ಮಾರುದ್ದ ಹೂವಿಗೆ ಊರುದ್ದ ರೇಟು
ಕನ್ನಡಪ್ರಭ ವಾರ್ತೆ ತುಮಕೂರು ಸೆ.8
ಮಾರುಕಟ್ಟೆಯಲ್ಲಿ ವಸ್ತುಗಳ ಬೆಲೆ ಆಕಾಶಕ್ಕೇರಿದರೂ ಗಣೇಶ ಹಬ್ಬದ ಸಂಭ್ರಮ ಮಾತ್ರ ಒಂದಿಷ್ಟು ಕಡಿಮೆಯಾಗಿಲ್ಲ.
ಗೌರಿ ಹಬ್ಬ ಮುಗಿಸಿರುವ ಜನತೆ ಗಣೇಶ ಹಬ್ಬದ ಸಂಭ್ರಮದಲ್ಲಿ ತೊಡಗಿದ್ದಾರೆ. ಬಾಳೆ ಕಂದು, ಮಾವಿನ ತೋರಣ, ಥರೇವಾರಿ ಹೂವುಗಳು, ತರಕಾರಿ, ದಿನಸಿ ಪದಾರ್ಥಗಳು, ಬಟ್ಟೆ, ಪಟಾಕಿ ಕೊಳ್ಳುವ ಸಂಭ್ರಮದಲ್ಲಿ ಜನತೆ ತೊಡಗಿದ್ದಾರೆ.
ತುಮಕೂರಿನ ಸಿದ್ಧಿವಿನಾಯಕ ಮಾರುಕಟ್ಟೆಯಲ್ಲಿ ಅಕ್ಷರಶಃ ಓಡಾಡಲು ಜಾಗವೇ ಇಲ್ಲದಂತಾಗಿದೆ.
ತುಮಕೂರು ಸುತ್ತಮುತ್ತಲಿನ ನೂರಾರು ಹಳ್ಳಿಗಳ ಜನ ಪ್ರತಿ ದಿನವೂ ಈ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಇಟ್ಟುಕೊಂಡಿರುತ್ತಾರೆ. ಆದರೆ ಹಬ್ಬದ ಹಿನ್ನೆಲೆಯಲ್ಲಿ ಹೆಚ್ಚುವರಿಯಾಗಿ ಜನ ಮಾರುಕಟ್ಟೆಗೆ ದೌಡಾಯಿಸುತ್ತಿದ್ದಾರೆ. ಅಲ್ಲದೇ ಹಬ್ಬ ವಾರಾಂತ್ಯದಲ್ಲಿ ಬಂದಿರುವುದರಿಂದ ಸಂಭ್ರಮಕ್ಕೆ ಕೊರತೆ ಇಲ್ಲ. ಅಲ್ಲದೇ ತುಮಕೂರಿನಲ್ಲಿ ಮಳೆ ಬೇರೆ ಬಿದ್ದಿರುವುದರಿಂದ ಮಾರುಕಟ್ಟೆಯಲ್ಲಿ ಕೆಸರು ನಿರ್ಮಾಣವಾಗಿತ್ತು. ಇದ್ಯಾವುದನ್ನು ಲೆಕ್ಕಿಸದೆ ಜನ ಹಬ್ಬಕ್ಕೆ ವಸ್ತುಗಳನ್ನು ಕೊಳ್ಳುವ ಉತ್ಸುಕದಲ್ಲಿದ್ದಾರೆ.
ಒಂದು ಮಾರು ಹೂವಿನ ಬೆಲೆ 70 ರು.: ಸೇವಂತಿಗೆ, ಕಾಕಡ, ಮಲ್ಲಿಗೆ ಹೀಗೆ ಯಾವುದೇ ಹೂವನ್ನು ಖರೀದಿ ಮಾಡಿದರೂ ಮಾರಿಗೆ 70 ರು. ಹಣ ತೆತ್ತಬೇಕು. ಈ ಬಾರಿ ಪ್ರತಿ ವರ್ಷದಂತೆ ವ್ಯಾಪಾರ ಕೂಡ ಜೋರಾಗಿದೆ ಎನ್ನುತ್ತಾರೆ ವ್ಯಾಪಾರಿಗಳು. ಬೇಡಿಕೆ ಹೆಚ್ಚಾಗಿದೆ. ಮಾರುಕಟ್ಟೆಯಲ್ಲಿ ಹೂವು ಕಡಿಮೆ ಬಂದಿದೆ. ಹೀಗಾಗಿ ಹೂವು ದುಬಾರಿಯಾಗಿದೆ. ಆದರೆ ಜನ ಮಾತ್ರ ಹೂವಿನ ಖರೀದಿಗೆ ಮುಗಿ ಬೀಳುತ್ತಿದ್ದಾರೆ.
ಎಲ್ಲೆಲ್ಲೂ ಗಣಪ: ಈಗಾಗಲೇ ವಿಘ್ನ ನಿವಾರಕ ಗಣೇಶನನ್ನು ಕೊಳ್ಳಲು ಎಲ್ಲೆಲ್ಲೂ ಬತ್ತದ ಉತ್ಸಾಹ ಮನೆ ಮಾಡಿದೆ. ತುಮಕೂರಿನ ಮಾರುಕಟ್ಟೆ ಸೇರಿದಂತೆ ಬಸ್ ನಿಲ್ದಾಣ, ಬಿ.ಎಚ್. ರಸ್ತೆ, ಅಶೋಕ ರಸ್ತೆ, ಎಸ್ಐಟಿ, ಗೋಕುಲ ಬಡಾವಣೆ, ಸೋಮೇಶ್ವರಪುರಂ, ಜಯನಗರ ಹೀಗೆ ಬಹುತೇಕ ಎಲ್ಲಾ ಬಡಾವಣೆಗಳಲ್ಲೂ ಕೂಡ ದೊಡ್ಡಮಟ್ಟದಲ್ಲಿ ಮಣ್ಣಿನ ಗಣಪ ಮಾರಾಟಕ್ಕೆ ಲಭ್ಯ.
ಎಲ್ಲೆಲ್ಲೂ ಗಣಪನ ಪ್ರತಿಷ್ಠಾಪನೆ: ಈಗಾಗಲೇ ತುಮಕೂರಿನ ಬಹುತೇಕ ಎಲ್ಲಾ ಬಡಾವಣೆಗಳಲ್ಲಿ ವಿವಿಧ ಸಂಘ ಸಂಸ್ಥೆಗಳನ್ನು ಗಣೇಶನನ್ನು ಪ್ರತಿಷ್ಠಾಪಿಸಲು ಸಿದ್ಧತೆ ನಡೆಸುತ್ತಿದೆ. ಹೀಗಾಗಿ ತುಮಕೂರು ನಗರದಲ್ಲಿ ಎಲ್ಲೆಂದರಲ್ಲಿ ಮೈಕ್ ಸೆಟ್ಗಳ ಹಾವಳಿ ಜೋರಾಗಿದೆ. ಈಗಾಗಲೇ ಗಣಪನನ್ನು ತಂದು ಪ್ರತಿಷ್ಠಾಪನೆ ಕೂಡ ಮಾಡಲಾಗಿದೆ. ಒಟ್ಟಾರೆಯಾಗಿ ತುಮಕೂರಿನಲ್ಲಿ ಈ ಬಾರಿ ಭರ್ಜರಿ ಗಣೇಶನ ಹಬ್ಬಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಬಟ್ಟೆ ಅಂಗಡಿಯಲ್ಲಿ ಕ್ಯೂ: ಹಬ್ಬಕ್ಕೆ ಬಟ್ಟೆ ಖರೀದಿ ಕೂಡ ಜೋರಾಗಿ ನಡೆಯುತ್ತಿದೆ. ತುಮಕೂರಿನ ಆರ್ಥಿಕ ವಹಿವಾಟಿನ ಕೇಂದ್ರ ಸ್ಥಾನವಾಗಿರುವ ಎಂ.ಜಿ. ರಸ್ತೆಯ ಬಹುತೇಕ ಬಟ್ಟೆ ಅಂಗಡಿಗಳು ಜನಜಂಗುಳಿಯಿಂದ ತುಂಬಿ ತುಳುಕುತ್ತಿತ್ತು.
ಎಟಿಎಂನಲ್ಲಿ ಕ್ಯೂ: ಹಬ್ಬಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದ್ದು ವಸ್ತುಗಳ ಖರೀದಿಗೆ ಹಣ ಕೊಳ್ಳಲು ಜನ ಎಟಿಎಂ ಮುಂದೆ ಎಡತಾಕುತ್ತಿದ್ದಾರೆ. ತುಮಕೂರಿನಲ್ಲಿರುವ ಬಹುತೇಕ ಎಲ್ಲಾ ಎಟಿಎಂ ಮುಂದೆ ಸರದಿ ಸಾಲಿನಲ್ಲಿ ನಿಂತು ಜನ ಹಣ ಪಡೆಯಲು ಉತ್ಸುಕರಾಗಿದ್ದಾರೆ.