ಪೇಟೆಗೆ ಬಂತು ತರಹೇವಾರಿ ಗಣಪ, ಪುಟಗೌರಿ
ಕ.ಪ್ರ.ವಾರ್ತೆ ತುಮಕೂರು ಸೆ. 6
ಗೌರಿ ಗಣೇಶ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದ್ದು ತುಮಕೂರು ಪೇಟೆಯಲ್ಲಿ ಎಲ್ಲೆಲ್ಲಿ ನೋಡಿದರೂ ಥರೇವಾರಿ ಗಣಪ, ಪುಟಗೌರಿ ಮಾರುಕಟ್ಟೆಗೆ ಬಂದಿದೆ.
ಸಿದ್ಧಿವಿನಾಯಕ ಮಾರುಕಟ್ಟೆ, ಎಸ್ಐಟಿ, ಸೋಮೇಶ್ವರಪುರಂ, ಕೆ.ಆರ್. ಬಡಾವಣೆ, ಬಿ.ಎಚ್. ರಸ್ತೆ ಸೇರಿದಂತೆ ಬಹುತೇಕ ಎಲ್ಲಾ ಬಡಾವಣೆಗಳ ಅಂಗಡಿ ಮುಂದೆ ವಿಘ್ನ ನಿವಾರಕ ಗಣೇಶನನ್ನು ಕಲಾವಿದರು ಮಾರಾಟಕ್ಕೆ ಇಟ್ಟಿದ್ದಾರೆ.
ಈಗಾಗಲೇ ಅಕ್ಕಪಕ್ಕದ ಊರುಗಳು ಮತ್ತು ಕೆಲ ಬಡಾವಣೆಗಳಲ್ಲಿ ಅದ್ದೂರಿಯಾಗಿ ಗಣೇಶನನ್ನು ಪ್ರತಿಷ್ಠಾಪಿಸುವ ಹಿನ್ನೆಲೆಯಲ್ಲಿ ವಿಶೇಷವಾಗಿ ಆರ್ಡರ್ ಕೊಟ್ಟು ಗಣಪನನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಈಗಾಗಲೇ ತುಮಕೂರು ಪೇಟೆಯಲ್ಲಿ ಸಹಸ್ರಾರು ಗಣಪ ಬಂದಿವೆ. ಅಲ್ಲದೇ ಕಲಾವಿದರು ಕೂಡ ಕೊನೆ ಕ್ಷಣದ ಕಸೂತಿಯನ್ನು ಮಣ್ಣಿನ ಗಣಪನಿಗೆ ಮಾಡುತ್ತಿದ್ದಾರೆ.
ಅರ್ಧ ಅಡಿಯಿಂದ ಭರ್ತಿ 20 ಅಡಿಗಳಿಗೂ ಹೆಚ್ಚು ಬೃಹತ್ ಗಾತ್ರದ ಗಣಪನನ್ನು ಕಲಾವಿದರು ಕೆತ್ತುತ್ತಿದ್ದಾರೆ. 25 ರುಪಾಯಿಯಿಂದ ಸಾವಿರಾರು ರು. ವರೆಗಿನ ಗಣಪನನ್ನು ಕಲಾವಿದರು ಕೆತ್ತಿದ್ದಾರೆ. ಸಣ್ಣ ಪುಟ್ಟ ಅಂಗಡಿಗಳಲ್ಲೂ ಕೂಡ ಗಣಪ ಖರೀದಿಗೆ ದಕ್ಕುತ್ತಾನೆ.
ಹಬ್ಬದ ಸಡಗರವೂ ಜೋರು: ಈಗ ವಾರಾಂತ್ಯದ ರಜೆ ಇರುವುದರಿಂದ ಎಲ್ಲೆಲ್ಲೂ ಹಬ್ಬದ ಸಂಭ್ರಮ ಹೆಚ್ಚಾಗಿದೆ. ಈಗಾಗಲೇ ಊರಿಗೆ ತೆರಳುವ ತಯಾರಿ ಕೂಡ ಭರ್ಜರಿಯಾಗಿ ನಡೆಯುತ್ತಿದೆ. ಎಟಿಎಂ ಇಲ್ಲದವರು ಬ್ಯಾಂಕುಗಳ ಮುಂದೆ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕೂಡ ಸಾಮಾನ್ಯವಾಗಿದೆ.
ಈಗಾಗಲೇ ತುಮಕೂರಿನ ಸಿದ್ಧಿವಿನಾಯಕ ಮಾರುಕಟ್ಟೆಯಲ್ಲಿ ಭರ್ಜರಿ ವ್ಯಾಪಾರ ಕೂಡ ಆರಂಭವಾಗಿದೆ. ಒಂದೆಡೆ ಗಣೇಶ,ಗೌರಿಯನ್ನು ಖರೀದಿ ಮಾಡುವುದು, ಹಬ್ಬದ ಸಾಮಾನುಗಳನ್ನು ಖರೀದಿಸುವಲ್ಲಿ ಮಹಿಳೆಯರು ನಿರತರಾಗಿದ್ದಾರೆ.
ಅಂಚೆ ಕಚೇರಿಯಲ್ಲೂ ಕ್ಯೂ: ಗೌರಿ ಹಬ್ಬಕ್ಕೆ ಮನೆಯ ಹೆಣ್ಣು ಮಕ್ಕಳಿಗೆ ಅರಿಶಿನ ಕುಂಕುಮಕ್ಕಾಗಿ, ಬಾಗಿನಕ್ಕಾಗಿ ಹಣ ಕಳುಹಿಸಲು ಜನ ಅಂಚೆ ಕಚೇರಿ ಮುಂದೆ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಕೂಡ ಸಾಮಾನ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಮನಿ ಆರ್ಡರ್ ಮಾಡುವುದೇ ಅಪರೂಪದ ಎನ್ನುವಷ್ಟರ ಮಟ್ಟಿಗೆ ಕಡಿಮೆಯಾಗಿತ್ತು. ಆದರೆ ಗೌರಿ, ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಕಳೆದ ಒಂದು ವಾರದಿಂದ ಮನಿ ಆರ್ಡರ್ ಕಳುಹಿಸುವವರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿದೆ ಎನ್ನುತ್ತಾರೆ ಅಂಚೆ ಕಚೇರಿಯ ನೌಕರರು.
ಬಟ್ಟೆ ಅಂಗಡಿಯಲ್ಲಿ: ಗೌರಿ ಗಣೇಶ ಹಬ್ಬಕ್ಕೆ ಹೊಸ ಬಟ್ಟೆ ಖರೀದಿಸಲು ಜನ ಉತ್ಸುಕರಾಗಿದ್ದಾರೆ. ಪ್ರತಿ ದಿನ ಸಂಜೆ ತುಮಕೂರಿನ ಎಂ.ಜಿ. ರಸ್ತೆ, ಬಿ.ಎಚ್. ರಸ್ತೆ ಹಾಗೂ ಇನ್ನಿತರೆ ಬಡಾವಣೆಗಳಲ್ಲಿ ಬಟ್ಟೆ ಅಂಗಡಿ ಮುಂದೆ ಜನವೋ ಜನ. ತಮಗೆ ಬೇಕಾದ ಬಟ್ಟೆಗಳನ್ನು ಖರೀದಿಸಲು ಜನ ಉತ್ಸುಕರಾಗಿರುವ ದೃಶ್ಯ ಕೂಡ ಸಾಮಾನ್ಯವಾಗಿದೆ. ಒಟ್ಟಾರೆಯಾಗಿ ವಾರಂತ್ಯದ ರಜೆ ಸೇರಿದಂತೆ ಈ ಬಾರಿ ಹಬ್ಬದ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಿದೆ.