ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ನೀವು ರಾಧಾಕೃಷ್ಣನ್ರನ್ನು ಶೇ.2 ರಷ್ಟು ಅನುಸರಿಸಿ

Rashmi Kasaragodu
Updated On : 7 Sept 2013, 12:55 pm

ಕ.ಪ್ರ.ವಾರ್ತೆ   ತುರುವೇಕೆರೆ   ಸೆ. 6
ನೋಡ್ರಿ ನೀವು ಸರ್ವಪಲ್ಲಿ ರಾಧಾಕೃಷ್ಣನ್ ರವರ ಎಲ್ಲಾ ಉತ್ತಮ ಗುಣಗಳನ್ನು ಕಲಿಯುವುದು ಬೇಡ. ಶೇ. 2 ರಷ್ಟು ಅವರ ಮನೋಭಾವನೆಯನ್ನು ಕಲಿತರೆ ಸಾಕು. ನೀವು ಉತ್ತಮ ಶಿಕ್ಷಕರಾಗಬಹುದು. ಹೀಗೆ ತಾಲೂಕಿನ ಶಾಲಾ ಶಿಕ್ಷಕರಿಗೆ ಕಿವಿ ಮಾತು ಹೇಳಿದವರು ಶಾಸಕ ಎಂ.ಟಿ.ಕೃಷ್ಣಪ್ಪ.
ತಾಲೂಕಿನ ಕಾಲ ಭೈರವೇಶ್ವರ ಕಲ್ಪತರು ಆಶ್ರಮ, ವಿರಕ್ತ ಮಠ ಮುಂತಾದ ವಿವಿಧ ಸಂಘ ಸಂಸ್ಥೆಗಳ ನೆರವಿನಿಂದ ಆಚರಿಸಲಾದ ಶಿಕ್ಷಕರ ದಿನಾಚರಣೆ ಮತ್ತು ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮ ದಿನಾಚರಣೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. ಶಿಕ್ಷಕರಲ್ಲಿ ಉತ್ತಮ ಶಿಕ್ಷಕರೂ ಇದ್ದಾರೆ. ಹಲವಾರು ಮಂದಿ ಕುಡುಕರೂ, ಇಸ್ಪೀಟ್ ಆಡುವ ಶಿಕ್ಷಕರೂ ಇದ್ದಾರೆ. ಅವರಿಂದ ಈ ಸಮಾಜ ಏನನ್ನು ನಿರೀಕ್ಷಿಸಲು ಸಾಧ್ಯ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ವಿಷಾದ ವ್ಯಕ್ತಪಡಿಸಿದರು. ತಮಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಎಂದು ತಮ್ಮಿಂದಲೇ ಶಿಪಾರಸು ಪತ್ರ ಪಡೆಯುತ್ತಾರೆ. ಇಂತಹವರು ನಿಜವಾದ ಶಿಕ್ಷಕರೇ. ಶಿಫಾರಸು ಮಾಡದಿದ್ದರೆ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಶಿಕ್ಷಕರೇ ಅರ್ಥ ಮಾಡಿಕೊಳ್ಳಬೇಕು. ನಾನು ನಿಜವಾಗಿಯೂ ಪ್ರಶಸ್ತಿಗಳಿಸಲು ಅರ್ಹನೇ ಎಂಬುದನ್ನು ತಮ್ಮ ಆತ್ಮ ಸಾಕ್ಷಿಯನ್ನು ಕೇಳಿಕೊಳ್ಳಬೇಕು ಎಂದರು. ತಾವು ಶಿಫಾರಸು ಮಾಡಿರುವ ಶಿಕ್ಷಕರ ಹೆಸರನ್ನು ಪಟ್ಟಿಯಲ್ಲಿ ಸೇರಿಸಬೇಡಿ. ಹಾಗೂ  ಶಿಫಾರಸು ಪತ್ರವನ್ನು ಹರಿದು ಹಾಕಿ ಎಂದು ವೇದಿಕೆ ಮೇಲಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಶಾಸಕ ಎಂ.ಟಿ.ಕೃಷ್ಣಪ್ಪ ನೇರವಾಗಿ ಸೂಚಿಸಿದರು.
ಮಕ್ಕಳ ಮನಸ್ಸನ್ನು ಅರ್ಥೈಸಿ ಪಾಠ ಮಾಡದೇ ಕೇವಲ ದಿನ ಎಣಿಸುವವರನ್ನೂ ನಾನು ಬಲ್ಲೆ. ಏಕೆ ಹೀಗೆ ಮಾಡುತ್ತಾರೋ ಗೊತ್ತಿಲ್ಲ. ಮಕ್ಕಳು ದೇವರೆಂದು ಕಾಣಿರಿ. ಬೇರೆಯವರಿಗೆ ಮಾದರಿಯಾಗಿ ಬಾಳಿ. ಇಂದು ಮೌಲ್ಯಗಳು ಕುಸಿಯುತ್ತಿದೆ. ಶಿಕ್ಷಕರಿಗೆ ಇದ್ದ ಗೌರವ ಕಡಿಮೆಯಾಗುತಿದೆ. ನಿಮ್ಮತನವನ್ನು ಮೈಗೂಡಿಸಿಕೊಳ್ಳಿ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಶಿಕ್ಷಕರಿಗೆ ಕಿವಿಮಾತು ಹೇಳಿದರು.
ಕೆಲವು ಶಿಕ್ಷಕರು ಇಂದೂ ಕುಡಿತಕ್ಕೆ ದಾಸರಾಗಿದ್ದಾರೆ. ಇದರಿಂದಾಗಿ ಉಳಿದ ಶಿಕ್ಷಕ ವೃಂದಕ್ಕೆ ಅವಮಾನವಾಗುತ್ತಿದೆ. ಶಿಕ್ಷಕರೇ ನಿಮ್ಮನ್ನು ಜನ ನೋಡುತ್ತಿರುತ್ತಾರೆ. ದಯಮಾಡಿ ಬಹಳ ಜವಾಬ್ದಾರಿಯಿಂದ ವರ್ತಿಸಿ ಎಂದು ಹೇಳಿದರು. ಇಷ್ಟೆಲ್ಲಾ ಖಡಕ್ ನುಡಿಗಳ ಮಧ್ಯೆ ಶಾಸಕ ಎಂ.ಟಿ.ಕೃಷ್ಣಪ್ಪ ನಮ್ಮ ತಾಲೂಕು ಎಸ್ಎಸ್ಎಲ್ಸಿ ಹಾಗೂ ಪಿಯುಸಿಯಲ್ಲಿ ಉತ್ತಮ ಫಲಿತಾಂಶವನ್ನು ಗಳಿಸಿದೆ. ಇದಕ್ಕೆ ಉತ್ತಮ ಶಿಕ್ಷಕ ವರ್ಗದ ಶ್ರಮ ಇದೆ. ಹಾಗಾಗಿ ತಾನು ಹೆಮ್ಮೆ ಪಡುತ್ತೇನೆ. ಅಂತಹ ಶಿಕ್ಷಕರನ್ನು ಗೌರವಿಸುತ್ತೇನೆ ಎಂದು ಹೇಳುವುದನ್ನು ಮರೆಯಲಿಲ್ಲ.
ತಾಲೂಕಿನ ಗುರುಭವನಕ್ಕೆ ಕುಡಿಯುವ ನೀರಿಗಾಗಿ ಒಂದು ಬೋರ್ ವೆಲ್ ಹಾಗೂ ಅದರ ನವೀಕರಣಕ್ಕಾಗಿ 4.50 ಲಕ್ಷ ರು.ಗಳ ಅನುದಾನವನ್ನು ನೀಡುವುದಾಗಿ ಶಾಸಕರು ಭರವಸೆ ನೀಡಿದರು.  ಕಲ್ಪತರು ಆಶ್ರಮದ ಶಿವಕುಮಾರನಾಥ ಸ್ವಾಮೀಜಿ ಉಪಸ್ಥಿತರಿದ್ದರು. ಉತ್ತಮ ಶಿಕ್ಷಕರು ಹಾಗೂ ನಿವೃತ್ತ ಶಿಕ್ಷಕರನ್ನು ಗೌರವಿಸಲಾಯಿತು.  ಜಿಲ್ಲಾ ಪಂಚಾಯ್ತಿ ಸ್ಥಾಯಿ ಸಮಿತಿ ಅಧ್ಯಕ್ಷ  ಎ.ಬಿ.ಜಗದೀಶ್, ಸದಸ್ಯರಾದ ಲತಾ ವಿಶ್ವನಾಥ್, ಶ್ರೀನಿವಾಸ್, ಮಂಗಳಗೌರಮ್ಮ, ತಾಲೂಕು ಪಂಚಾಯ್ತಿ ಅಧ್ಯಕ್ಷ ಲಕ್ಷ್ಮೀಕಾಂತ್, ಎಪಿಎಂಸಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಬಿಇಓ ರಂಗಧಾಮಯ್ಯ, ಜಿ.ಪಂ.ಎ ಇ ಇ ನಾರಾಯಣಸ್ವಾಮಿ ಮೊದಲಾದವರು ಹಾಜರಿದ್ದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಬಸವರಾಜು ರವರಿಂದ ವಿಶೇಷ ಉಪನ್ಯಾಸ ಏರ್ಪಡಿಸಲಾಗಿತ್ತು. ಹಲವಾರು ಶಿಕ್ಷಕರು ಸಮಾರಂಭಕ್ಕೆ ಬಾರದೇ ಖುರ್ಚಿಗಳು ಖಾಲಿ ಇದ್ದದ್ದು ಕಂಡುಬಂತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement