ಶೋಷಿತರ ಭೂ ಪರಭಾರೆ ತಡೆ ಕಾಯ್ದೆ ಜಾರಿಯಾಗಲಿ
ಕ.ಪ್ರ.ವಾರ್ತೆ ತುಮಕೂರು ಸೆ. 4
ದಲಿತರ, ಬಡಜನತೆಯ ಭೂಮಿ ಶಾಶ್ವತವಾಗಿ ಪರಭಾರೆಯಾಗದ ರೀತಿ ಕಾನೂನು ರೂಪಿಸುವುದೊಂದೇ ಸದ್ಯ ಇರುವ ಏಕೈಕ ಮಾರ್ಗ. ಹೀಗಾದಲ್ಲಿ ಮಾತ್ರ ಅವರ ಭೂಮಿ ಉಳಿಸಲು ಸಾಧ್ಯ ಎಂದು ನಿಡುಮಾಮಿಡಿ ಪೀಠಾಧ್ಯಕ್ಷ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಬಲವಾಗಿ ಪ್ರತಿಪಾದಿಸಿದರು.
ಅವರು ತುಮಕೂರಿನಲ್ಲಿ ಏರ್ಪಾಟಾಗಿದ್ದ ದಲಿತರ ಹಾಗೂ ಬಡವರ ಭೂಮಿ ಸಂರಕ್ಷಣಾ ಸಮಾರಂಭ ಹಾಗೂ ಭೂಮಿ ನಮ್ಮ ಹಕ್ಕು ಪುಸ್ತಕ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ದಲಿತರಿಗೆ, ಬಡಜನತೆಗೆ ಜೀವನೋಪಾಯಕ್ಕಾಗಿ ನೀಡಿದ ಉಚಿತ ಭೂಮಿಯ ಫಲವನ್ನು ಅವರೇ ಅನುಭವಿಸಬೇಕು. ಯಾವುದೇ ಕಾರಣಕ್ಕೂ ಪರಭಾರೆಯಾಗಬಾರದು. ತುಂಡಾಗಬಾರದು. ಹೀಗಾದಲ್ಲಿ ಮಾತ್ರ ದಲಿತರು, ಬಡಜನರು ಬೀದಿಪಾಲಾಗುವುದು ತಪ್ಪುತ್ತದೆ ಹಾಗೂ ಅವರ ಭೂಮಿಯೂ ಉಳಿಯುತ್ತದೆ ಎಂದು ಮಾರ್ಮಿಕವಾಗಿ ನುಡಿದರು.
ಜಾಗ ವಾಪಸ್ ಪಡೆಯಲಿ: ಈಗಾಗಲೇ ಶ್ರೀಮಂತರು, ಅಧಿಕಾರಸ್ಥರು, ಭೂ ಮಾಫಿಯಾ ಕಬಳಿಸಿರುವ ಸರ್ಕಾರಿ ಜಾಗ, ದಲಿತರ, ಬಡವರ ಜಾಗ ವಾಪಸ್ ಪಡೆಯಲು ಸರ್ಕಾರಕ್ಕೆ ಧೈರ್ಯ ಬೇಕು. ಸರ್ಕಾರ ಕೂಡ ಆ ದಿಕ್ಕಿನಲ್ಲಿದೆ. ಕಂದಾಯ ಸಚಿವರು ದಲಿತರು. ಅವರಿಗೆ ಅಂತ-ಕರಣವಿದೆ. ಆದರೆ ಸರ್ಕಾರಕ್ಕೆ ಕೂಡ ಮಿತಿಗಳಿವೆ. ಸಮಸ್ಯೆಗಳಿವೆ ಎಂಬುದನ್ನು ಅರಿತೇ ಮೇಲಿನ ಮಾತುಗಳನ್ನಾಡಿದ್ದೇನೆ ಎಂದು ವೀರಭದ್ರ ಚೆನ್ನಮಲ್ಲ ಸ್ವಾಮೀಜಿ ಮಾರ್ಮಿಕವಾಗಿ ನುಡಿದರು.
ಸಾಮಾಜಿಕ ನ್ಯಾಯವಿಲ್ಲದೆ ಸಮಾನತೆ ಅಸಾಧ್ಯ: ಎಲ್ಲ ಸಮುದಾಯದ ಬಡವರಿಗೆ ಭೂಮಿಯೊಂದೇ ಆಧಾರ. ಅವಕಾಶ ವಂಚಿತ ಜನತೆಗೆ ಭೂಮಿಯೇ ಸಂಪತ್ತು. ಭೂಮಿ ಪ್ರಕೃತಿಯ ಮಹತ್ವದ ಭಾಗ. ಭೂಮಿಯ ವಿವಿಧ ಸಂಪತ್ತುಗಳ ಮೇಲೆ ಅಧಿಕಾರ ಎಲ್ಲರ ಸಮಾನ ಹಕ್ಕು. ಆದರೆ ಕೆಲವೇ ಜನ ಅಧಿಕಾರ ಸ್ಥಾಪಿಸಿ, ಬಹುಜನತೆಗೆ ವಂಚಿಸಿರುವುದನ್ನು ನಾವು ನೋಡುತ್ತಿದ್ದೇವೆ. ಸಂಪತ್ತಿನ ಕೇಂದ್ರೀಕರಣವಾಗದಂತೆ ಲೋಕಾಯತರು, ಶ್ರಮಣರು, ವಚನಕಾರರು, ಗಾಂಧಿ, ಅಂಬೇಡ್ಕರ್, ಲೋಹಿಯಾ ನಿರಂತರವಾಗಿ ಹೋರಾಟ ಮಾಡಿದರು. ಆದರೆ ಈಗಲೂ ಹಿಂದಿನವರ ಹೋರಾಟದ ಅಗತ್ಯವಿದೆ. ಸಂಪತ್ತು, ಭೂಮಿ ಕೆಲವೇ ಜನರ ಕೈವಶವಾಗಿದೆ. ಪ್ರಜಾಪ್ರಭುತ್ವದಲ್ಲಿ ಬಹುಸಂಖ್ಯಾತರ ಆಶಯಕ್ಕೆ ಬೆಲೆ ಸಿಗಲಿ. ಬಡವರ, ದಲಿತರ ದುಡಿಮೆಗೆ ಪ್ರತಿಫಲ ಸಿಗಲಿ. ಸರ್ಕಾರದ ಧರ್ಮ ಪ್ರಜಾಸತ್ತೆಯ ಧರ್ಮವಾಗಿರಲಿ. ಸಾಮಾಜಿಕ ನ್ಯಾಯ ಇಲ್ಲದೆ ಸಮಾನತೆ ಸಾಧ್ಯವಿಲ್ಲ. ಅವಕಾಶವಂಚಿತರೆಲ್ಲರೂ ಮುಖ್ಯವಾಹಿನಿಗೆ ಬರಲು ಭೂಮಿ ಬಹಳ ಮುಖ್ಯ ಎಂಬುದು ಗಮನಾರ್ಹ ಎಂದರು.
5 ಎಕರೆಗೆ ಒತ್ತಾಯ: ಈ ಸಮಾವೇಶದಲ್ಲಿ ಪ್ರತಿ ದಲಿತ, ಬಡವರ ಕುಟುಂಬಕ್ಕೆ 5 ಎಕರೆ ಭೂಮಿ ನೀಡುವಂತೆ ಒತ್ತಾಯಿಸಲಾಗಿದೆ. ಅಕ್ರಮ ಸಾಗುವಳಿ ಮಾಡಿರುವ ಬಡವರು ಜೀವನೋಪಾಯಕ್ಕಾಗಿ ಮಾಡಿರುವವರೇ ಎಂಬುದು ಗಮನಾರ್ಹ. ಆದರೆ ಕಾಫಿ, ಅಡಿಕೆ ಸೇರಿದಂತೆ ವಾಣಿಜ್ಯ ಬೆಳೆ ಬೆಳೆಯುವ ಶ್ರೀಮಂತರ ಭೂಮಿ ಕೆಲ ವರ್ಷಗಳಲ್ಲೇ ದ್ವಿಗುಣವಾಗಿರುತ್ತದೆ. ಅದು ಖಚಿತವಾಗಿ ಸರ್ಕಾರಿ ಭೂಮಿ ಒತ್ತುವರಿಯೇ ಆಗಿರುತ್ತದೆ. ಇದಕ್ಕೆ ಸಾಕಷ್ಟು ಉದಾಹರಣೆಗಳಿವೆ ಎಂದರು.
ಸಮಾರಂಭದಲ್ಲಿ ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್, ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವ ಟಿ.ಬಿ. ಜಯಚಂದ್ರ, ಭೂ ಶಕ್ತಿ ಕೇಂದ್ರದ ಸಂಸ್ಥಾಪಕ ಎಂ.ಸಿ. ರಾಜ್, ಜ್ಯೋತಿ, ಜಿಪಂ ಅಧ್ಯಕ್ಷೆ ಪ್ರೇಮಾ ಮಹಾಲಿಂಗಪ್ಪ, ವಿಧಾನಪರಿಷತ್ ಸದಸ್ಯ ಡಾ.ಎಂ.ಆರ್. ಹುಲಿನಾಯ್ಕರ್, ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ರೆಡ್ಸ್ ಸಂಸ್ಥೆಯ ಅಧ್ಯಕ್ಷ ಎ.ಜಿ. ಸುಧಾಕರ್ ಇತರರು ಉಪಸ್ಥಿತರಿದ್ದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ದಲಿತರು ಆಗಮಿಸಿದ್ದರು. ಇದೇ ವೇಳೆ ದಲಿತರ, ಬಡವರ 5 ಲಕ್ಷ ಸಹಿ ಸಂಗ್ರಹದ ಬೈಂಡ್ ಮಾಡಿಸಿದ 42 ಬೃಹತ್ ಪುಸ್ತಕಗಳನ್ನು ಭೂಮಿ ನೀಡುವಂತೆ ಮನವಿ ರೂಪದಲ್ಲಿ ಕಂದಾಯ ಸಚಿವರಿಗೆ ಸಲ್ಲಿಸಲಾಯಿತು.