ಕುಡಿವ ನೀರಿನ ಸಮಸ್ಯೆ ನಿವಾರಣೆಗೆ ಕೂಡಲೇ ಕ್ರಮ ಕೈಗೊಳ್ಳಿ: ಶಾಸಕ
ಕ.ಪ್ರ. ವಾರ್ತೆ ಪಾವಗಡ ಸೆ.7
ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಧಿಕಾರಿಗಳು ಕೂಡಲೇ ಕೈಜೋಡಿಸಬೇಕೆಂದು ಶಾಸಕ ಕೆ.ಎಂ.ತಿಮ್ಮರಾಯಪ್ಪ ಅಧಿಕಾರಿಗಳಿಗೆ ಎಚ್ಚರಿಸಿದರು.
ಶನಿವಾರ ಪಾವಗಡಕ್ಕೆ ಭೇಟಿ ನೀಡಿದ್ದ ಮಧುಗಿರಿ ಉಪ ವಿಭಾಗಧಿಕಾರಿ ತಬ್ಸಮ್ ಜಹೇರಾ ಅವರೊಂದಿಗೆ ಚರ್ಚಿಸಿದ ಶಾಸಕರು ತ್ವರಿತ ಕುಡಿಯುವ ನೀರಿನ ಅನುಷ್ಠಾನ ಸೇರಿದಂತೆ ತಾಲೂಕಿನ ಜ್ವಲಂತ ಸಮಸ್ಯೆಗಳ ಬಗ್ಗೆ ವಿಭಾಗ ಮಟ್ಟದ ಅಧಿಕಾರಿಗಳಿಗೆ ಮನವರಿಕೆ ಮಾಡಿದರು.
ತಾಲೂಕಿನಲ್ಲಿ ಅನೇಕ ವರ್ಷಗಳಿಂದ ಮಳೆ ಬೆಳೆ ಇಲ್ಲದೇ ರೈತರು ಮತ್ತು ಕೂಲಿ ಕಾರ್ಮಿಕರು ಕಂಗಾಲಾಗಿದ್ದು ಕೆಲಸಗಳಿಲ್ಲದೇ ಇಲ್ಲಿನ ಬಹುತೇಕ ಜನ ನಗರ ಪ್ರದೇಶಗಳಿಗೆ ವಲಸೆ ಹೋಗಿ ಜೀವನ ಮಾಡುತ್ತಿದ್ದಾರೆ. ಹೆಚ್ಚು ಹೆಚ್ಚು ಕೈಗಾರಿಕೆಗಳನ್ನು ಸ್ಥಾಪಿಸುವ ಮೂಲಕ ವಿವಿಧ ರೀತಿಯ ಉದ್ಯೋಗ ಸೃಷ್ಟಿಯಾಗಬೇಕು. ಪ್ರಧಾನ ಬೆಳೆಯಾದ ಶೇಂಗಾ ಪ್ರತಿ ವರ್ಷದಂತೆ ಈ ವರ್ಷ ಸಹ ನಿಗದಿತ ಅವಧಿಗೆ ಮಳೆ ಇಲ್ಲದೇ ಬೆಳೆ ಸಂಪೂರ್ಣ ನಷ್ಟಕ್ಕೀಡಾಗಿದ್ದು ಜಮೀನುಗಳನ್ನು ಪರಿಶೀಲಿಸುವ ಮೂಲಕ ಬೆಳೆ ವಿಮೆ ಹಾಗೂ ಎಲ್ಲಾ ರೈತರಿಗೆ ಎಕರೆಗೆ ಇಂತಿಷ್ಟು ಎಂದು ಪರಿಹಾರ ಕಲ್ಪಿಸಬೇಕಿದೆ ಎಂದರು.
ಆರ್ಥಿಕಾವಲಂಬನೆ ಹಿನ್ನಲೆಯಲ್ಲಿ ಬೆಳೆಸಿದ್ದ ದಾಳಿಂಬೆ, ಪಪ್ಪಾಯಿ, ಸಪೋಟಾ ವಿವಿಧ ರೀತಿಯ ಹೂವಿನ
ಬೆಳೆಗಳು ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ನಾನಾ ತರದ ರೋಗಗಳು ಹರಡಿ ನಷ್ಟಕ್ಕಿಡಾಗಿದೆ. ಅಂತಹ ರೈತರನ್ನು ಗುರುತಿಸಿ ನಷ್ಟ ಪರಿಹಾರ ಕಲ್ಪಿಸಬೇಕು ಎಂದ ಅವರು ತಾಲೂಕಿನಲ್ಲಿ ರೈತರು ಮತ್ತು ಕೂಲಿ ಕಾರರಿಗೆ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ವಿವರಿಸಿದರು. ತಾಲೂಕಿನದ್ಯಂತ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು ಕೊಳವೆ ಬಾವಿಗಳು ಕೊರೆಸುವ ಮೂಲಕ ತ್ವರಿತ ಕುಡಿಯುವ ನೀರಿನ ಅನುಷ್ಠಾನ ಮಾಡಬೇಕಿದೆ. ನೀರಾವರಿ ಬೆಳೆಗಳಿಗೆ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ವಿವರಿಸಿದರು.
ಟ್ರಾಫಿಕ್ ಸಮಸ್ಯೆ: ಇದೇ ಸಂದರ್ಭದಲ್ಲಿ ಆಗಮಿಸಿದ್ದ ಮಧುಗಿರಿ ಡಿವೈಎಸ್ಪಿ ಡಾ.ಸೌಮ್ಯಲತಾ ಅವರೊಂದಿಗೆ ಚರ್ಚಿಸಿ ಪಟ್ಟಣದಲ್ಲಿ ಟ್ರಾಫಿಕ್ ಸಮಸ್ಯೆ ಸೇರಿದಂತೆ ಇಲ್ಲಿನ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ವಿವರಿಸಿ ಕಾನೂನು ಬಾಹೀರ ಚಟವಟಿಕೆಗಳ ನಿಯಂತ್ರಣ ಸೇರಿದಂತೆ ಸಾಮಾನ್ಯ ಜನರಿಗೆ ಯಾವುದೇ ರೀತಿಯ ತೊಂದರೆ ಆಗದೆ ಕಟ್ಟೆಚ್ಚರ ವಹಿಸಲು ಸೂಚಿಸಿದರು.
ಜಿಲ್ಲಾ ಯೋಜನಾ ನಿರ್ದೇಶಕ (ಪಿಡಿ) ಕೃಷ್ಣಮೂರ್ತಿ ಅವರೊಂದಿಗೆ ಮಾತನಾಡಿ ಪುರಸಭೆ ಯೋಜನೆಗಳ ಬಗ್ಗೆ ಹಾಗೂ ಎಸ್ಸಿ ಎಸ್ಟಿ ಹಾಗೂ ಇತರೆ ವರ್ಗಗಳಿಗೆ ನಿಯಮನುಸಾರ ದೊರೆಯಬೇಕಾದ ಸೌಲಭ್ಯ ಬಗ್ಗೆ ಮಾಹಿತಿ ಪಡೆದರು. ಪುರಸಭೆಯಲ್ಲಿ ವಿನಾ ಕಾರಣ ಕಾಲಹರಣ ಸೇರಿದಂತೆ ಕಳಪೆ ಕಾಮಗಾರಿಗಳಲ್ಲಿ ನಿರತರಾದ ಎಂಜಿನಿಯರ್ಗಳ ಬಗ್ಗೆ ವಿವರಿಸಿ ಆಂತಹವರ ವಿರುದ್ಧ ಸೂಕ್ತ ಕ್ರಮ ಜರುಗಿಸಲು ಸೂಚಿಸಿದರು.
ಇದೇ ಸಂದರ್ಭದಲ್ಲಿ ತಹಸೀಲ್ದಾರ್ ಎಂ. ಅಲ್ತಾಪ್ ಪಾಷ, ತಾಪಂ ಇಒ ರಂಗನಾಥ್ ಪುರಸಭೆ ಮುಖ್ಯಾಧಿಕಾರಿ ರಂಗಸಾಮಯ್ಯ ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.