ಕ್ರೀಡಾ ಕ್ಷೇತ್ರಕ್ಕೆ ಉಜ್ವಲ ಭವಿಷ್ಯ: ಶಿಕ್ಷಕ ಜಯಣ್ಣ
ಹಾಸನ: ಕ್ರೀಡೆ ಬಗೆಗಿನ ಪ್ರೀತಿ ಕೇವಲ ಭಾಷಣದ ಮಾತುಗಳಾಗದೆ ಅದು ಪ್ರತಿಯೊಬ್ಬ ಮನುಷ್ಯನ ಪ್ರವೃತ್ತಿ ಯಾಗಬೇಕು ಎಂದು ಸರ್ಕಾರಿ ಪ್ರೌಢ ಶಾಲೆಯ ದೈಹಿಕ ಶಿಕ್ಷಕ ಜಯಣ್ಣ ಅಭಿಪ್ರಾಯಪಟ್ಟರು.
ಅವರು ಮೊಸಳೆ ಹೊಸಹಳ್ಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಕ್ರೀಡಾದಿನ ಹಾಗೂ ಹಾಕಿ ಮಾಂತ್ರಿಕ ಮೇಜರ್ ಧ್ಯಾನ್ಚಂದ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಕ್ರೀಡೆ ಮನುಷ್ಯನಿಗೆ ಸಂತೋಷ, ಉತ್ಸಾಹ, ಆರೋಗ್ಯ ನೀಡುತ್ತದೆ. ಇದು ಕೇವಲ ದೈಹಿಕ ಆರೋಗ್ಯ ಮಾತ್ರವಲ್ಲ, ಮಾನಸಿಕ ಆರೋಗ್ಯವನ್ನೂ ವೃದ್ಧಿಸುತ್ತದೆ. ಜೊತೆಗೆ ಸಂಸ್ಕೃತಿ ಸಂಸ್ಕಾರಗಳನ್ನು ಸಹ ಬೆಳೆ ಸುತ್ತದೆ. ಕ್ರೀಡಾ ಕ್ಷೇತ್ರಕ್ಕೆ ಉಜ್ವಲ ಭವಿಷ್ಯವಿದೆ. ಹಾಕಿ ಕ್ಷೇತ್ರದ ಅಮರ ತಾರೆ ಧ್ಯಾನ್ ಚಂದ್ ನೆನಪಿನಲ್ಲಿ ಆಚರಿಸುವ ಈ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಸಾರ್ಥಕವಾಗ ಬೇಕಾದರೆ, ವಿದ್ಯಾರ್ಥಿಗಳು ತಮ್ಮನ್ನು ನಿಯತವಾಗಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹೇಳಿದರು.
ಡಾ.ಡಿ.ಶ್ರೀನಿವಾಸ ಮಾತನಾಡಿ, ಬದ್ಧತೆ, ಕ್ರೀಡಾ ಪ್ರೀತಿ, ಕೌಶಲ್ಯ ಜೊತೆಗೆ ಅಪಾರ ರಾಷ್ಟ್ರಪ್ರೇಮವನ್ನು ಬೆಳೆಸಿಕೊಂಡ, ಈ ದೇಶ ಕಂಡ ಮಹಾನ್ ಹಾಕಿ ಪಟು ಧ್ಯಾನ್ಚಂದ್ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಎಂ.ಪಿ.ಗೋಪಾಲ್ ಮಾತನಾಡಿ, ಧ್ಯಾನ್ಚಂದ್ ಹುಟ್ಟಿದ ದೇಶದಲ್ಲಿ ನಾವು ಹುಟ್ಟಿದ್ದೇವೆ ಎಂಬುದೇ ಗೌರವದ ಸಂಗತಿ. ಕೌಶಲಕ್ಕೆ ಮತ್ತೊಂದು ಹೆಸರೇ ಧ್ಯಾನ್ಚಂದ್ ಎಂದು
ತಿಳಿಸಿದರು.
ವಿದ್ಯಾರ್ಥಿಗಳ ನಾಡಗೀತೆಯಿಂದ ಕಾರ್ಯಕ್ರಮ ಆರಂಭವಾಯಿತು. ಅರ್ಥಶಾಸ್ತ್ರ ವಿಭಾಗದ ಎಂ.ಮಾದೇಗೌಡ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ರಾಂಪ್ರಿಯ ವಂದಿಸಿದರು. ಇತಿಹಾಸ ವಿಭಾಗದ ರಾಮಚಂದ್ರ ನಿರೂಪಿಸಿದರು.
ಆತ್ಮರಕ್ಷಣಾ ಕಲೆ
ಟೆಕ್ವಾಂಡೊ ಉಚಿತ ತರಬೇತಿ
ಜಾವಗಲ್: ಪ್ರೌಢಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಆತ್ಮರಕ್ಷಣಾ ಟೆಕ್ವಾಂಡೊ ಕಲೆ ಹೆಚ್ಚು ಉಪಯುಕ್ತವಾಗಿದೆ ಎಂದು ಜಿಪಂ ಸದಸ್ಯ ಈ. ಎಚ್. ಲಕ್ಷ್ಮಣ್ ಹೇಳಿದರು.
ಪಟ್ಟಣದಲ್ಲಿ ಆತ್ಮರಕ್ಷಣಾ ಟೆಕ್ವಾಂಡೊ ಕಲೆ ತರಬೇತಿ ಸಂಸ್ಥೆ ಹಾಸನ ಮತ್ತು ಜಾವಗಲ್ ಬನಶಂಕರಿ ಮಹಿಳಾ ಸಂಘಗಳ ಆಶ್ರಯದಲ್ಲಿ ಟೆಕ್ವಾಂಡೊ ತರಬೇತಿ ಶಾಲೆ ಉದ್ಘಾಟಿಸಿ ಮಾತನಾಡಿದರು.
ತಾಪಂ ಸದಸ್ಯೆ ಲಕ್ಷ್ಮೀರವಿಶಂಕರ್ ಮಾತನಾಡಿ, ಬನಶಂಕರಿ ಮಹಿಳಾ ಸಂಘ ಸಂಗೀತ, ನೃತ್ಯ, ಹೊಲಿಗೆ ತರಬೇತಿಯಂತಹ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉತ್ತಮ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಗ್ರಾಪಂ ಅಧ್ಯಕ್ಷೆ ಕವಿತಮಂಜುನಾಥ್, ಹಿರಿಯ ಶಿಕ್ಷಕ ದಾನೇಗೌಡ, ಬನಶಂಕರಿ ಮಹಿಳಾ ಸಂಘದ ಅಧ್ಯಕ್ಷೆ ಶಾಂತಮ್ಮ, ಮುಖ್ಯ ತರಬೇತಿದಾರ ಟಿ.ಎಸ್. ಗಿರೀಶ್, ಗ್ರಾಪಂ ಸದಸ್ಯ ರಮೇಶ್, ಟೆಕ್ವಾಂಡೊ ರಾಷ್ಟ್ರೀಯ ಪ್ರಶಸ್ತಿ ವಿಜೇತೆ ನಿರೀಕ್ಷಾ ಮಾತನಾಡಿದರು.
ಗ್ರಾಪಂ ಸದಸ್ಯ ಪ್ರಭಾಕರ್, ಮಕ್ಕಳ ಮನೆ ಅಧ್ಯಕ್ಷ ಶ್ರೀನಿವಾಸ್, ಕರಿಯಮ್ಮ ಸಂಘದ ಅಧ್ಯಕ್ಷೆ ಅನಿತ, ಗೀತಾ, ಬನಶಂಕರಿ ಮಹಿಳಾ ಸಂಘದ ನಿರ್ದೇಶಕಿ ಚಿಂತಾಮಣಿ ನಾಗರಾಜು, ನೃತ್ಯ ಶಾಲೆ ಶಿಕ್ಷಕ ಧರ್ಮೇಂದ್ರ ಇದ್ದರು.
ರೈಲಿಗೆ ಸಿಲುಕಿ ಬಾಲಕ ಸಾವು
ಹಾಸನ: ರೈಲಿಗೆ ಸಿಲುಕಿ ಬಾಲಕನೊಬ್ಬ ಮೃತಪಟ್ಟಿರುವ ಘಟನೆ ಪಟ್ಟಣದ ಸಮೀಪ ಬುಧವಾರ ನಡೆದಿದೆ. ತಾಲೂಕಿನ ಕಬ್ಬಿನಹಳ್ಳಿಯ ಪ್ರಕಾಶ್ ಎಂಬುವರ ಮನೋಜ್ (14) ಎಂಬಾತನೇ ಮೃತಪಟ್ಟ ದುರ್ದೈವಿ. ಮಂಗಳವಾರ ರಾತ್ರಿ ಮೊಬೈಲ್ ಕರೆನ್ಸಿ ತರಲು ಹೋದವ ಮತ್ತೆ ಬರಲಿಲ್ಲ. ಸಮೀಪದ ರೇಲ್ವೆ ಹಳಿ ಮೇಲೆ ಬಾಲಕನ ದೇಹ ತುಂಡಾಗಿ ಬಿದ್ದಿತ್ತು. ತಾಯಿಯನ್ನು ಕಳೆದುಕೊಂಡಿರುವ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಆತ ದೊಡ್ಡಮ್ಮನ ಮನೆಯಲ್ಲಿ ವಾಸವಾಗಿದ್ದ. ತಂದೆ ಪ್ರಕಾಶ್ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ರೇಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.