ಕ್ರೈಸ್ತರ ಶ್ರೇಯೋಭಿವೃದ್ಧಿ ಶ್ರಮಿಸುವೆ
ತುಮಕೂರು: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಜನರು ಆಶೀರ್ವದಿಸಿದ್ದೇ ಆದರೆ ಹಿಂದುಳಿದ ವರ್ಗಗಳ ಸಾಲಿಗೆ ಸೇರಿದ ಕ್ರಿಶ್ಚಿಯನ್ ಸಮುದಾಯ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ತುಮಕೂರು ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಎ. ಕೃಷ್ಣಪ್ಪ ಭರವಸೆಯಿತ್ತರು.
ಅವರು ನಗರದ ಖಾಸಗೀ ಹೊಟೇಲ್ ನಲ್ಲಿ ಜೆಡಿಎಸ್ ಕ್ರಿಶ್ಚಿಯನ್ ಘಟಕದ ವತಿಯಿಂದ ಆಯೋಜಿಸಿಲಾಗಿದ್ದ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಹಾಗೂ ಕೇಂದ್ರದಲ್ಲಿ ಅಸ್ತಿತ್ವದಲ್ಲಿರುವ ಸರ್ಕಾರಗಳು ಅಲ್ಪಸಂಖ್ಯಾತರ ಮತಗಳಿಂದ ಅಸ್ತಿತ್ವಕ್ಕೆ ಬಂದಿವೆಯಾದರೂ ಅವರ ಹಿತ ಕಾಪಾಡುವಲ್ಲಿ ಸೋತಿವೆ ಎಂದು ಕಿಡಿಕಾರಿದರಲ್ಲದೆ ಅಲ್ಪಸಂಖ್ಯಾತರ
ಹಿತ ಕಾಪಾಡಲು ಜೆಡಿಎಸ್ನಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ರಾಜ್ಯದ ಜನತೆ ಅವಲೋಕಿಸಿ ಅಲ್ಪಸಂಖ್ಯಾತರ ಹಿತ ಕಾಪಾಡುವ ಜೆಡಿಎಸ್ ಬೆಂಬಲಿಸುವಂತೆ ಮನವಿ ಮಾಡಿದರು.
ಮಹತ್ವದ ಯೋಜನೆ ಜಾರಿ: ವರ್ತೂರು ಕ್ಷೇತ್ರದಲ್ಲಿ ಶಾಸಕನಾಗಿ ಹಾಗೂ ಸಚಿವನಾಗಿ ಸೇವೆ ಸಲ್ಲಿಸಿದ ಅವಧಿಯಲ್ಲಿ ಅಲ್ಪಸಂಖ್ಯಾತರ ಹಿತಕ್ಕಾಗಿ ಹಲವು ಮಹತ್ವದ ಯೋಜನೆ ಜಾರಿಗೆ ತಂದು ಅನುಷ್ಠಾನಗೊಳಿಸಿದ್ದೇನೆ. ತುಮಕೂರು ಜಿಲ್ಲೆಯಲ್ಲಿರುವ ಅಲ್ಪಸಂಖ್ಯಾತರ ಶ್ರೇಯೋಭಿವೃದ್ಧಿಗೆ ಹಲವು ಮಹತ್ತರ ಕಾರ್ಯಕ್ರಮ ಅನುಷ್ಠಾನಗೊಳಿಸಲು ನಿರ್ಧರಿಸಿದ್ದು ಈ ಉದ್ದೇಶದ ಸಾಕಾರಕ್ಕೆ ತುಮಕೂರು ಜಿಲ್ಲೆಯ ಜನತೆ ನನ್ನ ಕೈ ಬಲಪಡಿಸಬೇಕು ಎಂದರು.
ಗಮನ ಹರಿಸಿಲ್ಲ: ಜೆಡಿಎಸ್ ಜಿಲ್ಲಾಧ್ಯಕ್ಷ ಡಾ. ಎಂ.ಆರ್ ಹುಲಿನಾಯ್ಕರ್ ಮಾತನಾಡಿ ಹೆಚ್.ಡಿ ಕುಮಾರಸ್ವಾಮಿ ಮುಖ್ಯ ಮಂತ್ರಿಯಾಗಿದ್ದ ಅವಧಿಯಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸಿದ್ದು ಬಿಟ್ಟರೆ ತದನಂತರ ಬಂದ ಯಾವುದೇ ಸರ್ಕಾರ ಹಾಗೂ ಮುಖ್ಯ ಮಂತ್ರಿಗಳು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಗಮನ ಹರಿಸಲಿಲ್ಲ ಇದೀಗ ಸಮಯ ಕೂಡಿ ಬಂದಿದ್ದು ನಿಮ್ಮ ಮತ ಪಡೆದು ಅಧಿಕಾರ ಅಲಂಕರಿಸಿ ನಿಮ್ಮ ಅಭಿವೃದ್ಧಿ ನಿರ್ಲಕ್ಷಿಸಿದವರಿಗೆ ತಕ್ಕ ಪಾಠ ಕಲಿಸುವಂತೆ ತಿಳಿಸಿದರು.
ರಾಜ್ಯದಲ್ಲಿರುವ ಅಲ್ಪಸಂಖ್ಯಾತರು ಜೆಡಿಎಸ್ ಕೈ ಬಲಪಡಿಸಿ ನಿರೀಕ್ಷಿತ ಪ್ರಮಾಣಕ್ಕಿಂತ ಹೆಚ್ಚಿನ ಸಂಸದರನ್ನು ಆರಿಸಿ ಕಳಿಸಿದಾಗ ಮಾತ್ರ ಜೆಡಿಎಸ್ ಸಂಸದರು ನಿಮ್ಮ ಪರ ಸಂಸತ್ತಿನಲ್ಲಿ ಧ್ವನಿ ಎತ್ತಲು ಸಾಧ್ಯ. ಈ ಅಂಶ ಗಮನದಲ್ಲಿಟ್ಟುಕೊಂಡು ಮತ ನೀಡುವಂತೆ ಮನವಿ ಮಾಡಿದರು ಜೆಡಿಎಸ್ ಕ್ರಿಶ್ಚಿಯನ್ ರಾಜ್ಯ ಘಟಕದ ಅಧ್ಯಕ್ಷ ಡೇವಿಡ್ ಫಿಲಮಿನ್, ಜೆಡಿಎಸ್ ಹಿರಿಯ ಮುಖಂಡ ಗಂಗಣ್ಣ, ಜೆಡಿಎಸ್ ಕ್ರಿಶ್ಚಿಯನ್ ಘಟಕದ ಅಧ್ಯಕ್ಷ ಮ್ಯಾಥ್ಯು ಶಂಕರ್, ಜೆಡಿಎಸ್ ಮುಖಂಡರಾದ ನರಸೇಗೌಡ, ಜೆಡಿಎಸ್ ಯುವ ಘಟಕದ ಜಿಲ್ಲಾಧ್ಯಕ್ಷ ಬೆಳ್ಳಿ ಲೋಕೇಶ್, ಜೆಡಿಎಸ್ ವಕ್ತಾರ ಮಲ್ಲಿಕಾರ್ಜುನ್ ಹಾಗೂ ಕ್ರಿಶ್ಚಿಯನ್ ಧರ್ಮ ಗುರುಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಇದೇ ವೇಳೆ ಹೊಯ್ಸಳ ಹೊಟೇಲ್ನ ನಿವೃತ್ತ ನೌಕರ ಸಂಘದ ಪದಾಧಿಕಾರಿಗಳು ಜೆಡಿಎಸ್ ರಾಜ್ಯಾಧ್ಯಕ್ಷ ಎ. ಕೃಷ್ಣಪ್ಪ ಅವರ ಜೊತೆ ಕೆಲಕಾಲ ಮಾತುಕತೆ ನಡೆಸಿದರು.