ಡಿಪ್ಲೊಮೋ ಪದವೀಧರರಿಗೆ ಅಧಿಕ ಉದ್ಯೋಗಾವಕಾಶ
ತುಮಕೂರು: ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅನೇಕ ಕೈಗಾರಿಕೆಗಳು ಹಾಗೂ ಕಂಪನಿಗಳು ಎಂಜಿನಿಯರ್
ಪದವೀಧರರಿಗಿಂತ ಡಿಪ್ಲೊಮೋ ಪದವೀಧರರಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿದ್ದು ಡಿಪ್ಲೊಮೋ ಪದವೀಧರರಿಗೆ ಅಧಿಕ ಉದ್ಯೋಗಾವಕಾಶಗಳಿವೆ ಎಂದು ವಿಜ್ಞಾನ ಸಂಸ್ಥೆಯ ಕರ್ನಾಟಕ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಷತ್ತಿನ ಫೆಲೋ ಪ್ರಧಾನ ಸಂಶೋಧಕ ಡಾ. ಎಸ್.ಜಿ. ಶ್ರೀಕಂಠೇಶ್ವರ ಸ್ವಾಮಿ ಅಭಿಪ್ರಾಯಪಟ್ಟರು.
ಅವರು ತುಮಕೂರಿನ ಆರ್ಯಭಾರತಿ ಪಾಲಿಟೆಕ್ನಿಕ್ನಲ್ಲಿ ಏರ್ಪಟ್ಟಿದ್ದ ಆರ್ಯಟೆಕ್ 2014 ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಇಂದು ನೂತನವಾಗಿ ಪ್ರಾರಂಭಗೊಳ್ಳುತ್ತಿರುವ ಹಲವು ಕಂಪನಿಗಳಲ್ಲಿ ಪ್ರತಿಭಾನ್ವಿತ ಡಿಪ್ಲೊಮೋ ಪದವೀಧರರಿಗೆ ವಿಫುಲ ಅವಕಾಶಗಳು ದೊರೆಯುತ್ತಿವೆ.
ಇದಕ್ಕನುಗುಣವಾಗಿ ವಿದ್ಯಾರ್ಥಿಗಳೂ ಪರಿಶ್ರಮದಿಂದ ಅಧ್ಯಯನ ಮಾಡಿ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ಅರಿವು ಮೂಡಿಸಿಕೊಳ್ಳಬೇಕು.
ಜತೆಗೆ ತಾಂತ್ರಿಕ ವಸ್ತು ಪ್ರದರ್ಶನ, ಸೆಮಿನಾರ್ಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಜ್ಞಾನ ಹೆಚ್ಚಿಸಿಕೊಳ್ಳಬೇಕು ಎಂದರು.ಬೆಂಗಳೂರಿನ ಎಸ್ಎಸ್ ಎಂಜಿನಿಯರಿಂಗ್ ವರ್ಕ್ಸ್ನ ವ್ಯವಸ್ಥಾಪಕ ನಿರ್ದೇಶಕ ಡಾ. ಕೆ. ಶ್ಯಾಮಸುಂದರ್ ಮಾತನಾಡಿ ಇಂದು ಜಾಗತಿಕವಾಗಿ ತಂತ್ರಜ್ಞಾನ ಕ್ಷೇತ್ರ ಅತ್ಯಂತ ವಿಸ್ತಾರವಾಗಿ ಬೆಳೆದಿದ್ದು ಕೇವಲ ಕೈ ಬೆರಳ
ತುದಿಯಲ್ಲಿ ಏನನ್ನು ಬೇಕಾದರೂ ಮಾಡಬಹುದಾಗಿದೆ. ಆದರೆ ದುರಾದೃಷ್ಟವಶಾತ್ ಕೆಲವರು ತಮ್ಮ ಕಾರ್ಯಗಳಿಗೂ ತಂತ್ರಜ್ಞಾನ ಬಳಸುತ್ತಾ ಅದನ್ನು ಬಿಟ್ಟರೆ ಜೀವನವೇ ಇಲ್ಲವೆಂಬಂತೆ ಅದರ ಗುಲಾಮರಾಗಿದ್ದಾರೆ ಎಂದರು. ಸಂಸ್ಥೆಯ ಕಾರ್ಯದರ್ಶಿ ಆರ್.ಎನ್. ಸತ್ಯನಾರಾಯಣ ಮಾತನಾಡಿ ಕಾಲೇಜು ನಡೆದು ಬಂದ ಹಾದಿಯನ್ನು ವಿವರಿಸಿದರು. ಸಂಸ್ಥೆಯ ಅಧ್ಯಕ್ಷ ಕೆ. ನರಸಿಂಹಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ
ಅನಂತರಾಮಯ್ಯ, ಖಜಾಂಚಿ ಡಿ. ನಾರಾಯಣ ಇದ್ದರು. ಇದೇ ಸಂದರ್ಭದಲ್ಲಿ ಪಾಲಿಟೆಕ್ನಿಕ್ ಸ್ಥಳ ದಾನಿಗಳಾದ ಕೆ. ನಾರಾಯಣ ಅವರ ಪುತ್ರ ಹಾಗೂ ಉದ್ಯಮಿ ಕೆ.ಎನ್. ಶಂಕರನಾರಾಯಣ ಗುಪ್ತ ಅವರನ್ನು
ಸನ್ಮಾನಿಸಲಾಯಿತು. ಅತಿ ಹೆಚ್ಚು ಅಂಕ ಗಳಿಸಿದ ಹಾಗೂ ಕ್ರೀಡೆಯಲ್ಲಿ ವಿಶೇಷ ಸಾಧನೆ ಮಾಡಿದ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆ ನೀಡಲಾಯಿತು.
ಪ್ರಾಚಾರ್ಯ ಕೆ.ಆರ್. ಅಶೋಕ್ ವರದಿ ಓದಿದರು. ಎಸ್.ಜೆ. ದಿವ್ಯಾನಿ ಪ್ರಾರ್ಥಿಸಿದರು. ಉಪಪ್ರಾಚಾರ್ಯ ಬಿ.ವಿ. ರಾಜೇಂದ್ರಕುಮಾರ್ ಸ್ವಾಗತಿಸಿದರು. ಎಂ. ಹನುಮಂತಯ್ಯ ವಂದಿಸಿದರು. ನಂದಾರಾಜ್ ನಿರೂಪಿಸಿದರು.