ತಹಸೀಲ್ದಾರ್ ಮೇಲಿನ ದೌರ್ಜನ್ಯ ನಿರಾಧಾರ: ಗಂಗರಾಜು
ತಿಪಟೂರು: ತಹಸೀಲ್ದಾರ್ ಮೇಲೆ ದೌರ್ಜನ್ಯ ಮಾಡಿ ಕ್ಷಮೆಯಾಚಿಸುವಂತೆ ಮಾಡಲಾಗಿದೆ ಎಂದು ಆರೋಪಿಸಿ ಸೆ.3ರಂದು ಕೆಲ ವ್ಯಕ್ತಿಗಳು ರಾಜಕೀಯ ಪ್ರೇರಿತವಾಗಿ ಆರೋಪ ಮಾಡಿರುವುದು ಖಂಡನೀಯ. ನಮ್ಮ ಏಳಿಗೆಯನ್ನು ಸಹಿಸದ ಕೆಲ ವ್ಯಕ್ತಿಗಳು ನಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದಾರೆಂದು ದಲಿತ ಮುಖಂಡ ಹಾಗೂ ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ ಪ್ರ.ಕಾರ್ಯದರ್ಶಿ ಗಂಗರಾಜು ಆರೋಪವನ್ನು ನಿರಾಕರಿಸಿದರು.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಗ್ರಾಮ ಲೆಕ್ಕಿಗ ಡಿ.ಮಂಜುನಾಥ ಕಳೆದ ಎರಡು ವರ್ಷಗಳಿಂದ ಸಂಬಳವಿಲ್ಲದೆ ಜೀವನ ನಡೆಸುವುದು ಕಷ್ಟವಾಗಿದೆ. ಈಗ ಕರ್ತವ್ಯ ನಿರ್ವಹಿಸುತ್ತಿರುವ ವೃತ್ತದಲ್ಲಿ ಕೆಲಸ ನಿರ್ವಹಿಸಲು ಕಷ್ಟವಾಗಿದ್ದು, ತನ್ನನ್ನು ಶೆಟ್ಟಿಹಳ್ಳಿ ವೃತ್ತಕ್ಕೆ ನಿಯೋಜಿಸುವಂತೆ ತಹಸೀಲ್ದಾರರಲ್ಲಿ ಮನವಿ ಮಾಡಿ ನ್ಯಾಯ ಕೊಡಿಸುವಂತೆ ಮುಖಂಡರಾದ ನಾಗತೀಹಳ್ಳಿ ಕೃಷ್ಣಮೂರ್ತಿ, ಶಿವಲಿಂಗಯ್ಯ, ಶೆಟ್ಟಿಹಳ್ಳಿ ಚಿಕ್ಕಣ್ಣ ಮುಂತಾದವರಲ್ಲಿ ಕೇಳಿಕೊಂಡಿದ್ದು. ಈ ಬಗ್ಗೆ ತಹಸೀಲ್ದಾರ್ರಲ್ಲಿ ಗ್ರಾಮ ಲೆಕ್ಕಿಗ ಡಿ.ಮಂಜುನಾಥನ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಟ್ಟಾಗ ಮುಖಂಡರ ಮನವಿಗೆ ಸಕರಾತ್ಮಕವಾಗಿ ತಹಸೀಲ್ದಾರ್ ಸ್ಪಂದಿಸಿದರಲ್ಲದೆ ಶೆಟ್ಟಿಹಳ್ಳಿ ವೃತ್ತಕ್ಕೆ ವರ್ಗಾವಣೆ ಮಾಡುವುದಾಗಿ ತಿಳಿಸಿದರು. ಆದರೆ ವರ್ಗಾವಣೆ ಆದೇಶ ಪತ್ರ ನೀಡಿ ಪುನಃ ಹರಿದು ಹಾಕಿರುವ ಬಗ್ಗೆ ತಹಸೀಲ್ದಾರರನ್ನು ಕೇಳಿದಾಗ ಮುಂದಿನ ದಿನಗಳಲ್ಲಿ ಇಂತಹ ತಪ್ಪುಗಳು ಮರುಕಳಿಸದಂತೆ ನೋಡಿಕೊಳ್ಳುವುದಾಗಿ ತಿಳಿಸಿದರು.
ಆದರೆ ತಾಲೂಕು ಆಡಳಿತದೊಂದಿಗೆ ಮತ್ತು ಅಧಿಕಾರ ವರ್ಗದೊಂದಿಗೆ ಉತ್ತಮ ಬಾಂಧವ್ಯ ಹೊಂದಿರುವ ನಮ್ಮ ಮೇಲೆ ಕೆಲವು ರಾಜಕೀಯ ಪ್ರೇರಿತವಾದ ವ್ಯಕ್ತಿಗಳು ಗುಂಪು ಕಟ್ಟಿಕೊಂಡು ತಹಸೀಲ್ದಾರರ ಮೇಲೆ ದೌರ್ಜನ್ಯವೆಸಗಿದ್ದಾರೆ ಮತ್ತು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆಂದು ಮಾಧ್ಯಮಗಳಲ್ಲಿ ಸುದ್ದಿ ಆಗುವಂತೆ ಮಾಡಿರುವುದು ಖಂಡನೀಯ ಎಂದರು.
ನಾಗತೀಹಳ್ಳಿ ಕೃಷ್ಣಮೂರ್ತಿ ಮಾತನಾಡಿ ತಹಸೀಲ್ದಾರ್ ಮೇಲಿನ ದೌರ್ಜನ್ಯ ಆರೋಪ ನಿರಾಧಾರವಾಗಿದ್ದು, ಕಾನೂನಿನ ವ್ಯಾಪ್ತಿಯಲ್ಲಿ ನ್ಯಾಯ ಕೇಳಿರುವುದಲ್ಲದೆ ಅಧಿಕಾರಿಗಳೊಂದಿಗೆ ಸೌಜನ್ಯದಿಂದ ವರ್ತಿಸಿದ್ದು, ನಮ್ಮ ಮೇಲಿನ ಆರೋಪ ದೃಷ್ಟಿಯಿಂದ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುವಂತೆ ಕೆಲ ವ್ಯಕ್ತಿಗಳು ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿರುವುದು ಎಂದರು.
ಗೋಷ್ಠಿಯಲ್ಲಿ ದಲಿತ ಮುಖಂಡರಾದ ಬಳ್ಳೆಕಟ್ಟೆ ನರಸಿಂಹಯ್ಯ, ಶಿವಲಿಂಗಯ್ಯ, ಬಸವರಾಜು, ಚೆನ್ನಪ್ಪ, ರಘು ಕಂಚಾಘಟ್ಟ ಮತ್ತಿತರರಿದ್ದರು.