ಶಿಕ್ಷಕ ಅರಿವಿನ ಹೆದ್ದಾರಿಯಾಗೇಕು: ಚಿಕ್ಕಣ್ಣ
ಚಿಕ್ಕನಾಯಕನಹಳ್ಳಿ: ಶಿಕ್ಷಕನಾದವ ತಾನು ಮೊದಲು ಆತ್ಮಗೌರವದ ಪ್ರತೀಕವಾಗಿ, ವಿದ್ಯಾರ್ಥಿಗಳ ಮುಂದೆ ನಿಂತು ಉತ್ತವ ಕಲಿಸುವ ಗುಣ ಬೆಳಸಿಕೊಳ್ಳಬೇಕು ಎಂದು ಡಾ. ಯಣ್ಣೇಕಟ್ಟ ಚಿಕ್ಕಣ್ಣ ನುಡಿದರು.
ಅವರು ಗುರುವಾರ ಪಟ್ಟಣದ ಸರ್ಕಾರಿ ಕನ್ನಡ ಮಾದರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ನಡೆದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಜನ್ಮದಿನಾಚರಣೆ ಪ್ರಯುಕ್ತ ಹಮ್ಮಿಕೊಂಡಿದ್ದ ಶಿಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡುತ್ತಾ ಮಾತನಾಡುತ್ತಿದ್ದರು.
ಶಿಕ್ಷಕನಲ್ಲಿ ಶಿಸ್ತು ಮತ್ತು ಶಿಕ್ಷಣದ ದಾಹ ಹೆಚ್ಚಾಗಿರಬೇಕು. ಭವ್ಯ ಭಾರತದ ಪ್ರಜೆಗಳನ್ನು ಸರಿದಾರಿಯಲ್ಲಿ ನಡೆಸುವ ಅರಿವಿನ ಹೆದ್ದಾರಿಯಾಗಿ ತನ್ನನ್ನು ತಾನು ತೆರೆದುಕೊಳ್ಳುವುದು ಉತ್ತಮ ಶಿಕ್ಷಕನ ಕರ್ತವ್ಯ.ತಾನು ಸ್ವತಃ ತಿಳಿದುಕೊಂಡು ಕಲಿಸಿ ಅಕ್ಷರ ವ್ಯಾಮೋಹದ ಹೊರತು ಬೇರಾವ ವ್ಯಾಮೋಹವು ಇರಬಾರದು. ನಿಜವಾದ ಶಿಕ್ಷಕ ವಿದ್ಯಾರ್ಥಿಗಳಿಗೆ ಎರಡನೇ ತಾಯಿ. ಹೆತ್ತ ತಾಯಿಗೆ ಎಂತಹ ಮಗನಾದರು ಮಮತೆಯನ್ನು ತೋರುವಂತೆ, ಶಿಕ್ಷಕ ತನ್ನ ವಿದ್ಯಾರ್ಥಿಯನ್ನು ಪ್ರೀತಿಸಬೇಕು. ಶಿಕ್ಷಕ ಹುದ್ದೆಯನ್ನು ಗೌರವಿಸುವಾತ, ಅದನ್ನೊಂದು ವೃತ್ತಿಗಿಂತ ಪದವಿ ಎಂದು ತಿಳಿದಾಗ ದೇಶದ ಯಾವ ಪದವಿಯು ನಿಮ್ಮ ಹುದ್ದೆಯನ್ನು ಸರಿಗಟ್ಟಲಾಗದು. ಈ ನಿಟ್ಟಿನಲ್ಲಿ ಒಬ್ಬ ಶಿಕ್ಷಕ ಏನೆಲ್ಲಾ ಆಗಬಹುದೆಂಬುದಕ್ಕೆ, ಒಬ್ಬ ಶಿಕ್ಷಕ ಉತ್ತಮ ಆಡಳಿತಗಾರನು ಆಗಬಲ್ಲ ಎಂಬುದಕ್ಕೆ ರಾಧಾಕೃಷ್ಣನ್ ಉತ್ತಮ ಉದಾಹರಣೆಯಾಗುತ್ತಾರೆ. ಅಂತಹವರ ಸಾಲಿನಲ್ಲಿ ಇಲ್ಲಿನ ತೀ.ನಂ.ಶ್ರೀಕಂಠಯ್ಯ, ಸಾಸಲು ಸಾ.ಶಿ.ಮರುಳಯ್ಯ ನಿದರ್ಶನವಾಗಿದ್ದಾರೆ ಎಂದರು. ಇಂತಹ ನಾಡಿನಲ್ಲಿ ಕಲಿಸುವ ನೀವು ಆದರ್ಶ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಎಂದರು.
ಪ್ರಾಮಾಣಿಕವಾಗಿ ಮಾಡಿ: ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಸಿ.ಬಿ.ಸುರೇಶ್‌ಬಾಬು ಸಮಾಜದಲ್ಲಿ ಜನರಿಂದ ಹೆಚ್ಚಿನ ಗೌರವ ಸಂಪಾದಿಸುವ ವ್ಯಕ್ತಿಗಳೆಂದರೆ ಶಿಕ್ಷಕರು. ಅವರು ಎಲ್ಲಾ ವರ್ಗದ ವ್ಯಕ್ತಿಗಳಿಂದಲು ಗೌರವಿಸಲ್ಪಡುತ್ತಾರೆ. ಆದ್ದರಿಂದ ನಿಮ್ಮ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ನಿರ್ವಂಚನೆಯಿಂದ ಪ್ರಾಮಾಣಿಕವಾಗಿ ಮಾಡಿ. ಇದರಿಂದ ಸಮಾಜದ ಬೆಳವಣಿಗೆಗೆ ಉತ್ತಮ ವ್ಯಕ್ತಿಗಳನ್ನು ನೀಡುವಲ್ಲಿ ನಿಮ್ಮ ಪಾತ್ರ ಬಹಳ ದೊಡ್ಡದು ಎಂದರು. ರಾಧಾಕೃಷ್ಣನ್ ಅವರ ಭಾವಚಿತ್ರವನ್ನು ತಾಪಂ ಉಪಾಧ್ಯಕ್ಷ ಎ.ಬಿ. ರಮೇಶ್ ಕುಮಾರ್ ಅನಾವರಣ ಮಾಡಿದರು. ಜಿಪಂ ಸದಸ್ಯೆ ಲೋಹಿತಾಬಾಯಿ ಧ್ವಜಾರೋಹಣ ನೆರವೇರಿಸಿದರು. ಕ್ಷೇತ್ರಶಿಕ್ಷಣಾಧಿಕಾರಿ ಸಾ.ಚಿ.ನಾಗೇಶ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನವನ್ನು ಮಾಡಲಾಯಿತು. ಶಿಕ್ಷಕ ಎ.ಎಂ. ನರಸಿಂಹಮೂರ್ತಿ ಮರಣೋತ್ತರ ಸನ್ಮಾನವನ್ನು ಅವರ ಶ್ರೀಮತಿ ಶಿವಮ್ಮನವರಿಗೆ ಮಾಡಲಾಯಿತು.