ಹುಳಿಯಾರಿನಲ್ಲಿ ಗೌರಿ-ಗಣೇಶ ಹಬ್ಬದ ಸಂತೆಯಲ್ಲಿ ಜೋರಾದ ಖರೀದಿ
ಹುಳಿಯಾರು: ದೇಶದ ಎಲ್ಲೆಡೆ ಯಾವುದೇ ಜಾತಿ ಬೇಧವಿಲ್ಲದೆ ಎಲ್ಲರೂ ಸೇರಿ ವಿಜೃಂಭಣೆಯಿಂದ ಆಚರಿಸುವಂತಹ ಹಬ್ಬ ಗೌರಿ-ಗಣೇಶ. ಕರ್ನಾಟಕದಲ್ಲಂತೂ ದೀಪಾವಳಿ ಹಬ್ಬದಷ್ಟೇ ಸಂಭ್ರಮ-ಸಡಗರದಿಂದ ಆಚರಿಸುತ್ತಾರೆ. ಅಂತೆಯೇ ಹುಳಿಯಾರಿನಲ್ಲಿ ಗೌರಿಗಣೇಶ ಹಬ್ಬದ ಮುನ್ನಾದಿನವಾದ ಶನಿವಾರದಂದು ಪಟ್ಟಣದ ಬಸ್ ನಿಲ್ದಾಣ, ರಾಜ್ಕುಮಾರ್ ರಸ್ತೆ ವೃತ್ತದಲ್ಲಿ ಹಾಕಿದ ಅಂಗಡಿಗಳಲ್ಲಿ ಹಬ್ಬಕ್ಕೆ ಬೇಕಾದ ವಸ್ತುಗಳ ಖರೀದಿಯ ಭರಾಟೆ ಜೋರಾಗಿತ್ತು.
ಸೇಬು ಕೆ.ಜಿ.ಗೆ 60-80 ರು, ದಾಳಿಂಬೆ 100-150 ರು, ದ್ರಾಕ್ಷಿ 120ರು, ಸೀತಾಫಲ 60 ರು, ಬಾಳೆಹಣ್ಣು ಕೆ.ಜಿ.ಗೆ 40ರಿಂದ 70 ರು.ನಂತೆ ಮಾರಾಟವಾಗುತ್ತಿದ್ದವು. ಅಲ್ಲದೆ ಹಬ್ಬಕ್ಕೆ ಬೇಕಾದ ಬಾಳೆಕಂದು, ಸೇವಂತಿ ಹೂ ಸೇರಿದಂತೆ ಇತರೆ ಹೂವಿನ ಬೆಲೆಯೂ ಸ್ವಲ್ಪ ತುಟ್ಟಿಯಾಗಿದ್ದರೂ ಸಹ ಜನ ಕೊಳ್ಳುತ್ತಿದ್ದ ದೃಶ್ಯಕಂಡುಬಂತು.
ಬಾಗಿನ ಸಾಮಗ್ರಿಗಳ ಬೆಲೆ ಏರಿಕೆಯಾಗಿದ್ದು, ಕಳೆದ ವರ್ಷ ಸಣ್ಣ ಪ್ರಮಾಣದ ಒಂದು ಬಾಗಿನ ಸೆಟ್ 10 ರು. ಇತ್ತು. ಈ ವರ್ಷ15-20 ರು.ಗೆ ಏರಿದ್ದು, ಉಳಿದಂತೆ ಮೊರ ಜೋಡಿಗೆ 150-180 ರು. ನಂತೆ ಮಾರಾಟವಾಗುತ್ತಿದ್ದವು.
ಪರಿಸರ ಸ್ನೇಹಿ ವಾಟರ್ಪೇಂಟ್ ಗಣಪ, ಆಯಿಲ್ ಪೇಂಟ್ ಗಣಪನ ಮೂರ್ತಿಗಳು ಬಸ್ ನಿಲ್ದಾಣದ ಹತ್ತಿರ, ರಂಗನಾಥಸ್ವಾಮಿ ದೇವಾಲಯದ ಆವರಣದಲ್ಲಿ ಕಂಡುಬಂದಿದ್ದು, ಅಂಗಡಿಗಳ ಮುಂದೆ ಪಟಾಕಿ, ಮೆರವಣಿಗೆಗೆ ಬಳಸುವ ಅಲಂಕಾರಿಕ ವಸ್ತುಗಳು ಜನರನ್ನು ಕೈಬೀಸಿ ಕರೆಯುತ್ತಿದ್ದವು. ಬಟ್ಟೆ ಅಂಗಡಿ, ಬಳೆ, ಕುಂಕುಮ,ಅರಿಶಿನ ಮಾರುವ ಅಂಗಡಿಗಳಲ್ಲಿ ಹೆಣ್ಣುಮಕ್ಕಳದ್ದೇ ಕಾರುಬಾರಾಗಿತ್ತು.