೆಸರಿನಲ್ಲಿ ಟ್ರ್ಯಾಕ್ಟರ್ ಸೇರಿದಂತೆ ರೈತರ ಜೀವನೋಪಾಯದ ಯಾವುದೇ ವಸ್ತುಗಳನ್ನು ವಶಪಡಿಸಿಕೊಳ್ಳುವುದಾಗಲೀ, ಹರಾಜಾಕುವುದಾಗಲೀ ಯಾವುದೇ ಬ್ಯಾಂಕ್, ಅಥವಾ ವ್ಯಕ್ತಿಗಳು ಮಾಡಿದಲ್ಲಿ ಅಪರಾಧವಾಗುತ್ತದೆ. ಅದು ಸಂವಿಧಾನ ಬಾಹಿರ ಕೂಡ ಎಂದು ಎಚ್ಚರಿಕೆ ನೀಡಿದರು.
ಮರಳು ಮಾಫಿಯಾ: ತುಮಕೂರು ಜಿಲ್ಲೆಯಲ್ಲಿ ಮರಳು ಲೂಟಿ ನಿರಂತರವಾಗಿ ನಡೆದಿದೆ. ಮರಳು ಮಾಫಿಯಾ ಸಕ್ರಿಯವಾಗಿದೆ. ಕಾನೂನು ಸಡಿಲವಾಗಿರುವುದರಿಂದ ಮರಳು ಮಾಫಿಯಾಕ್ಕೆ ಅವಕಾಶವಾಗಿದೆ. ಮರಳು ಲೂಟಿ ಮಾಡುವವರ ವಿರುದ್ದ ಪ್ರತಿಭಟನೆ ಮಾಡಿದಲ್ಲಿ ಚಳುವಳಿಗಾರರನ್ನೇ ನಿಯಂತ್ರಿಸಲಾಗುತ್ತಿದೆ. ಮರಳು ನೀರಿನ ಸೆಲೆ. ಮರಳು ಜೋಪಾನ ಮಾಡದೇ ಇದ್ದರೆ, ಅಂತರ್ಜಲ ಕುಸಿದು, ವ್ಯವಸ್ಥೆ ಬುಡಮೇಲಾಗುತ್ತದೆ. ಅಂತರ್ಜಲ ಕಾಪಾಡುವ ಶಕ್ತಿಯುತ ಮರಳು ನೀತಿ ಜಾರಿ ಮಾಡುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಗಂಗಾಧರ್ ತಿಳಿಸಿದರು. ಶಿರಾದಲ್ಲಿ ಮರಳು ಲೂಟಿ ವಿರುದ್ದ ಶೀಘ್ರದಲ್ಲೇ ಪ್ರತಿಭಟನೆ ಮಾಡಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ತುಮಕೂರು ತಾಲೂಕು ರೈತ ಸಂಘದ ಕಾರ್ಯದರ್ಶಿ ಮೂಡಲಗಿರಿಯಪ್ಪ, ಗುಬ್ಬಿ ತಾಲೂಕು ರೈತ ಸಂಘದ ಕಾರ್ಯದರ್ಶಿ ವೆಂಕಟೇಗೌಡ ಇತರರು ಉಪಸ್ಥಿತರಿದ್ದರು.