ತುಮಕೂರು ವಿವಿ ಚೆಸ್ ಪಂದ್ಯಾವಳಿಗೆ ಚಾಲನೆ
ತುಮಕೂರು: ತುಮಕೂರು ವಿಶ್ವವಿದ್ಯಾನಿಲಯ ಮಟ್ಟದ ಎರಡು ದಿನಗಳ ಅಂತರ್ ಕಾಲೇಜು ಚೆಸ್ ಪಂದ್ಯಾವಳಿಯು ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಆಶ್ರಯದಲ್ಲಿ ಆರಂಭಗೊಂಡಿತು.
ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಪ್ರಾಂಶುಪಾಲ ಟಿ.ಎನ್. ಹರಿಪ್ರಸಾದ್, ವಿದ್ಯಾರ್ಥಿಗಳು ಜೀವನದಲ್ಲಿ ಕ್ರೀಡಾಸ್ಫೂರ್ತಿಅಳವಡಿಸಿಕೊಳ್ಳುವ ಮೂಲಕ ಉಜ್ವಲ ಭವಿಷ್ಯವನ್ನು ಕಾಣಬಹುದು ಎಂದರು. ಸ್ಪರ್ಧೆ ಜೀವನದ ಅವಿಭಾಜ್ಯ ಅಂಗ. ಆದರೆ ಅದರ ಫಲಿತಾಂಶವನ್ನು ಮೊದಲೇ ಊಹಿಸುವುದು ಕಷ್ಟ. ಕ್ರೀಡಾಸ್ಫೂರ್ತಿ ಬೆಳೆಸಿಕೊಂಡಾಗ ಮಾತ್ರ ಫಲಿತಾಂಶದ ಬಗ್ಗೆ ಆತಂಕವಿಲ್ಲದೆ ಸ್ಪರ್ಧೆಯಲ್ಲಿ ಭಾಗವಹಿಸುವುದು ಸಾಧ್ಯ ಎಂದರು.
ಕ್ರೀಡೆಯಿಂದ ಸದೃಢ ದೇಹದಲ್ಲಿ ಸದೃಢ ಮನಸ್ಸನ್ನು ಸ್ಥಾಪಿಸಿಕೊಳ್ಳಬಹುದು. ಅದರಲ್ಲೂ ಚದುರಂಗದಂತಹ ಕ್ರೀಡೆಗಳು ಯುವ ಮನಸ್ಸುಗಳನ್ನು ಜಾಗೃತಗೊಳಿಸಿ ಬುದ್ಧಿಶಕ್ತಿ ಚುರುಕಾಗಿಸುತ್ತವೆ ಎಂದರು.
ಪಂದ್ಯದಲ್ಲಿ ತುಮಕೂರು ವಿವಿ ವ್ಯಾಪ್ತಿಯ 25 ಕಾಲೇಜುಗಳ ಸುಮಾರು 80 ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದರು.
ಪಂದ್ಯದ ಆಯೋಜಕ ಸಹಾಯಕ ದೈಹಿಕ ಶಿಕ್ಷಣ ನಿರ್ದೇಶಕ ಸುದೀಪ್ ಕುಮಾರ್ ಆರ್., ಹಿರಿಯ ದೈಹಿಕ ಶಿಕ್ಷಣ ನಿರ್ದೇಶಕರಾದ ರಾಮ ನಾಯಕ್, ರಾಜಶೇಖರ್ ಹಾಗೂ ಡಾ. ಎ. ಎಂ. ಮಂಜುನಾಥ್ ಉಪಸ್ಥಿತರಿದ್ದರು.