ಶೋಷಣೆ, ದೌರ್ಜನ್ಯ ವಿರುದ್ಧ ಸಂಘಟಿತ ಹೋರಾಟ ನಡೆಸಿ
ಮದ್ದೂರು: ಶೋಷಣೆ ಮತ್ತು ದೌರ್ಜನ್ಯಗಳ ವಿರುದ್ಧ ಮಹಿಳೆಯರು ಸಂಘಟಿತ ಹೋರಾಟ ನಡೆಸುವಂತೆ ಜೆಎಂಎಫ್ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ಶಿವಕುಮಾರ್ ಹೇಳಿದರು. ಪಟ್ಟಣದ ಎಚ್.ಕೆ.ವೀರಣ್ಣಗೌಡ ಕಾಲೇಜಿನಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ತಾಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘದ ಸಹಯೋಗದಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜದಲ್ಲಿ ದಿನನಿತ್ಯ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ಇವುಗಳ ನಿಗ್ರಹಕ್ಕೆ ಸಾಕಷ್ಟು ಕಾನೂನುಗಳು ಇದ್ದರೂ ಕಾನೂನಿನ ಅರಿವಿನ ಕೊರತೆಯಿಂದ ದೌರ್ಜನ್ಯಗಳನ್ನು ತಡೆಗಟ್ಟಲು ಸಾಧ್ಯವಾಗಿಲ್ಲ ಎಂದರು. ಮಹಿಳೆಯರ ಶೋಷಣೆ ಹಾಗೂ ದೌರ್ಜನ್ಯಗಳಿಂದ ಸೂಕ್ತ ರಕ್ಷಣೆ ನೀಡಲು ಕಾನೂನಿನ ಮೂಲಕ ವಿಶೇಷ ಹಕ್ಕು ಮತ್ತು ಸವಲತ್ತು ನೀಡಲಾಗಿದೆ. ಮಹಿಳೆಯರು ಇವುಗಳ ಸದುಪಯೋಗದ ಪಡೆದುಕೊಳ್ಳುವ ಜತೆಗೆ ಶೋಷಣೆ ಮತ್ತು ದೌರ್ಜನ್ಯಗಳ ವಿರುದ್ಧ ಜಾಗೃತರಾಗಿ ಹೋರಾಟ ನಡೆಸಬೇಕು ಎಂದು ನ್ಯಾ. ಶಿವಕುಮಾರ್ ಕಿವಿಮಾತು ಹೇಳಿದರು.
ವಕೀಲರಾದ ವಿಲಾಸಿನಿ ಹಾಗೂ ಎಚ್.ಎಸ್.ರಾಣಿ ಕೌಟುಂಬಿಕ ದೌರ್ಜನ್ಯ ಕಾಯ್ದೆ ಹಾಗೂ ಮಹಿಳಾ ಕಾರ್ಮಿಕರ ಹಕ್ಕು ಕುರಿತು ಉಪನ್ಯಾಸ ನೀಡಿದರು.