ದೈಹಿಕ, ಮಾನಸಿಕ ಸಾಮರ್ಥ್ಯ ವೃದ್ಧಿಗೆ ಕ್ರೀಡೆ ಸಹಕಾರಿ: ಶಾಸಕ
ಮಧುಗಿರಿ: ಮನುಷ್ಯನ ದೈಹಿಕ ಹಾಗೂ ಮಾನಸಿಕ ಸಾಮರ್ಥ್ಯ ವೃದ್ಧಿಗೆ ಕ್ರೀಡೆಗಳು ಅತ್ಯಂತ ಸಹಕಾರಿ ಎಂದು ಶಾಸಕ ಕೆ.ಎನ್.ರಾಜಣ್ಣ ತಿಳಿಸಿದರು.
ಇಲ್ಲಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಪಪೂ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಚಿಕ್ಕ ವಯಸ್ಸಿನಲ್ಲಿಯೇ ಶಿಕ್ಷಣ ಕಲಿಯುವ ಜೊತೆಗೆ ಆಟೋಟಗಳಲ್ಲಿ ಭಾಗವಹಿಸಿ ತಮ್ಮ ದೇಹ ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಬೇಕು. ಕ್ರೀಡೆ ಮನುಷ್ಯನಿಗೆ ಒಂದು ಅವಿಭಾಜ್ಯ ಅಂಗ, ಕ್ರೀಡೆಗಳಲ್ಲಿ ಪಾಲ್ಗೊಳ್ಳುವುದರಿಂದ ಸ್ನೇಹ, ಪ್ರೀತಿ, ವಿಶ್ವಾಸ ಬೆಳೆಯುವುದಲ್ಲದೆ ಮನಸುಗಳು ಗಟ್ಟಿಯಾಗಿ ದೇಶ, ವಿದೇಶಗಳ ಸಂಬಂಧಗಳು ಕೂಡ ಬಲಿಷ್ಠಗೊಂಡು ದೇಶದ ಪ್ರಗತಿಗೆ ಕ್ರೀಡೆಗಳು ಸಹಕಾರಿಯಾಗುತ್ತವೆ. ಕ್ರೀಡಾಳುಗಳು ಸೋಲು-ಗೆಲವಿನ ಬಗ್ಗೆ ಚಿಂತಿಸದೇ ಕ್ರೀಡಾ ಮನೋಭಾವನೆಯಿಂದ ಆಡಬೇಕು ಎಂದರು.
ತುಮಕೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಉಪಾಧ್ಯಕ್ಷ ಕೊಂಡವಾಡಿ ಚಂದ್ರಶೇಖರ್ ಗ್ರಾಮೀಣ ಕ್ರೀಡಾಳುಗಳು ಪ್ರೋತ್ಸಾಹದ ಕೊರತೆಯಿಂದಾಗಿ ಹಿಂದೆ ಬಿದ್ದಿದ್ದಾರೆ. ನಗರ ಪ್ರದೇಶಗಳಿಗಿಂತ ಗ್ರಾಮಾಂತರ ಪ್ರದೇಶದಲ್ಲಿ ಮಕ್ಕಳಲ್ಲಿ ಪ್ರತಿಭಾವಂತರಿದ್ದು ಅಂತಹ ಪ್ರತಿಭೆಗಳನ್ನು ಗುರುತಿಸಿ ಪ್ರೊತ್ಸಾಹಿಸುವ ಕಾರ್ಯವಾಗಬೇಕು ಎಂದರು.