ಗಣಿತಜ್ಞ ಸಿಎನ್ಎಂಗೆ ಗೌರವ
ಕ,ಪ್ರ,ವಾರ್ತೆ ತುರುವೇಕೆರೆ ಸೆ.7
ಸ್ಥಳೀಯ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಗಣಿತ ಹಾಗೂ ವಿಜ್ಞಾನ ವಿಷಯದ ಉತ್ತಮ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಸಿ.ನಾರಾಯಣ್ ಮೂರ್ತಿಯವರನ್ನು ಉದಯ ಭಾರತಿ ಪ್ರಥಮ ದರ್ಜೆ ಕಾಲೇಜಿನ ವತಿಯಿಂದ ಗೌರವಿಸಲಾಯಿತು.
ಶಿಕ್ಷಕರ ದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಸಿ.ನಾರಾಯಣ್ ಮೂರ್ತಿ ಮಾತನಾಡಿ ಮೊದಲು ವಿದ್ಯಾರ್ಥಿಗಳು ತಮ್ಮನ್ನು ರೂಪಿಸಲು ಸಿದ್ಧರಿರುವ ಶಿಕ್ಷಕರ ಬಗ್ಗೆ ಗೌರವದಿಂದ ನಡೆದುಕೊಳ್ಳಬೇಕು. ಶಿಕ್ಷಕರು ನೀಡುವ ಶಿಕ್ಷಣವೇ ವಿದ್ಯಾರ್ಥಿಗಳ ಬಾಳನ್ನು ಬೆಳೆಗಿಸುವ ದೀವಿಗೆ ಯಾಗುವುದು. ಗುರುವಿಗೆ ಗೌರವ ನೀಡದ ತನಕ ಶಿಷ್ಯರಿಗೆ ವಿದ್ಯೆ ಹತ್ತದು ಎಂದರು. ತಮಗೆ ಶಿಕ್ಷಣ ನೀಡಿದ ಗುರುಗಳನ್ನು ನಾವಿಂದು ನೆನೆಯುವಂತೆ ಮಾಡಿದೆ. ಜೀವನವನ್ನೇ ರೂಪಿಸುವ ಮಹತ್ತರವಾದ ಜವಾಬ್ದಾರಿ ಹೊಂದಿರುವ ಶಿಕ್ಷಕರು ಎಂದೂ ತನ್ನ ಶಿಷ್ಯನಿಗೆ ಕೇಡು ಬಯಸನು ಎಂದರು. ಗುರುವಿನ ಮನಸ್ಸು ಗೆದ್ದ ಶಿಕ್ಷಕ ಜಗತ್ತನ್ನೇ ಗೆಲ್ಲಬಲ್ಲ ಎಂದು ಸಿ.ಎನ್.ನಾರಾಯಣ್ ಮೂರ್ತಿ ಹೇಳಿದರು.
ಸಮಾರಂಭದಲ್ಲಿ ಉಪನ್ಯಾಸಕ ನಂಜೇಗೌಡರನ್ನೂ ಸಹ ಗೌರವಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಗಂಗಾಧರ್ ದೇವರ ಮನೆ ಮಾತನಾಡಿ ಪ್ರತಿ ವರ್ಷ ಉತ್ತಮ ಶಿಕ್ಷಕರನ್ನು ತಮ್ಮ ಕಾಲೇಜಿನ ವತಿಯಿಂದ ಗೌರವಿಸುವ ಸಂಪ್ರದಾಯವನ್ನು ಮುಂದುವರೆಸಿಕೊಂಡು ಬಂದಿದೆ. ವಿಜ್ಞಾನಿಯಾದವರೂ ಸಹ ಆರಂಭದಲ್ಲಿ ಶಿಕ್ಷಕರಿಂದಲೇ ಶಿಕ್ಷಣ ಪಡೆದು ಮುಂದುವರೆಯಲು ಸಾಧ್ಯ. ಶಿಕ್ಷಕನಿಲ್ಲದ ಪ್ರಪಂಚ ಇರಲು ಸಾಧ್ಯವೇ ಇಲ್ಲ ಎಂದರು. ಸಮಾರಂಭದಲ್ಲಿ ಉಪನ್ಯಾಸಕರಾದ ವಿಜಯ್ ಕುಮಾರ್, ಸ್ವರೂಪಾ, ಅಶ್ವಿನಿ, ರಾಘವೇಂದ್ರ ಮೊದಲಾದವರು ಭಾಗವಹಿಸಿದ್ದರು.