'ಹೆಣ್ಣಿನ ನಿರಂತರ ಶೋಷಣೆ'
ತುಮಕೂರು: ಸಬಲೀಕರಣವನ್ನು ನಮಗೆ ನಾವೇ ಮಾಡಿಕೊಳ್ಳಬೇಕು ವಿನಃ ಬೇರೆಯವರಿಂದ ಸಬಲೀಕರಣ ಸಾಧ್ಯವಿಲ್ಲವೆಂದು ಪ್ರೊ. ಬಿ.ಎಸ್. ಮಂಜುಳಾ ಅಭಿಪ್ರಾಯಪಟ್ಟರು.
ಅವರು ಇಲ್ಲಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಹೆಣ್ಣು ಮತ್ತು ಗಂಡಿಗೆ ದೈಹಿಕ ವ್ಯತ್ಯಾಸಗಳಷ್ಟೆ ಆಗಿದ್ದು ಇಬ್ಬರ ಆತ್ಮ, ಹೃದಯ, ಮನಸ್ಸುಗಳೆಲ್ಲ ಒಂದೇ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಶೈಲಾ ನಾಗರಾಜ್ ಮಾತನಾಡಿ ಸಾಮಾಜಿಕ ಪಿಡುಗುಗಳು ಮಹಿಳೆಯರನ್ನು ಬಾಧಿಸುತ್ತಿವೆ.
ನಮ್ಮನ್ನು ನಾವು ಅರ್ಥ ಮಾಡಿಕೊಂಡಾಗ ಮಾತ್ರ ಒಂದು ಅರ್ಥ ಸಿಗುತ್ತದೆ. ಯುವತಿಯರಿಂದ ಹಿಡಿದು ಮುದುಕಿಯವರೆಗೂ ಶೋಷಣೆ ನಡೆಯುತ್ತಿದೆ ಎಂದರು.
ಸಬಲೀಕರಣ ಘಟಕದ ಮಾಜಿ ಸಂಚಾಲಕಿ ಎಂ.ಎಸ್. ವಿಜಯಕುಮಾರಿ ಮಾತನಾಡಿ ಬರೀ ಗಂಡಸು, ಹೆಂಗಸಿನ ಪ್ರಪಂಚವನ್ನು ಊಹಿಸಲು ಸಾಧ್ಯವಿಲ್ಲ. ಕಲುಷಿತ ಅಭದ್ರ ಸಮಾಜದಲ್ಲಿ ರಕ್ಷಣೆಯನ್ನು ಹೇಗೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಆತ್ಮಶಕ್ತಿ ಹೆಚ್ಚಿಸಿಕೊಳ್ಳಬೇಕು. ಆತ್ಮಸಾಕ್ಷಿಯಿಂದ ನಾವು ಶ್ರಮವಹಿಸಿ ಕರ್ತವ್ಯ ನಿರ್ವಹಿಸಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪ್ರೊ. ವಿ. ನಳಿನಾಕ್ಷಿ ಮಾತನಾಡಿ ಇನ್ನು 500 ವರ್ಷಗಳಲ್ಲಿ ಒಂದು ಹೆಣ್ಣು ಮಗಳಿಗೆ ಒಂದು ಗಂಡು ಪ್ರಮಾಣದಲ್ಲಿ ಸಿಗುವುದಿಲ್ಲ ಎಂಬ ಅಮೆರಿಕಾದ ವರದಿ ಉಲ್ಲೇಖಿಸಿದರು.
ಕಾಲೇಜಿನ ನ್ಯಾಕ್ ಸಮಿತಿ ಸಂಚಾಲಕ ಡಾ. ಆರ್. ಆನಂದಕುಮಾರಿ ಉಪಸ್ಥಿತರಿದ್ದರು. ನಯನಪ್ರಸಾದ್ ಪ್ರಾರ್ಥಿಸಿದರು. ಚೈತ್ರ ಸ್ವಾಗತಿಸಿದರು. ಮೇಘನ ವರದಿ ಓದಿದರು.