ಹೋಬಳಿ ಮಟ್ಟದಲ್ಲೂ ಜನಸಂಪರ್ಕ ಸಭೆ
ಮಧುಗಿರಿ: ತಾಲೂಕಿನ ಜನತೆ ಬರಗಾಲಕ್ಕೆ ತುತ್ತಾಗಿ ತತ್ತರಿಸುತ್ತಿರುವ ಈ ಸಂದರ್ಭದಲ್ಲಿ ಬಡವರ, ಕೂಲಿಕಾರ್ಮಿಕರ ಹಾಗೂ ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಜನಸಂಪರ್ಕ ಸಭೆ ಹಮ್ಮಿಕೊಂಡಿರುವುದು ವರದಾನ ಎಂದು ಶಾಸಕ ಕೆ.ಎನ್.ರಾಜಣ್ಣ ಅಭಿಪ್ರಾಯಪಟ್ಟರು. ತಾಲೂಕಿನ ಕೊಡಿಗೇನಹಳ್ಳಿಯಲ್ಲಿ ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯಿತಿ ಆಯೋಜಿಸಿದ್ದ ಜನಸಂಪರ್ಕ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಎಲ್ಲ ಹೋಬಳಿ ಕೇಂದ್ರಗಳಲ್ಲಿ ಸಭೆ ನಡೆಸಿ ಜನರ ಅಹವಾಲು ಸ್ವೀಕರಿಸಿ ಸಮಸ್ಯಗಳಿಗೆ ಪರಿಹಾರ ದೊರಕಿಸಿ ಕೊಡಲಾಗುವುದು ಎಂದರು. ಜಿ.ಪಂ.ಸದಸ್ಯೆ ಶಾಂತಲಾ ರಾಜಣ್ಣ, ಎಚ್.ಕೆಂಚಮಾರಯ್ಯ, ಮಂಜುಳಾ ವೀರೇಂದ್ರ ಪ್ರಸಾದ್, ಅಪರ ಜಿಲ್ಲಾಧಿಕಾರಿ ಪೆದ್ದಪ್ಪಯ್ಯ, ತಾ.ಪಂ.ಅಧ್ಯಕ್ಷೆ ಯಶೋಧ ರಾಜಣ್ಣ, ಉಪಾಧ್ಯಕ್ಷೆ ಸಿದ್ಧಾಗಂಗಾಂಭಿಕೆ, ತಾ.ಪಂ.ಇಓ ಮಹಾಲಿಂಗಯ್ಯ, ತಾ.ಪಂ.ಸದಸ್ಯರಾದ ಮಂಜುಳ, ಶಾಂತಮ್ಮ ಇದ್ದರು.
ಇಂದು ಶಿಕ್ಷಕರ
ದಿನಾಚರಣೆ
ಮಧುಗಿರಿ: ಸಾರ್ವಜನಿಕ ಶಿಕ್ಷಣ ಇಲಾಖೆ ಮಧುಗಿರಿ ಶೈಕ್ಷಣಿಕ ಜಿಲ್ಲೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ ಮಧುಗಿರಿ ತಾಲೂಕು ವತಿಯಿಂದ ಸೆ.5 ರಂದು ಬೆಳಿಗ್ಗೆ 10 ಗಂಟೆಗೆ ಪಟ್ಟಣದ ಮಾಲೀ ಮರಿಯಪ್ಪ ರಂಗಮಂದಿರದಲ್ಲಿ 2013-14ನೇ ಸಾಲಿನ ಶಿಕ್ಷಕರ ದಿನಾಚರಣೆ ಮತ್ತು ಅಭಿನಂದನಾ ಸಮಾರಂಭ ಏರ್ಪಡಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ.
ಪಿಂಚಣಿ ಅದಾಲತ್
ಶಿರಾ: ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಹೋಬಳಿ ಮಟ್ಟದಲ್ಲಿ ಪಿಂಚಣಿ ಅದಾಲತ್ ಅನ್ನು ಸೆ.5 ಗುರುವಾರ ಬೆಳಗ್ಗೆ 10 ರಿಂದ 1 ಗಂಟೆ ವರೆಗೆ ಕಸಬಾ ಹೋಬಳಿಗೆ ಸಂಬಂಧಿಸಿದ ಪಿಂಚಣಿ ಅದಾಲತ್ ಕಾರ್ಯಕ್ರಮವನ್ನು ಇಲ್ಲಿನ ಅಂಬೇಡ್ಕರ್ ಭವನದಲ್ಲಿ ಹಾಗೂ ಮಧ್ಯಾಹ್ನ 2 ಗಂಟೆಯಿಂದ ಸಂಜೆ ಗಂಟೆವರೆಗೆ ಕಳ್ಳಂಬೆಳ್ಳ ಹೋಬಳಿಯ ನಾಡ ಕಚೇರಿ ಆವರಣದಲ್ಲಿ ನಡೆಸಲು ಸಮಯವನ್ನು ನಿಗಧಿಪಡಿಸಲಾಗಿದೆ ಸಾರ್ವಜನಿಕರು ಇದರ ಉಪಯೋಗಪಡೆದುಕೊಳ್ಳಬೇಕೆಂದು ತಾಲೂಕು ದಂಡಾಧಿಕಾರಿ ಚಂದ್ರಶೇಖರಯ್ಯ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಶಿಕ್ಷಕರಿಗೆ ಸನ್ಮಾನ
ಶಿರಾ: ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಸೆ.5 ರಂದು ಡಾ. ಸರ್ವಪಲ್ಲಿ ರಾಧಕೃಷ್ಣನ್ 126ನೇ ಜಯಂತಿ ಮತ್ತು ಶಿಕ್ಷಕರ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದ್ದಾರೆ. ಪಟ್ಟಣದ ಬಾಲಾಜಿ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಿರುವ ಸದರಿ ಸಮಾರಂಭದ ಅಧ್ಯಕ್ಷತೆಯನ್ನು ಸಚಿವ ಟಿ.ಬಿ.ಜಯಚಂದ್ರ ವಹಿಸಲಿದ್ದು, ಶಾಸಕ ಸಿ.ಬಿ.ಸುರೇಶ್ಬಾಬು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ತಾ.ಪಂ. ಅಧ್ಯಕ್ಷೆ ಗಂಗಮ್ಮ ಸಿದ್ದಹನುಮಯ್ಯ ಮತ್ತಿತರರು ಹಾಜರಿರುವರು