ಕಂಬಳಿ ಗೌರವಿಸಲು ಕುರುಬರಿಗೆ ಕರೆ
ಕ.ಪ್ರ.ವಾರ್ತೆ ತುಮಕೂರು ಸೆ. 6
ಕುರುಬ ಜನಾಂಗದಲ್ಲಿ ಬಂಡಾರ, ಡೊಳ್ಳು, ಕಂಬಳಿ, ಶ್ರೇಷ್ಠವಾಗಿದೆ. ಆದ್ದರಿಂದ ಇದನ್ನು ಕುರುಬ ಸಮಾಜದವರು ಗೌರವಿಸಬೇಕೆಂದು ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಜಿಲ್ಲಾಧ್ಯಕ್ಷ ಎ. ಮಹಾಲಿಂಗಯ್ಯ ತಿಳಿಸಿದರು.
ಪಾವಗಡ ತಾಲೂಕಿನ ಕಸಬಾ ಹೋಬಳಿ ವ್ಯಾಪ್ತಿಯ ವೆಂಕಟಾಪುರ ಗ್ರಾಮ ಘಟಕದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಭಾನುವಾರವು ಕುರುಬ ಜನಾಂಗಕ್ಕೆ ಪವಿತ್ರವಾದ ವಾರವಾಗಿದೆ. ಕಲೆ, ಸಂಸ್ಕೃತಿ, ಸಂಪ್ರದಾಯಗಳನ್ನು ಮಾಡುವುದರಲ್ಲಿ ಕುರುಬ ಸಮಾಜವು ತನ್ನದೆ ಆದ ಛಾಪು ಮೂಡಿಸಿದೆ ಎಂದರು.
ಇಂದಿಗೂ ಗ್ರಾಮೀಣ ಪ್ರದೇಶಗಳಲ್ಲಿ ಬೀರಪ್ಪ ಹಾಗು ಮೈಲಾರಲಿಂಗಸ್ವಾಮಿ ದೇವರಲ್ಲಿ ನಂಬಿಕೆಯನ್ನಿಟ್ಟಿದ್ದಾರೆ. ಕುರುಬ ಸಮಾಜದಲ್ಲಿ ಅನೇಕ ರೀತಿಯ ಕಾರ್ಯಕ್ರಮಗಳಲ್ಲಿ ಹಣೆಗೆ ಬಂಡಾರ ಇಟ್ಟು ಭಕ್ತಿಯಿಂದ ದೇವರನ್ನು ಆರಾಧಿಸುತ್ತಾರೆ. ಜಾತ್ರಾ ಮಹೋತ್ಸವಗಳಲ್ಲಿ ಡೊಳ್ಳು ಬಡಿಯುತ್ತಾರೆ. ಕಂಬಳಿಯನ್ನು ಬಳಸುವುದು ಹಿಂದಿನ ವರ್ಷಗಳಿಂದಲು ನಡೆದುಕೊಂಡು ಬಂದಂತಹ ವಿಶಿಷ್ಠ ಪದ್ಧತಿಯಾಗಿದೆ ಎಂದು ತಿಳಿಸಿದರು.
ಕುರುಬ ಸಮಾಜದ ಜನತೆ ತಮ್ಮ ಸಂಪ್ರದಾಯಗಳು ನಾಶವಾಗದಂತೆ ಕಾಪಾಡಿಕೊಳ್ಳಬೇಕಾಗಿದೆ. ರಾಜ್ಯದ ನಾನಾ ಕಡೆಯಲ್ಲಿ ವಾಸಿಸುತ್ತಿರುವ ಸಮಾಜದ ಜನತೆಯು ಆಯಾ ಪ್ರದೇಶದ ವ್ಯಾಪ್ತಿಯಲ್ಲಿ ತಮ್ಮದೇ ಆದಂತಹ ಕಾರ್ಯಕ್ರಮಗಳನ್ನು ಮಾಡುತ್ತಾರೆ. ಹಲವಾರು ರೀತಿಗಳಲ್ಲಿ ಕುರುಬ ಸಮಾಜಕ್ಕೆ ಮಹತ್ವದ ಮನ್ನಣೆಯನ್ನು ಕೊಟ್ಟಂತಾಗಿದೆ ಎಂದು ಹೇಳಿದರು. ಆದ್ದರಿಂದ ನಮ್ಮ ಸಮಾಜದ ಆಚಾರ ವಿಚಾರಗಳನ್ನು ಮರೆಮಾಚದಂತೆ ಕಾಪಾಡಿಕೊಂಡು ಹೋಗುವುದು ನಮ್ಮ ಜವಾಬ್ದಾರಿಯಾಗಿದೆ. ಪ್ರತಿಯೊಬ್ಬ ಯುವಕರು ರಾಜಕೀಯವಾಗಿ ಮತ್ತು ಆರ್ಥಿಕವಾಗಿ ಬೆಳೆಯಬೇಕಾಗಿರುವುದು ಅನಿವಾರ್ಯವಾಗಿದೆ ಎಂದರು.
ಜಿಲ್ಲಾ ನಿರ್ದೇಶಕ ಪಿ.ವಿ. ಅನಿಲ್ಕುಮಾರ್ ಮಾತನಾಡಿ ಕುರುಬ ಸಮಾಜದ ಪ್ರತಿಯೊಬ್ಬರು ಜಾಗೃತರಾಗುತ್ತಿರುವುದರಿಂದ ಸಮಾಜವು ಮುಂದೆ ಬರಲು ಅವಕಾಶ ಮಾಡಿಕೊಟ್ಟಂತಾಗಿದೆ. ಗ್ರಾಮೀಣ ಪ್ರದೇಶದ ಯುವಕರಿಗೆ ದಾರಿ ತಪ್ಪದಂತೆ ಜಾಗೃತಿಯನ್ನು ಮೂಡಿಸಿ, ಹಳ್ಳಿ ಬದುಕಿಗೆ ಸೂಕ್ತ ದಾರಿಯನ್ನು ಕಂಡುಕೊಳ್ಳುವಂತೆ ಮಾಡಿಕೊಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ರವಾನೆ: ಸರ್ಕಾರದಿಂದ ಸಿಗುವಂತಹ ಸೌಲಭ್ಯಗಳನ್ನು ನಮ್ಮ ಸಮಾಜದ ಬಂದುಗಳಿಗೆ ಸಿಗುವಂತೆ ಮಾಹಿತಿಯನ್ನು ರವಾನೆ ಮಾಡಬೇಕಾಗಿದೆ. ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಅನೇಕ ಸೌಲಭ್ಯಗಳನ್ನು ಕಾಣದಂತಿರುವ ನಮ್ಮ ಬಡ ವರ್ಗಕ್ಕೆ ತಿಳುವಳಿಕೆಯ ಮಾರ್ಗ ನೀಡಿ ಸೌಲಭ್ಯವನ್ನು ಪಡೆದುಕೊಳ್ಳುವಂತೆ ಮಾಡಬೇಕಾಗಿರುವುದು ನಮ್ಮ ಸಮಾಜದವರ ಕೆಲಸ ಮತ್ತು ಸಂಘಟನೆಯ ಗುರಿಯಾಗಿದೆ ಎಂದರು. ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಜಿಲ್ಲಾಧ್ಯಕ್ಷ ಎ. ಮಹಾಲಿಂಗಯ್ಯನವರ ಅಸ್ತಿತ್ವದಲ್ಲಿ ತಾಲೂಕಿನ ವೆಂಕಟಾಪುರ ಗ್ರಾಮ ಘಟಕಕ್ಕೆ ಚಾಲನೆ ನೀಡಲಾಯಿತು. ಈ ಸಮಾರಂಭದಲ್ಲಿ ತಾಲೂಕು ಗೌರವಾಧ್ಯಕ್ಷ ಟಿ.ಎ ರಾಮಾಂಜಿನಪ್ಪ, ತಾಲೂಕು ಅಧ್ಯಕ್ಷ ಪಿ.ಎಲ್. ದೇವರಾಜು, ಪ್ರಧಾನ ಕಾರ್ಯದರ್ಶಿ ಎನ್. ಕೃಷ್ಣಮೂರ್ತಿ, ಖಜಾಂಚಿ ಪಿ.ಎಲ್.ಎಸ್. ಬಾಬು, ನಗರ ಕಾರ್ಯಾಧ್ಯಕ್ಷ ವೈ ಬಸವರಾಜು ಉಪಸ್ಥಿತರಿದ್ದರು. ಗೌರವಾಧ್ಯಕ್ಷ ಆರ್.ವೆಂಕಟೇಶ್, ಅಧ್ಯಕ್ಷ ವೈ. ಪುರುಷೊತ್ತಮ್, ಉಪಾಧ್ಯಕ್ಷರು ಜಿ.ಎಸ್ ಮಲ್ಲೇಶ್, ಪ್ರಧಾನ ಕಾರ್ಯದರ್ಶಿ ವಿ.ಜೆ ಮಹೇಶ್, ಕಾರ್ಯದರ್ಶಿ ಕೆ.ಪಿ. ಸುರೇಶ್, ಖಜಾಂಚಿ ರಂಜಿತ್ ಕುಮಾರ್, ನಿರ್ದೇಶಕರಾಗಿ ಆಂಜೀನಪ್ಪ, ರಾಮಕೃಷ್ಣ, ಸುರೇಶ್ ಬಾಬು, ಶಿವಪ್ರಸಾದ್, ಆಂಜನೇಯಲು, ರಮೇಶ್, ಮುತ್ಯಾಲ, ಈಶ್ವರ್ ಅವರು ಆಯ್ಕೆಯಾದರು. ಶಿಕ್ಷಕ ಸಂಜೀವರೆಡ್ಡಿ ಸ್ವಾಗತಿಸಿ, ರಾಮಚಂದ್ರ ರೆಡ್ಡಿ ವಂದಿಸಿದರು. ಎನ್. ಕೃಷ್ಣಮೂರ್ತಿ ನಿರೂಪಿಸಿದರು.