ಮಾಜಿ ಶಾಸಕ ಎಚ್.ಬಿ. ನಂಜೇಗೌಡ ಬಿಜೆಪಿಗೆ
ತುರುವೇಕೆರೆ: ತಾಲೂಕಿನ ಮಾಜಿ ಶಾಸಕ ಎಚ್.ಬಿ. ನಂಜೇಗೌಡ ಜೆಡಿಎಸ್ ಬಿಟ್ಟು ಬಿಜೆಪಿ ಸೇರಲಿದ್ದಾರೆ. ತಮ್ಮ ಬೆಂಬಲಿಗರ ಸಭೆ ಕರೆದು ಜೆಡಿಎಸ್ಗೆ ಗುಡ್ ಬೈ ಹೇಳಿ ಬಿಜೆಪಿ ಸೇರುವ ಬಗ್ಗೆ ಸ್ಪಷ್ಟ ನಿರ್ಧಾರ ಪ್ರಕಟಿಸುವರು ಎಂದು ತಿಳಿದುಬಂದಿದೆ.
ಸ್ಥಳೀಯ ಜೆಡಿಎಸ್ ಮುಖಂಡರ ವರ್ತನೆಯಿಂದ ಬೇಸತ್ತಿರುವ ಅವರು, ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಟಿಕೆಟ್ ಲಭಿಸಿರಲಿಲ್ಲ. ಇದರಿಂದ ನಿರಾಸೆಗೊಂಡಿದ್ದ ನಂಜೇಗೌಡರನ್ನು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಾಂತ್ವನ ಹೇಳಿ ಜೆಡಿಎಸ್ಗೆ ಸೇರಿಸಿಕೊಂಡಿದ್ದರು. ನಂತರದ ಬೆಳವಣಿಗೆಯಲ್ಲಿ ಎಚ್.ಬಿ. ನಂಜೇಗೌಡ ಕೆಲ ತಿಂಗಳ ಕಾಲ ಜೆಡಿಎಸ್ನಲ್ಲೇ ಇದ್ದರೂ ಸೂಕ್ತ ಸ್ಥಾನಮಾನ ನೀಡಿರಲಿಲ್ಲ. ಇದರಿಂದ ನೊಂದಿರುವ ನಂಜೇಗೌಡರು ತಮ್ಮ ಆಪ್ತ ಬೆಂಬಲಿಗರೊಂದಿಗೆ ಚರ್ಚಿಸಿ ಬಿಜೆಪಿ ಸೇರುವ ನಿಲುವಿಗೆ ಬಂದಿದ್ದಾರೆ ಎನ್ನಲಾಗಿದೆ.
ಈಗಾಗಲೇ ಜಿಲ್ಲಾ ಸಂಸದ ಜಿ.ಎಸ್. ಬಸವರಾಜು, ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ಗೌಡ ಹಾಗೂ ಇನ್ನಿತರ ಹಿರಿಯ ಮುಖಂಡರು ಬಿಜೆಪಿ ಸೇರಲು ಹಸಿರು ನಿಶಾನೆ ತೋರಿದ್ದಾರೆ ಎಂದು ತಿಳಿದು ಬಂದಿದೆ. ಏ.4 ರಂದು ತುರುವೇಕೆರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗಮಿಸಲಿದ್ದು ಅಂದು ಬಿಜೆಪಿಗೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ ಎಂದು ತಿಳಿದುಬಂದಿದೆ.