ಪ್ರತಿ ಜಿಲ್ಲೆಗೊಂದು ವೈದ್ಯಕೀಯ ಕಾಲೇಜು
ತುಮಕೂರು: ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ತೆರೆಯಲು ಸರ್ಕಾರ ನಿರ್ಧರಿಸಿದೆ. ಈಗಾಗಲೇ ಚಾಮರಾಜನಗರ, ಮಡಿಕೇರಿ. ಕಾರವಾರ, ಗುಲ್ಬರ್ಗಾ, ಗದಗ ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜುಗಳನ್ನು ಮಂಜೂರು ಮಾಡಲಾಗಿದ್ದು ಹಣಕಾಸು ಇಲಾಖೆ ಅನುಮತಿ ನೀಡಿದ ಬಳಿಕ ಆರಂಭಿಸಲಾಗುವುದೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ ಬಸಪ್ಪ ಪಾಟೀಲ್ ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಪ್ರತಿ ಜಿಲ್ಲೆಗಳಲ್ಲೂ ವೈದ್ಯಕೀಯ ಕಾಲೇಜನ್ನು ಹಂತ ಹಂತವಾಗಿ ಪ್ರಾರಂಭಿಸಲಾಗುವುದು ಎಂದರು. ತುಮಕೂರಿನಲ್ಲಿ ಶನಿವಾರ ಶ್ರೀ ಸಿದ್ಧಾರ್ಥ ಡೀಮ್ಡ್ ಯೂನಿವರ್ಸಿಟಿಯ ಎರಡನೇ ಘಟಿಕೋತ್ಸವದಲ್ಲಿ ಪಾಲ್ಗೊಂಡ ಬಳಿಕ ಮಾತನಾಡಿದರು.ಈ ಹಿಂದಿನ ಸರ್ಕಾರ ಕೆಲ ಜಿಲ್ಲೆಗಳಿಗೆ ವೈದ್ಯಕೀಯ ಕಾಲೇಜುಗಳನ್ನ ಮಂಜೂರು ಮಾಡಿ ಅನುದಾನ ನೀಡದ ಪರಿಣಾಮ ಆ ಜಿಲ್ಲೆಗಳಲ್ಲಿ ಕಾಲೇಜು ಆರಂಭ ಪ್ರಕ್ರಿಯೆ ಸ್ಥಗಿತಗೊಂಡಿದೆ. ಹೀಗಾಗಿ ಆರ್ಥಿಕ ಸ್ಥಿತಿಗತಿಯ ಆಧಾರದ ಮೇಲೆ ಮುಂದಿನ ಐದು ವರ್ಷಗಳಲ್ಲಿ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮೆಡಿಕಲ್ ಕಾಲೇಜು ತೆರೆಯುವುದಾಗಿ ತಿಳಿಸಿದರು. ಇದೇ ವೇಳೆ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಖಾಲಿ ಉಳಿದಿರುವ ಮೆಡಿಕಲ್ ಸೀಟುಗಳ ಭರ್ತಿಗಾಗಿ ಅಕ್ಟೋಬರ್ವೆರೆಗೆ ಕಾಲಾವಕಾಶವಿದ್ದು ಮತ್ತೊಂದು ಸುತ್ತಿನ ಸಿಇಟಿ ನಡೆಸಲಾಗುವುದು. ಮತ್ತು 2006 ನಿಯಮದಂತೆ ಸಿಇಟಿ ಪರೀಕ್ಷೆ ನಡೆಸಲಾಗುವುದೆಂದು ಅವರು ತಿಳಿಸಿದರು.