ಎಲ್ಲಾ ಗ್ರಾಮಗಳಲ್ಲೂ ಕುಡಿವ ನೀರು ಪೂರೈಕೆ ಅಗತ್ಯ
ಕ.ಪ್ರ.ವಾರ್ತೆ ಕುಣಿಗಲ್ ಸೆ. 5
ಎಲ್ಲಾ ಗ್ರಾಮಗಳಲ್ಲೂ ಉತ್ತಮ ಕುಡಿಯುವ ನೀರು ಪೂರೈಕೆ ಮಾಡುವುದರ ಜೊತೆಯಲ್ಲಿ ವೈಜ್ಞಾನಿಕವಾಗಿ ಘನ ತ್ಯಾಜ್ಯ ವಿಲೆವಾರಿಗೆ ಕಟ್ಟುನಿಟ್ಟಿನ ಕ್ರಮಕೈಗೊಂಡಾಗ ಮಾತ್ರ ಸದೃಢ, ಸಶಕ್ತ ಭಾರತ ರಾಷ್ಟ್ರ ನಿರ್ಮಾಣ ಮಾಡಲು ಸಾಧ್ಯ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈ ವಿಷಯಗಳಿಗೆ ಹೆಚ್ಚಿನ ಒತ್ತು ನೀಡುವುದು ಅತ್ಯವಶ್ಯ ಎಂದು ತುಮಕೂರು ವಿವಿ ಕುಲಪತಿ ಎ.ಎಚ್.ರಾಜಾಸಾಬ್ ಅಭಿಪ್ರಾಯಪಟ್ಟರು.
ಗುರುವಾರ, ಪಟ್ಟಣದ ಜ್ಞಾನಭಾರತಿ ಪ.ಪೂ.ಕಾಲೇಜಿನಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರೋತ್ಸಾಹಕ ಸೊಸೈಟಿ ಬೆಂಗಳೂರು, ಅಸೋಸಿಯೇಷನ್ ಫಾರ್ ಸೈನ್ಸ್, ವಿಜ್ಞಾನ ಕೇಂದ್ರ ತುಮಕೂರು ಮತ್ತು ಪದವಿ ಪೂರ್ವ ಶಿಕ್ಷಣ ಇಲಾಖೆ ಸಂಯುಕ್ತಾಶ್ರಯದಲ್ಲಿ ವಿಶೇಷ ಅಭಿವೃದ್ಧಿ ಯೋಜನೆಯಡಿ ಪ.ಪೂ.ಶಿಕ್ಷಣ ವಿದ್ಯಾರ್ಥಿಗಳಿಗೆ ಮೂರುದಿನಗಳ ಕಾಲ ಏರ್ಪಡಿಸಲಾಗಿರುವ ವಿಜ್ಞಾನ ಉಪನ್ಯಾಸಮಾಲೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯಾವ ಸಮಾಜ ವಿದ್ಯೆಗೆ ಆದ್ಯತೆ ನೀಡುವುದಿಲ್ಲವೋ ಆ ಸಮಾಜಕ್ಕೆ ಎಂದಿಗೂ ಭವಿಷ್ಯವಿಲ್ಲ,ಧರ್ಮ ಮತ್ತು ವಿಜ್ಞಾನ ಎಂದಿಗೂ ವೈರುಧ್ಯ ಹೊಂದಿಲ್ಲ, ವಿಜ್ಞಾನ ಎಂದಿಗೂ ಇತರರಿಗೆ ಅಪಕಾರ ಉಂಟುಮಾಡುವುದನ್ನು ಹೇಳುವುದಿಲ್ಲ ಎಂದರು.
ಹತ್ತಿರವಾಗುವುದಿಲ್ಲ: ಮೂಢನಂಬಿಕೆಯನ್ನು ಪ್ರತಿಪಾದಿಸುವ ಸಮಾಜದಲ್ಲಿ ವಿಜ್ಞಾನದ ಮೌಲ್ಯಕಡಿಮೆಯಾಗಿ ವಿಜ್ಞಾನಕ್ಕೆ ಬೆಲೆ ಇಲ್ಲದಂತಾಗುತ್ತದೆ. ಅದೆ ರೀತಿ ವಿಜ್ಞಾನವು ಸಹ ಸಮಾಜದ ಸಹಕಾರವಿಲ್ಲದೆ ಜನರಿಗೆ ಹತ್ತಿರವಾಗುವುದಿಲ್ಲ, ಪಾಶ್ಚಿಮಾತ್ಯ ಧರ್ಮಗಳಿಗೆ ಹೋಲಿಸಿದಲ್ಲಿ ಭಾರತೀಯ ಧರ್ಮ ವಿಜ್ಞಾನವನ್ನು ಎಂದು ಬೇರ್ಪಡಿಸಿಲ್ಲ ಹಾಗೂ ವಿಜ್ಞಾನಿಗಳನ್ನು ಅವಮಾನ ಮಾಡಿಲ್ಲವೆಂದ ಅವರು, ವಿಜ್ಞಾನ ವಿಷಯ ಅಭ್ಯಾಸ ಮಾಡುವ ವಿದ್ಯಾರ್ಥಿಗಳು, ವೈಜ್ಞಾನಿಕ ವಿಷಯವನ್ನು ತಮ್ಮ ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳುವುದರ ಜೊತೆಯಲ್ಲಿ ಅವುಗಳನ್ನು ಪ್ರಚುರ ಪಡಿಸುವುದು ಸೇರಿದಂತೆ ಅವುಗಳ ಬಗ್ಗೆ ಮತ್ತಷ್ಟು ಪ್ರಯೋಗಶೀಲರಾಗಬೇಕೆಂದರು. ವಿದ್ಯೆ ಪಡೆಯುವುದು ಹಕ್ಕೆನ್ನುವ ಸರ್ಕಾರ, ಎಲ್ಲರೂ ಯಾವುದೇ ತಾರತಮ್ಯವಿಲ್ಲದಂತ ಮೌಲ್ಯಾಧರಿತ ಶಿಕ್ಷಣ ಒದಗಿಸಬೇಕಾದ್ದು ಸರ್ಕಾರದ ಆದ್ಯ ಕರ್ತವ್ಯವೆಂದರು.
ಅಧ್ಯಯನಶೀಲರಾಗಬೇಕು: ತುಮಕೂರು ವಿಜ್ಞಾನಕೇಂದ್ರದ ಸಹಕಾರ್ಯದರ್ಶಿ ಸಿ. ಯತಿರಾಜು, ಪ್ರಾಸ್ತಾವಿಕ ಭಾಷಣ ಮಾಡಿ, ಪ್ರೊ. ನಂಜುಂಡಪ್ಪ ವರದಿ ಅನ್ವಯ ಹಿಂದುಳಿದ ತಾಲೂಕಿನ ವಿದ್ಯಾರ್ಥಿಗಳಲ್ಲಿ ವಿಜ್ಞಾನ ವಿಷಯದ ಬಗ್ಗೆ ಹೆಚ್ಚಿನ ಅರಿವುಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ವಿಜ್ಞಾನ ವಿಷಯ ಅಭ್ಯಸಿಸುವ ವಿದ್ಯಾರ್ಥಿಗಳು, ಮೂಲವಿಜ್ಞಾನದ ವಿಷಯದ ಬಗ್ಗೆ ಅಧ್ಯಯನ ಶೀಲರಾಗಬೇಕಾಗಿದೆ. ಮೂಲವಿಜ್ಞಾನ ಕ್ಷೇತ್ರ ಅಭಿವೃದ್ಧಿಯಾಗದ ಹೊರತು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದ ಅಭಿವೃದ್ಧಿ ಸಾಧ್ಯವಿಲ್ಲವೆಂದರು.
ಜ್ಞಾನಭಾರತಿ ಪ.ಪೂ. ಕಾಲೇಜು ಪ್ರಾಚಾರ್ಯ ಗೋವಿಂದೇಗೌಡ ಅಧ್ಯಕ್ಷತೆ ವಹಿಸಿದ್ದು, ತಾಲೂಕು ಒಕ್ಕಲಿಗರ ಸಂಘದ ಕಾರ್ಯದರ್ಶಿ ಅನಂತಯ್ಯ, ಖಜಾಂಚಿ ಗಂಗಶಾನಯ್ಯ, ಚೌಡಪ್ಪ ಸೇರಿದಂತೆ ಸೇರಿದಂತೆ ಇತರರು ಉಪಸ್ಥಿತರಿದ್ದು, ಮೂರು ದಿನಗಳ ಕಾಲ ನಡೆಯುವ ಈ ಕಾರ್ಯಕ್ರಮದಲ್ಲಿ ತಾಲೂಕಿನ ವಿವಿಧ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದು, ನುರಿತ ವಿಷಯ ತಜ್ಞರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ವಿಜ್ಞಾನ ವಿಷಯಗಳ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.