ಮಾದಿಗ ಸಮುದಾಯದ ಸಂಘಟನೆಗೆ ಶೀಘ್ರವೇ 2 ಎಕರೆ ಜಮೀನು
ಕ.ಪ್ರ.ವಾರ್ತೆ ಶಿರಾ ಸೆ. 8
ಪಟ್ಟಣದಲ್ಲಿ ಮಾದಿಗ ಸಮುದಾಯದ ಸಂಘಟನೆಗೆ 2 ಎಕರೆ ಜಮೀನನ್ನು ಶೀಘ್ರವಾಗಿ ನೀಡುವುದಾಗಿ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಬೃಹತ್ ಸಭೆಯಲ್ಲಿ ನುಡಿದರು.
ಅವರು ನಗರದ ಅಂಬೇಡ್ಕರ್ ಭವನದಲ್ಲಿ ಶಿರಾ ತಾಲೂಕು ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ್ದ ಬೃಹತ್ ಪ್ರತಿಭಾ ಪುರಸ್ಕಾರ ಮತ್ತು ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಆದಿ ಜಾಂಬವ ಸಮಾಜದ ವತಿಯಿಂದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸಮಾರಂಭ ಏರ್ಪಡಿಸಿರುವುದು ಶಿಕ್ಷಣಕ್ಕಾಗಿ ಒತ್ತು ನೀಡುತ್ತಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯವನ್ನು ಈಡೇರಿಸಿದಂತಾಗಿದೆ ಎಂದು ತಿಳಿಸಿ, ಇಂತಹ ಸಮಾರಂಭವನ್ನು ಪ್ರತಿ ವರ್ಷ ಮಾಡುವುದರ ಮೂಲಕ ಜನಾಂಗದ ಯುವಕರಲ್ಲಿ ಶಿಕ್ಷಣಕ್ಕೆ ಉತ್ತೇಜನ ನೀಡಬೇಕೆಂದು ತಿಳಿಸಿದರು. ಶಿಕ್ಷಣದಿಂದ ಮಾತ್ರ ಆದಿ ಜಾಂಬವ ಜನಾಂಗವು ಎಲ್ಲಾ ಕ್ಷೇತ್ರಗಳಲ್ಲೂ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಸೌಲಭ್ಯ ವಂಚಿತ: ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಲ್ಲಿ ಶೋಷಿತರಿಗೆ ಎಲ್ಲಾ ರೀತಿಯ ಅನುಕೂಲಗಳು ಒದಗಬೇಕು ಎಂಬ ಅವರ ಆಶಯ ಈಡೇರಿಲ್ಲ ಎಂದ ಸಚಿವರು ಎಲ್ಲಾ ಕ್ಷೇತ್ರಗಳಲ್ಲೂ ಆದಿ ಜಾಂಬವ ಜನಾಂಗಕ್ಕೆ ವಂಚಿತವಾಗಿದೆ. ಈ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಂಘಟನೆ ಅಗತ್ಯವಾಗಿದ್ದು, ಉತ್ತಮ ಸಂಘಟನೆ ಆಗಬೇಕಿದೆ ಎಂದರು. ಸದಾಶಿವ ಆಯೋಗದ ವರದಿ ಅನುಷ್ಠಾನದ ಬಗ್ಗೆ ಪ್ರಶ್ನಿಸಿದ ಸಭಿಕರಿಗೆ ಉತ್ತರಿಸಿದ ಸಚಿವರು ಕಳೆದ ಸರ್ಕಾರದಲ್ಲಿ ಎ.ಜೆ.ಸದಾಶಿವ ಆಯೋಗದ ಅನುಷ್ಠಾನ ಮತ್ತು ಅದರ ಆಗು ಹೋಗುಗಳ ಬಗ್ಗೆ ವಿಧಾನಸಭೆಯಲ್ಲಿ ಮೊದಲು ಮಾತನಾಡಿದವನು ನಾನೇ. ಈ ವರದಿ ಅನುಷ್ಠಾನದ ಬಗ್ಗೆ ನನಗೆ ಕಾಳಜಿ ಇದೆ ಎಂದರು.
ರಾಜಕೀಯ ಪ್ರಾತಿನಿಧ್ಯ: ಮಾದಿಗ ಜನಾಂಗಕ್ಕೆ ರಾಜಕೀಯ ಪ್ರಾತಿನಿಧ್ಯ ಅಗತ್ಯವಾಗಿದ್ದು, ಹಾಲಿ ಜಿ.ಪಂ. ಸದಸ್ಯ ಕೆಂಚಮಾರಯ್ಯ ಅವರಿಗ ಇನ್ನೂ ಉನ್ನತ ರಾಜಕೀಯ ಪ್ರಾತಿನಿಧ್ಯಕ್ಕೆ ಶ್ರಮಿಸುವುದಾಗಿ ತಿಳಿಸಿದರು.
ಜಿ.ಪಂ. ಸದಸ್ಯ ಕೆಂಚಮಾರಯ್ಯ ಅವರು ಆಶಯ ನುಡಿಗಳನ್ನಾಡುತ್ತ, ಶೋಷಿತ ಸಮಾಜದ ಮಕ್ಕಳು ಶಿಕ್ಷಣದಲ್ಲಿ ಅತಿ ಹೆಚ್ಚು ಅಂಕ ಪಡೆದು ಮುಂದೆ ಬಂದು ಸನ್ಮಾನದ ಮಟ್ಟಕ್ಕೆ ತಲುಪಿರುವುದು ಆದಿ ಜಾಂಬವ ಸಮಾಜದ ಅಭಿವೃದ್ಧಿಯ ಧ್ಯೋತಕವಾಗಿದ್ದು, ಸಮಾಜದ ಗೌರವಕ್ಕೆ ಶಿಕ್ಷಣ ಅಗತ್ಯವಾಗಿದೆ ಎಂದರು.
ಪ್ರತಿಭಾ ಪುರಸ್ಕಾರ: ಸಮಾರಂಭದಲ್ಲಿ 60 ಕ್ಕೂ ಹೆಚ್ಚು ವಿವಿಧ ಕೋರ್ಸುಗಳ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಡೆಸಲಾಯಿತು. ಇದೇ ಸಮಾರಂಭದಲ್ಲಿ 26 ಕ್ಕೂ ಹೆಚ್ಚು ನಿವೃತ್ತ ನೌಕರರಿಗೆ ಸನ್ಮಾನಿಸಲಾಯಿತು. ಆದಿ ಜಾಂಬವ ಜನಾಂಗದ ವತಿಯಿಂದ ಸಚಿವ ಟಿ.ಬಿ.ಜಯಚಂದ್ರ ಅವರಿಗೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಉಪ ಪ್ರಾಚಾರ್ಯ ರಾಮಚಂದ್ರಪ್ಪ ಸ್ವಾಗತಿಸಿದರು. ಉಪನ್ಯಾಸಕ ಕಳ್ಳಂಬೆಳ್ಳ ಜಯರಾಂ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಮಾದಿಗ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಡಿ.ಎಸ್.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ನಗರಸಭೆ ಸದಸ್ಯ ಬಸವರಾಜು, ತಾ.ಪಂ. ಸದಸ್ಯ ನಾಗರಾಜು, ಜಿ.ಪಂ. ಮಾಜಿ ಸದಸ್ಯ ಟಿ.ಲೋಕೇಶ್, ಉಪನ್ಯಾಸಕ ಕೊಟ್ಟ ಶಂಕರ್, ಜಿಲ್ಲಾ ಆದಿ ಜಾಂಬವ ಸಂಘಟನೆ ಅಧ್ಯಕ್ಷ ನರಸೀಯಪ್ಪ, ಎ.ಪಿ.ಎಂ.ಸಿ. ಅಧ್ಯಕ್ಷ ಶಶಿಧರ ಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಲ್ಲಾಬಕ್ಷ್ ಪ್ಯಾರು, ಕೆ. ನರಸಪ್ಪ, ಪಿ.ಬಿ.ನರಸಿಂಹಯ್ಯ, ಉಪನ್ಯಾಸಕ ರಾಜ್ಕುಮಾರ್, ವಸಂತಕುಮಾರ್, ಮತ್ತಿತರರು ಹಾಜರಿದ್ದರು.