ತಿಪಟೂರು: ದರೋಡೆಕೋರರ ಬಂಧನ
ತಿಪಟೂರು: ತಾಲೂಕಿನ ವಿವಿಧ ದೇವಾಲಯಗಳು ಹಾಗೂ ಮನೆಗಳ್ಳತನ ನಡೆಸಿದ್ದ ದರೋಡೆಕೋರರ ಗುಂಪನ್ನು ತಾಲೂಕು ಪೊಲೀಸರು ಪತ್ತೆ ಹಚ್ಚಿ ಲಕ್ಷಾಂತರ ರು. ಚಿನ್ನ ಹಾಗೂ ಬೆಳ್ಳಿಯನ್ನು ವಶಪಡಿಸಿಕೊಂಡಿದ್ದಾರೆ. ಕಳೆದ ಹಲವು ತಿಂಗಳುಗಳಿಂದ ತಾಲೂಕಿನ ಗುರುಗದಹಳ್ಳಿ, ರೇವಣ್ಣಸಿದ್ದೇಶ್ವರ ಬೆಟ್ಟ ಹಾಗೂ ಕೊಬ್ಬರಿದೊಡ್ಡಯ್ಯನಪಾಳ್ಯ ಮುಂತಾದ ದೇವಾಲಯಗಳ ಬೀಗ ಒಡೆದು ದೇವರ ಒಡವೆಗಳನ್ನು ಅಪಹರಿಸಲಾಗಿತ್ತು. ಇದೇ ರೀತಿ ತಾಲೂಕಿನ ವಿವಿಧ ಗ್ರಾಮಗಳು ಹಾಗೂ ನಗರದಲ್ಲಿ ಬೀಗ ಹಾಕಿದ್ದ ಮನೆಗಳನ್ನು ಗುರುತಿಸಿಕೊಂಡು, ಈ ಕಳ್ಳರು ಬೀಗ ಒಡೆದು ನಗದು ಹಾಗೂ ಬಂಗಾರ, ಬೆಳ್ಳಿಯಂತಹ ಬೆಲೆ ಬಾಳುವ ವಸ್ತುಗಳನ್ನು ದರೋಡೆ ಮಾಡಲಾಗುತ್ತಿದ್ದು, ಸಾರ್ವಜನಿಕರಿಗೆ ಹಾಗೂ ಪೊಲೀಸಿನವರಿಗೂ ತಲೆ ನೋವಾಗಿತ್ತು.
ಈ ಪ್ರಕರಣಗಳ ಬಗ್ಗೆ ಪೊಲೀಸಿನವರು ಪತ್ತೆ ಕಾರ್ಯ ಚುರುಕುಗೊಳಿಸಿದ್ದರಿಂದ ತಾಲ್ಲೂಕಿನ ಸಾರ್ಥವಳ್ಳಿಯ ಹರೀಶ, ಗೆಡ್ಡೆ ಮಂಜ, ರಕ್ಷಿತಾ, ಮೋಹನ, ಶಿವಮೊಗ್ಗದ ಪ್ರದೀಪ, ಚಿ.ನಾ.ಹಳ್ಳಿ ತಾಲೂಕಿನ ಹುಳಿಯಾರು ಬಳಿಯ ಗೋಪಾಲಪುರದ ಮಾರುತಿ ಮತ್ತು ಇವರು ಕದ್ದ ಮಾಲನ್ನು ಕರಗಿಸಿ ಕೊಳ್ಳುತ್ತಿದ್ದ ನಗರದ ಹುಂಡಿ ನಾಗರಾಜು ಎಂಬುವವರನ್ನು ಬಂಧಿಸಿ ಇವರಿಂದ ಸುಮಾರು 7-8 ಲಕ್ಷ ರು.ಗಳ ಚಿನ್ನ ಹಾಗೂ 4ಕೆಜಿ ಬೆಳ್ಳಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಇವರೆಲ್ಲಾ ಸಾಕಷ್ಟು ಪ್ರಕರಣಗಳಿಗೆ ಬೇಕಾಗಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ದರೋಡೆಕೋರರು ಗಂಡಿಸಿ, ಅರಸೀಕೆರೆ ಪೊಲೀಸ್ ವ್ಯಾಪ್ತಿಯಲ್ಲೂ ಕಳ್ಳತನಗಳನ್ನು ಮಾಡುತ್ತಿದ್ದಾರೆಂದು ತಿಳಿದು ಬಂದಿದೆ.