ಹೊನ್ನುಡಿಕೆಯಲ್ಲಿ ತೆರೆದ ಮನೆ ಸಭೆ
ತುಮಕೂರು: ಇಲ್ಲಿಗೆ ಸಮೀಪದ ಹೊನ್ನುಡಿಕೆಯ ಸ್ವರ್ಣಾಂಬ ಪ್ರೌಢಶಾಲೆಯಲ್ಲಿ ತೆರೆದ ಮನೆ ಸಭೆ ಆಯೋಜಿಸಲಾಗಿತ್ತು. ಜೈಲ್ಡ್ ಚೈನ್ ವತಿಯಿಂದ ಈ ಸಭೆ ನಡೆಯಿತು. ಚೈಲ್ಡ್ಲೈನ್ನ ದೂರವಾಣಿ ಸಂಖ್ಯೆ 1098(ಉಚಿತ ಕರೆ) ರ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ ಮಕ್ಕಳ ಜತೆ ಸಮಾಲೋಚನೆ ನಡೆಸಲಾಯಿತು. ಸಂಕಷ್ಟದಲ್ಲಿರುವ ಮತ್ತು ಯಾವುದೇ ರೀತಿಯ ತೊಂದರೆಯಲ್ಲಿರುವ ಮಕ್ಕಳು ಸಹಾಯಕ ಚೈಲ್ಡ್ ಲೈನ್ ಸಂಪರ್ಕಿಸಲು ಸಂಸ್ಥೆ ನಿರ್ದೇಶಕ ಉಮೇಶ್ ವಿನಂತಿಸಿದರು. ಪ್ರಧಾನ ಶಿಕ್ಷಕ ಎಲ್. ಶಿವಾನಂದ್ ಮಾತನಾಡಿ ಚೈಲ್ಡ್ ಲೈನ್ ಯೋಜನೆಯ ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು. ಶಾಲೆಯ ಸಹ ಶಿಕ್ಷಕ ಸಿ.ಟಿ. ದಾಸೇಗೌಡ ಸ್ವಾಗತಿಸಿದರು. ಸಮಾಲೋಚಕಿ ಸವಿತಾ ವಂದಿಸಿದರು. ನೇತ್ರಾವತಿ ನಿರೂಪಿಸಿದರು. ಅಂತರಸನಹಳ್ಳಿಯ ನಿಖಿಲ್ ಮತ್ತು ಸ್ನೇಹಿತರು ಸಿಹಿ ವಿತರಿಸಿದರು.
ಸ್ಥಳೀಯ ಆಹಾರ ಸೇವನೆ ಪೌಷ್ಟಿಕಾಂಶ
ತಿಪಟೂರು: ಗ್ರಾಮೀಣ ಜನರು ತಾವು ಬೆಳೆಯುವ ಆಹಾರ ಧಾನ್ಯಗಳಲ್ಲಿ ಹೇರಳವಾಗಿ ಪೋಷಕಾಂಶಗಳನ್ನು ಒಳಗೊಂಡಿದ್ದು, ನಿಗದಿತವಾಗಿ ಇವುಗಳ ಸೇವನೆ ಮಾಡುವುದರಿಂದ ಆರೋಗ್ಯವಂತ ಜೀವನ ನಡೆಸಬಹುದೆಂದು ಜಿಲ್ಲಾ ಪಂಚಾಯತಿ ಸದಸ್ಯ ಆನಂದರವಿ ತಿಳಿಸಿದರು. ತಾಲೂಕಿನ ಕಿಬ್ಬನಹಳ್ಳಿ ಹೋಬಳಿ ಹಿಂಡಿಸ್ಕೆರೆ ಗ್ರಾಮದಲ್ಲಿ ನಡೆದ ತಾಲೂಕು ಕಾನೂನು ಸೇವೆಗಳ ಸಮಿತಿ, ತಾಲೂಕು ಆಡಳಿತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ವಕೀಲರ ಸಂಘ, ಆರೋಗ್ಯ ಇಲಾಖೆ ಮತ್ತಿತರ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣೆ ಕಾಯ್ದೆ ಕುರಿತ ಜಾಗೃತಿ ಶಿಬಿರ ಹಾಗೂ ರಾಷ್ಟ್ರೀಯ ಪೌಷ್ಟಿಕ ಆಹಾರ ಸಪ್ತಾಹ ಕಾರ್ಯಕ್ರವನ್ನು ಉದ್ಘಾಟಿಸಿ ಮಾತನಾಡಿದರು.
ಎರಡು ಕಡೆ ಅಪಘಾತ
ಚಿಕ್ಕನಾಯಕನಹಳ್ಳಿ: ಹಬ್ಬದ ದಿನ ತಾಲೂಕಿನ ಎರಡು ಕಡೆ ಅಪಘಾತ ಸಂಭವಿಸಿದ್ದು ತೀವ್ರ ಗಾಯಗೊಂಡಿರುವ ಘಟನೆ ನಡೆದಿದೆ. ಭಾನುವಾರ ಮಧ್ಯಾಹ್ನ ಹಂದನಕೆರೆ ಠಾಣಾವ್ಯಾಪ್ತಿಯಲ್ಲಿ ಮತಿಗಟ್ಟ ಸಮೀಪ ಮಲ್ಲೇನಹಳ್ಳಿ ತಾಂಡ್ಯದ ಮಗುವೊಂದು ಅಪಘಾತಕ್ಕೀಡಾಗಿ ಚಿಕಿತ್ಸೆಗಾಗಿ ತಿಪಟೂರಿನ ಆಸ್ಪತ್ರೆಗೆ ಸೇರಿಸಿರುವುದಾಗಿ ತಿಳಿದು ಬಂದಿದೆ. ಚಿ.ನಾ.ಹಳ್ಳಿ ಠಾಣಾವ್ಯಾಪ್ತಿಯ ಸಾಲ್ಕಟ್ಟೆ ಕ್ರಾಸ್ ಬಳಿ ನಾಲ್ವರು ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದ ರಸ್ತೆ ಉಬ್ಬು ಹತ್ತಿರ ದ್ವಿಚಕ್ರ ಸವಾರ ಬ್ರೇಕ್ ಹಾಕಲಾಗಿ ಬೈಕಿಗೆ ಲಾರಿ ಹಿಂದಿನಿಂದ ಗುದ್ದಿದೆ. ನಾಲ್ವರು ಸವಾರರಿಗೆ ಹಿಂದಿನಿಂದ ಬಂದ ಲಾರಿಯೊಂದು ಗುದ್ದಿದ ಪರಿಣಾಮ ಹಿಂಬದಿಯಲ್ಲಿದ್ದ ಇಬ್ಬರು ಸವಾರರು ನೆಗೆದು ಅಪಾಯದಿಂದ ಪಾರಾಗಿದ್ದಾರೆ.ದ್ವಿಚಕ್ರವಾಹನದಲ್ಲಿ ಕುಳಿತಿದ್ದ ಇಬ್ಬರು ತೀವ್ರ ಗಾಯಗೊಂಡಿದ್ದು, ಒಬ್ಬನಿಗೆ ಕಾಲು ತುಂಡಾಗಿದ್ದು, ಮತ್ತೊಬ್ಬನಿಗೆ ಕಿಬ್ಬೊಟ್ಟೆ ಭಾಗದ ಮಾಂಸಖಂಡವೆಲ್ಲಾ ಹೊರಗೆ ಬಂದಿದೆ. ತುಮಕೂರಿಗೆ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ.