ಆಮ್ ಆದ್ಮಿ ಅಭ್ಯರ್ಥಿಯೊಂದಿಗೆ ವಾಕ್ಸಮರ
ಕುಣಿಗಲ್: ಬುಧವಾರ ಮತಯಾಚನೆಗೆ ಆಗಮಿಸಿದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗೆ ವಿವಿಧ ಪಕ್ಷಗಳ ಕಾರ್ಯಕರ್ತರು, ಯುವಕರು ಆಕ್ಷೇಪಿಸಿ ಅಭ್ಯರ್ಥಿಯೊಂದಿಗೆ ವಾಗ್ವಾದ ನಡೆಸಿದರು. ಇದಕ್ಕೆ ತಲೆ ಕೆಡಿಸಿಕೊಳ್ಳದ ಅಭ್ಯರ್ಥಿ ಸಮಾಧಾನವಾಗಿ ಉತ್ತರಿಸಿ, ದೇಶದ ಉಳಿವಿಗೆ, ಏಳಿಗೆಗೆ ಎಎಪಿಗೆ ಮತ ನೀಡುವಂತೆ ಮನವಿ ಮಾಡಿ ತೆರಳಿದರು.
ಎಎಪಿ ಅಭ್ಯರ್ಥಿ ರವಿಕೃಷ್ಣರೆಡ್ಡಿ ಮತಯಾಚನೆ ವೇಳೆ, ತಮ್ಮ ಸ್ವಾರ್ಥಕ್ಕಾಗಿ ಕುಮಾರಸ್ವಾಮಿ, ಎಂಎಲ್ಎ ಮತ್ತು ಎಂಪಿ ಸ್ಥಾನಕ್ಕೆ ಹಪಹಪಿಸುತ್ತಾರೆ. ಜೆಡಿಎಸ್ನ್ನು ಈ ಬಾರಿ ಚುನಾವಣೆಯಲ್ಲಿ ಜನತೆ ತಿರಸ್ಕರಿಸಲಿದ್ದಾರೆಂದರು. ಇದನ್ನು ಕೇಳುತ್ತಿದ್ದ ಸ್ಥಳೀಯ ಜೆಡಿಎಸ್ ಕಾರ್ಯಕರ್ತರು, ತಮ್ಮ ನಾಯಕರ ಬಗ್ಗೆ ಹಗುರವಾದ ಟೀಕೆ ಮಾಡುವುದರ ಬ್ಗಗೆ ಆಕ್ಷೇಪಿಸಿ ವಾಗ್ವಾದಕ್ಕೆ ಇಳಿದರು. ಆದರೆ ರೆಡ್ಡಿಯವರು ತಮ್ಮ ಮಾತನ್ನು ಸಮರ್ಥಿಸಿ, ಕುಮಾರಸ್ವಾಮಿ ಸಮರ್ಥವಾಗಿ ಅಧಿಕಾರ ನಡೆಸಿದ್ದಲ್ಲಿ ಬಿಜೆಪಿ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿರಲಿಲ್ಲ, ರಾಜ್ಯದಲ್ಲಿ ಭ್ರಷ್ಟಾಚಾರವೂ ಹೆಚ್ಚಾಗುತ್ತಿರಲಿಲ್ಲ ಎಂದರು. ಈಮಧ್ಯೆ ಬಿಜೆಪಿ ಕಾರ್ಯಕರ್ತನೊಬ್ಬ ನರೇಂದ್ರಮೋದಿಯವರಿಗೆ ಮತಹಾಕಿ ಎಂದು ರೆಡ್ಡಿಯವರಿಗೆ ಆಗ್ರಹಿಸಿದ, ಇದಕ್ಕೆ ವಿರೋಧ ವ್ಯಕ್ತಪಡಿಸಿದ ರೆಡ್ಡಿ, ಯಾವುದೇ ಒಬ್ಬ ವ್ಯಕ್ತಿಯ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದಾಗ.
ಕಾಂಗ್ರೆಸ್ ಕಾರ್ಯರ್ತನೊಬ್ಬ ನಮ್ಮ ಅಭ್ಯರ್ಥಿಯ ತೆಜೋವಧೆ ಮಾಡುವುದು ಸರಿಯಲ್ಲ ಎಂದು ಆರೋಪಿಸಿದರು. ಕೊಟ್ಟ ಅಧಿಕಾರ ಸರಿಯಾಗಿ ನಡೆಸದ ಮೇಲೆ ಇನ್ನಾವ ಅಧಿಕಾರ ದಾಹಕ್ಕೆ ಈಗ ಲೋಕಸಭೆ ಚುನಾವಣೆಗೆ ಬಂದಿದ್ದೀರಾ ಎಂದು ಕಾರ್ಯಕರ್ತರೊಂದಿಗೆ ವಾಗ್ವಾದ ನಡೆಸಿ, ಎಎಪಿ ಕಾರ್ಯಕರ್ತರು ಸಮಾಧಾನಗೊಳಿಸಲು ಯತ್ನಿಸಿದರೂ ಯುವಕರೂ ಸಮಾಧಾನಗೊಳ್ಳದೆ ಕೆಜ್ರಿವಾಲರ ಕ್ರಮ ಖಂಡಿಸಿದರು.
ಮುದ್ದಹನುಮೇಗೌಡ ಗೆಲವು ಖಚಿತ: ರಾಜಣ್ಣ
ಮಧುಗಿರಿ: ತುಮಕೂರು ಲೋಕಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ್ದು ಮೇಲ್ನೋಟಕ್ಕೆ ತ್ರಿಕೋನ ಸ್ಪರ್ಧೆಯಿದ್ದರೂ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟು ಕಾಂಗ್ರೆಸ್ ಅಭ್ಯರ್ಥಿ ಮುದ್ದಹನುಮೇಗೌಡ ಗೆಲವು ಖಚಿತ ಎಂದು ಶಾಸಕ ಕೆ.ಎನ್.ರಾಜಣ್ಣ ವಿಶ್ವಾಸ ವ್ಯಕ್ತಪಡಿಸಿದರು.
ಬುಧವಾರ ಇಲ್ಲಿನ ಎಂಎನ್ಕೆ ಸಮುದಾಯ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಈ ವಿಷಯ ತಿಳಿಸಿದ ಅವರು, ಯುಗಾದಿ ಹಬ್ಬದ ನಡುವೆಯೂ ಚುನಾವಣೆ ಕಾವು ರಂಗು ಪಡೆಯುತ್ತಿದ್ದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮತ್ತು ಸಿಎಂ ಸಿದ್ದು ನೇತೃತ್ವದಲ್ಲಿ ಈ ಚುನಾವಣೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪರಿಣಾಮಕಾರಿಯಾಗಿ ಎದುರಿಸಲು ಸಜ್ಜಾಗಿದ್ದೇವೆ ಎಂದ ರಾಜಣ್ಣ ಹೇಳಿದರು. ಕಾಂಗ್ರೆಸ್ ಅಭ್ಯರ್ಥಿ 8 ವಿಧಾನಸಭಾ ಕ್ಷೇತ್ರಗಳಿಗೂ ಭೇಟಿ ನೀಡಿ ಮತ ಯಾಚಿಸುತ್ತಿದ್ದಾರೆ. ಹಾಗಾಗಿ ನಮ್ಮ ಅಭ್ಯರ್ಥಿ 8 ಕ್ಷೇತ್ರಗಳಲ್ಲೂ ಕೂಡ ಅತ್ಯಧಿಕ ಮತ ಪಡೆದು ಗೆಲವು ಸಾಧಿಸುವುದರಲ್ಲಿ ಯಾವುದೇ ರೀತಿಯ ಅನುಮಾನವಿಲ್ಲ ಎಂದ ರಾಜಣ್ಣ, ನಮ್ಮ ಕ್ಷೇತ್ರದಲ್ಲಿ 1 ದಿನಕ್ಕೆ 2 ಹೋಬಳಿಗಳಲ್ಲಿ ಸ್ಥಳೀಯ ಮುಖಂಡರ ಸಭೆ ನಡೆಸಿ ಪರಿಣಾಮಕಾರಿಯಾಗಿ ಚುನಾವಣೆ ಎದುರಿಸಲು ಕಾರ್ಯ ತಂತ್ರ ರೂಪಿಸಲಾಗುವುದು ಎಂದರು. ಗೋಷ್ಠಿಯಲ್ಲಿ ತುಮಲ್ ಅಧ್ಯಕ್ಷ ಕೊಂಡವಾಡಿ ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್. ಮಲ್ಲಿಕಾರ್ಜುನಯ್ಯ, ರಾಜ್ಗೋಪಾಲ್, ಪುರಸಭೆ ಅಧ್ಯಕ್ಷ ಎನ್.ಗಂಗಣ್ಣ, ಎಂ.ಕೆ. ನಂಜುಂಡಯ್ಯ, ಮುಖಂಡ ಬಲರಾಮಯ್ಯ, ಪಿ.ಸಿ.ಕೃಷ್ಣಾರೆಡ್ಡಿ, ಭಾರತಮ್ಮ, ರಾಧೇಶ್ಯಾಮ್, ರಂಗನಾಥಬಾಬು, ಚಿಕ್ಕಣ್ಣ, ಅನಂತು, ವೆಂಕಟಕೃಷ್ಣಾರೆಡ್ಡಿ, ಗೋಪಿನಾಥ್, ಪಂಚಣ್ಣ, ಗಣೇಶ್ ಮೊದಲಾದವರು ಉಪಸ್ಥಿತರಿದ್ದರು.