ಜೆಡಿಯು ಅಭ್ಯರ್ಥಿಗೆ ಬೆಂಬಲವಿಲ್ಲ: ಪ್ರಕಾಶ್ ಯಾದವ್
ತಿಪಟೂರು: ಜೆಡಿಯು ಲೋಕಸಭಾ ಅಭ್ಯರ್ಥಿಯನ್ನು ಬೆಂಬಲಿಸುವುದಿಲ್ಲ ಎಂದು ಜೆಡಿಯು ಮುಖಂಡರಾದ ಪ್ರಕಾಶ್ ಯಾದವ್ ತಿಳಿಸಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆಯಲ್ಲಿನ ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದಿಂದ ಜೆಡಿಯು ಪಕ್ಷದಿಂದ ಸ್ಪರ್ಧಿಸಿದ್ದು ಚುನಾವಣೆಯಲ್ಲಿ ಜಿಲ್ಲಾ ಹಾಗೂ ರಾಜ್ಯನಾಯಕರು ಪ್ರಚಾರ ಕಾರ್ಯಕ್ಕೆ ಬರದೇ ನಿರ್ಲಕ್ಷ್ಯ ತೋರಿದ್ದರು. ಆದರೂ ತಮ್ಮ ವೈಯಕ್ತಿಕ ವರ್ಚಸ್ಸಿನ ಮೇಲೆ ನಾನು ಸಾಕಷ್ಟು ಮತಗಳನ್ನು ಪಡೆದಿದ್ದು, ರಾಜ್ಯ ಹಾಗೂ ಜಿಲ್ಲಾ ನಾಯಕರ ನಡವಳಿಕೆಯಿಂದ ತೀವ್ರ ನೋವುಂಟಾಗಿದೆ. ನಾಯಕರು ಇದುವರೆಗೂ ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ಕಷ್ಟಗಳಿಗೆ ಸ್ಪಂದಿಸದಿದ್ದರಿಂದ ಬೇಸರವಾಗಿದೆ. ಆದ್ದರಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜೆಡಿಯು ಅಭ್ಯರ್ಥಿಯನ್ನು ನಾನು ಬೆಂಬಲಿಸುವುದಿಲ್ಲ. ಏಪ್ರಿಲ್ 8ರಂದು ತಾಲೂಕಿನ ಕಾರ್ಯಕರ್ತರ ಹಾಗೂ ಅಭಿಮಾನಿಗಳು ಮತ್ತು ರಾಜ್ಯ ಯಾದವ ಯುವ ಸೇನೆಯ ಪದಾಧಿಕಾರಿಗಳು ಕಾರ್ಯಕರ್ತರ ಸಭೆ ಕರೆದು ಅವರ ಮಾರ್ಗದರ್ಶನ ಸಲಹೆಯಂತೆ ಮುಂದಿನ ನಡೆಯನ್ನು ತೀರ್ಮಾನಿಸುವುದಾಗಿ ಪ್ರಕಾಶ್ ಯಾದವ್ ತಿಳಿಸಿದ್ದಾರೆ.