ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಸಂಭ್ರಮದ ಯುಗಾದಿ ಆಚರಣೆ

Rashmi Kasaragodu
Updated On : 2 Apr 2014, 2:43 am

ಹುಳಿಯಾರು: ಹೊಸವರ್ಷಕ್ಕೆ ಮುನ್ನುಡಿಯಾಗಿರುವ ಹಿಂದೂ ಸಂಪ್ರದಾಯದ ಪ್ರಮುಖ ಹಾಗೂ  ಜಯ  ನಾಮ ಸಂವತ್ಸರದ ಮೊದಲ ದಿನವಾದ ಯುಗಾದಿ ಹಬ್ಬವನ್ನು ಸೋಮವಾರ ಹುಳಿಯಾರಿನಲ್ಲಿ ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು.
ಸಂಪ್ರದಾಯದಂತೆ ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಮನೆಮಂದಿಯೆಲ್ಲ ಅಭ್ಯಂಜನ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಪೂಜೆ ಸಲ್ಲಿಸಿ, ಒಬ್ಬಟ್ಟಿನ ಊಟ ಮಾಡಿ ಸಂಭ್ರಮಿಸಿದರು.  ಕಷ್ಟ, ಸುಖ ಎರಡನ್ನೂ ಸಮಾನವಾಗಿ ಸ್ವೀಕಸಬೇಕೆಂಬ ಸಂಕೇತ ಸಾರುವ ಬೇವು-ಬೆಲ್ಲ ಸೇವಿಸಿದರು. ಹಬ್ಬದಲ್ಲಿ ಪಂಚಾಂಗ ಪೂಜೆ ಕೂಡ ಬಹುಮುಖ್ಯ ಆಚರಣೆಯಾಗಿದ್ದು ಅಂದು ಕೆಲವರು ಮನೆಗೆ ಹೊಸ ಪಂಚಾಂಗವನ್ನು ತಂದು ಪೂಜಿಸಿ ಪಂಚಾಂಗ ಶ್ರವಣ ಮಾಡಿಸಿದರೆ ಮತ್ತೆ ಕೆಲವರು ದೇವಸ್ಥಾನಗಳಿಗೆ ತೆರಳಿ ಸಾಮೂಹಿಕ ಪಂಚಾಂಗ ಶ್ರವಣದಲ್ಲಿ ಭಾಗವಹಿಸಿ ಈ ವರ್ಷದ ಆಯವ್ಯಯ, ಆರೋಗ್ಯ ಮುಂತಾದವುಗಳನ್ನು ಅವರವರ ರಾಶಿ ಫಲದ ಮೇಲೆ ತಿಳಿದುಕೊಂಡರು.
ಹಬ್ಬದ ಪ್ರಯುಕ್ತ ಇಲ್ಲಿನ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಿತು. ವಾಸವಿ, ಬನಶಂಕರಿ ದೇವಾಲಯದಲ್ಲಿ ಪಂಚಾಂಗ ಶ್ರವಣ ನಡೆಯಿತು. ಈಶ್ವರ ದೇವಾಲಯದಲ್ಲಿ ಪಾನಕ ಫಲಹಾರ ಸೇವೆ ನಡೆಯಿತು.
ಬಿದಿಗೆ ಚಂದ್ರ: ಗಣೇಶ ಚತುರ್ಥಿಯ ಬಿದಿಗೆ ಚಂದ್ರ ದರ್ಶನ ಮಾಡುವುದು ಅಪವಾದವಾದರೆ ಯುಗಾದಿ ಪಾಡ್ಯದ ನಂತರದ ಬಿದಿಗೆ ಚಂದ್ರದರ್ಶನ ಶುಭ ಎನ್ನುವ ಪ್ರತಿತಿ ಇದ್ದು ಸಂಜೆ  ನವ ಸಂವತ್ಸರದ ಮೊದಲ ಚಂದ್ರನ ದರ್ಶನ ಪಡೆದರು. ಒಟ್ಟಾರೆ ಎರಡು ದಿನಗಳ ಕಾಲ ಯುಗಾದಿ ಸಂಭ್ರಮ ತುಂಬಿ ತುಳುಕುತಿತ್ತು.
ವರ್ಷದ ತೊಡಕು: ಯುಗಾದಿ ಹಬ್ಬದ ಮಾರನೆಯ ದಿನವನ್ನು ವರ್ಷ ತೊಡಕು ಎಂದು ಆಚರಿಸಲಾಗುತ್ತದೆ. ವರ್ಷ ತೊಡಕು ಎನ್ನುವುದು ಹೊಸ ಕಾರ್ಯಗಳಿಗೆ ತೊಡಗಿಸಿಕೊಳ್ಳುವ ದಿನವಾಗಿದ್ದು, ಅಂದು ವರ್ಷಪೂರ್ತಿಯಾವುದೇ ತೊಡಕುಗಳು ಬಾರದಿರಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಳ್ಳಲಾಗುತ್ತದೆ. ಹೀಗಾಗಿ ವರ್ಷ ತೊಡಕಿಗೂ ಯುಗಾದಿ ದಿನದಷ್ಟೇ ಪ್ರಾಮುಖ್ಯತೆ. ಮಾಂಸಹಾರಿ ವರ್ಗದ ಜನ ಹಬ್ಬವನ್ನು ಕೇವಲ ಒಬ್ಬಟ್ಟಿನ ಊಟಕ್ಕೆ ಸೀಮಿತಗೊಳಿಸದೆ ಕುರಿ ಕೋಳಿ ಅಡಿಗೆ ಮಾಡಿ ವರ್ಷದ ತೊಡಕು ಆಚರಿಸುವುದು ಸಾಮಾನ್ಯ. ಸಂಬಂಧಿಗಳನ್ನು ಹಾಗೂ ಸ್ನೇಹಿತರನ್ನು ಊಟಕ್ಕೆ ಕರೆಯುವುದು ವಾಡಿಕೆ. ಹಬ್ಬದ ಹೊಸ ತೊಡಕು ಪ್ರಯುಕ್ತ ಮುಂಜಾನೆಯಿಂದಲೆ ಪಟ್ಟಣದ ಎಲ್ಲಾ ಕೋಳಿ ಅಂಗಡಿಗಳಲ್ಲಿ ಮಾಂಸದ ವ್ಯಾಪಾರ ಭರ್ಬರಿಯಾಗಿ ನಡೆದರೆ ತರಕಾರಿ ಅಂಗಡಿಯಲ್ಲಿ ಅದಕ್ಕೆ ಕಮ್ಮಿಯಿಲ್ಲದಂತೆ ಶುಂಠಿ, ಕೊತ್ತಂಬರಿ, ಸೌತೆಕಾಯಿ, ನಿಂಬೆಹಣ್ಣು ವ್ಯಾಪಾರ ಭರ್ಜರಿಯಾಗಿ ನಡೆಯಿತು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement