ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ
ಗುಬ್ಬಿ: ಲೋಕಸಭಾ ಚುನಾವಣೆಗೆ ಸಂಬಂಧಿಸಿ ಪೂರ್ವ ಸಿದ್ಧತೆ ನಡೆದಿದ್ದು, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಏಕಕಾಲದಲ್ಲಿ ಮತಗಟ್ಟೆ ಅಧ್ಯಕ್ಷಾಧಿಕಾರಿ ಮತ್ತು ಒಂದನೇ ಮತಗಟ್ಟೆ ಅಧಿಕಾರಿಗಳಿಗೆ ಚುನಾವಣಾ ಕರ್ತವ್ಯ ನಿರ್ವಹಣೆ ಬಗ್ಗೆ ನುರಿತ ಸಂಪನ್ಮೂಲ ವ್ಯಕ್ತಿಗಳಿಂದ ವಿಶೇಷ ತರಬೇತಿ ನೀಡಲಾಗುತ್ತಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಚುನಾವಣಾ ವಿಭಾಗದವತಿಯಿಂದ ಆಯೋಜಿಸಿದ್ದ ತರಬೇತಿ ಶಿಬಿರ ಪರಿಶೀಲಿಸಿದ ನಂತರ ಮಾತನಾಡಿದ ಅವರು, ಗುಬ್ಬಿ ವಿಧಾನ ಸಭಾ ಕ್ಷೇತ್ರದ 211 ಮತಗಟ್ಟೆಗಳ 650 ಸಿಬ್ಬಂದಿಗೆ ತರಬೇತಿ ನೀಡಲಾಗುತ್ತಿದೆ. ಶೇ.15 ರಷ್ಟು ಹೆಚ್ಚುವರಿ ಸಿಬ್ಬಂದಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಿರುವುದಾಗಿ ತಿಳಿಸಿದರು.
ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿ ಮತ್ತು ಸಿಬ್ಬಂದಿ ನಿಯಮಾನುಸಾರ ತರಬೇ ಪಡೆದು ಯಶಸ್ವಿಯಾಗಿ ನಡೆಸುವಂತೆ ಕರೆ ನೀಡಿದರು. ಗುಬ್ಬಿ ವಿಧಾನ ಸಭಾ ವ್ಯಾಪ್ತಿಯಲ್ಲಿ 86,465 ಗಂಡಸರು ಮತ್ತು 84,081 ಮಹಿಳಾ ಮತದಾರು ಸೇರಿ ಒಟ್ಟು 1,76,526 ಮತದಾರಿದ್ದಾರೆ. ಇದರ ಜೊತೆಗೆ ಹೊಸದಾಗಿ 2,016 ಮತದಾರರು ಸೇರ್ಪಡೆಗೊಂಡಿದ್ದಾರೆ.ಬಿಎಲ್ಒಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜನೆ ಮಾಡಿರುವುದಿಲ್ಲ. ಬಿಎಲ್ಒಗಳು ತಮ್ಮ ವ್ಯಾಪ್ತಿಯ ಮತಗಟ್ಟೆಗಳಲ್ಲಿ ಹಾಜರಿದ್ದು ಮತದಾನದ ವೇಳೆ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ಸಹಕಾರ ನೀಡುವಂತೆ ಸೂಕ್ತ ನಿರ್ದೇಶನ ನೀಡಲಾಗಿದೆ ಎಂದರು. ತರಬೇತಿ ಶಿಬಿರದಲ್ಲಿ ಸಹಾಯಕ ಚುನಾವಣಾಧಿಕಾರಿ ಹನುಮನರಸಯ್ಯ, ತಹಸೀಲ್ದಾರ್ ಸಿದ್ದಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿ ಪಿ.ಬಿ. ಬಸವರಾಜು, ಅಕ್ಷರದಾಸೋಹ ಅಧಿಕಾರಿ ಸೋಮಶೇಖರ್, ಪ್ರಾಚಾರ್ಯ ಕೆ.ಎಸ್. ಸಿದ್ದಲಿಂಗಪ್ಪ, ಚುನಾವಣಾ ಶಿರಸ್ತೇದಾರ್ ಹೊನ್ನಪ್ಪ, ಸಿಬ್ಬಂದಿ ನಾರಾಯಣಮೂರ್ತಿ ಭಾಗವಹಿಸಿದ್ದರು.