ಸಾಲ ವಸೂಲಾತಿ ವೇಳೆ ಹಲ್ಲೆ: ಪರಿಹಾರಕ್ಕೆ ಒತ್ತಾಯ
ತುರುವೇಕೆರೆ: ತಾಲೂಕಿನ ಡಿ. ಕಲ್ಕೆರೆಯ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಸಿಬ್ಬಂದಿ ಹಾಗೂ ನಿರ್ದೇಶಕರು ಸಾಲ ವಸೂಲಾತಿ ವೇಳೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ ಕಾರಣ ಮಂಜುಳಾರವರಿಗೆ ಗರ್ಭಪಾತವಾಗಿ ಸುಮಾರು 7 ತಿಂಗಳ ಮಗು ಸತ್ತು ಹೋಗಿತ್ತು ಎನ್ನಲಾಗಿದೆ.
ತಾಲೂಕಿನ ದೊಡ್ಡಗೊರಾಘಟ್ಟ ಗ್ರಾಮದ ಮಹಲಿಂಗಯ್ಯನವರ ಮನೆಯಲ್ಲಿದ್ದ ಶ್ರೀಧರ್ ಮತ್ತು ಗರ್ಭಿಣಿಯಾಗಿದ್ದ ಆತನ ಪತ್ನಿ ಮಂಜುಳಾ ರವರ ಮೇಲೆ ಹಲ್ಲೆ ಮಾಡಿದ್ದರು ಎನ್ನಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿ ಡಿ. ಕಲ್ಕೆರೆಯ ವಿಎಸ್‌ಎಸ್‌ಎನ್ ಕಾರ್ಯದರ್ಶಿ ಬಸವರಾಜು, ಅಧ್ಯಕ್ಷ ಶಂಕರೇಗೌಡ, ನಿರ್ದೇಶಕ ಡಿ.ಪಿ. ರಾಜು ಹಾಗೂ ಸಹಾಯಕ ನಾಗರಾಜು ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಪ್ರತಿಭಟನೆ ಮಾಡಲಾಯಿತು.
ಪಟ್ಟಣದ ಪ್ರವಾಸಿ ಮಂದಿರದ ಮುಂಭಾಗದಿಂದ ಪ್ರತಿಭಟನೆ ಮಾಡಿದ ರೈತರು ಬರಗಾಲ ಪರಿಸ್ಥಿತಿ ಇರುವುದರಿಂದ ಯಾವುದೇ ಸಾಲ ವಸೂಲು ಮಾಡಬಾರದು ಎಂದು ನ್ಯಾಯಾಲಯದ ಆದೇಶವಿದ್ದರೂ ಸಾಲ ವಸೂಲಾತಿಗೆ ಇಳಿದ ಕಲ್ಕೆರೆಯ ಸಹಕಾರಿ ಸಂಘದ ನಿರ್ದೇಶಕ ವರ್ತನೆ ಅಸಹನೀಯ. ಸಾಲ ವಸೂಲಿಯ ನೆಪದಲ್ಲಿ ಗೂಂಡಾಗಿರಿ ವರ್ತನೆ ಮಾಡಿರುವುದು ಖಂಡನಾರ್ಹ ಎಂದು ರಾಜ್ಯ ರೈತ ಸಂಘದ ಕಾರ್ಯದರ್ಶಿ ಕೆ.ಟಿ. ಗಂಗಾಧರ್ ಹೇಳಿದರು. ಅಮಾನವೀಯತೆ ತೋರಿರುವ 4 ಮಂದಿಯ ವಿರುದ್ಧ ಗೂಂಡಾ ಕಾಯ್ದೆ ಜಾರಿ ಮಾಡಬೇಕು. ಸರ್ಕಾರ ಶ್ರೀಧರ್ ಕುಟುಂಬಕ್ಕೆ ರು. 5 ಲಕ್ಷ ಪರಿಹಾರ ನೀಡಬೇಕು. ಜಿಲ್ಲಾ ಕೇಂದ್ರ ಬ್ಯಾಂಕ್ ಅಧ್ಯಕ್ಷ ರಾಜಣ್ಣ ನೈತಿಕ ಜವಾಬ್ದಾರಿ ಹೊತ್ತು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಶ್ರೀನಿವಾಸ್ ಗೌಡ, ರಾಜ್ಯ ಉಪಾಧ್ಯಕ್ಷ ರಾಮಣ್ಣ, ರಾಮಸ್ವಾಮಿ, ಜಿಲ್ಲಾಧ್ಯಕ್ಷ ಎ. ಗೋವಿಂದರಾಜ್, ರಾಮಕೃಷ್ಣಯ್ಯ, ಹಬುಕನಹಳ್ಳಿ ಬಸವರಾಜು, ಪಟೇಲ್ ಎಚ್.ಬಿ. ರಾಮೇಗೌಡ, ಕಡೇಹಳ್ಳಿ ಮಹೇಶ್, ಗಾಂಧಿಗ್ರಾಮ ವಸಂತ್, ಹಲ್ಲೆಗೆ ಒಳಗಾಗಿದ್ದ ಶ್ರೀಧರ್ ಭಾಗವಹಿಸಿದ್ದರು. ಬಾಣಸಂದ್ರ ರಸ್ತೆಯ ಮುಂಭಾಗ ಮಾನವ ಸರಪಳಿ ರಚಿಸಿ ರಸ್ತೆ ತಡೆ ಮಾಡುವ ಮೂಲಕ ಕೃತ್ಯದ ಬಗ್ಗೆ ಖಂಡಿಸಲಾಯಿತು. ತಹಸೀಲ್ದಾರ್ ಮಾರೇಗೌಡರಿಗೆ ಮನವಿ ಸಲ್ಲಿಸಲಾಯಿತು.
ಭ್ರಷ್ಟಾಚಾರ ಕಿತ್ತೊಗೆಯಲು ಎಎಪಿ ಬೆಂಬಲಿಸಿ: ರವಿಕೃಷ್ಣ ರೆಡ್ಡಿ
ಕುಣಿಗಲ್: ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರು ಪಕ್ಷಗಳು ರಾಷ್ಟ್ರ, ರಾಜ್ಯವನ್ನು ಲೂಟಿ ಹೊಡೆದು ಜನರ ನಂಬಿಕೆಗೆ ದ್ರೋಹ ಬಗೆದಂತಹ ಪಕ್ಷಗಳು. ಜನತೆ ಈ ಮೂರು ಪಕ್ಷಗಳನ್ನು ತಿರಸ್ಕರಿಸಿ, ಸದಾ ಜನಪರವಾಗಿದ್ದು, ಭ್ರಷ್ಟಾಚಾರವನ್ನು ಕಿತ್ತೊಗೆಯಲು ಸಂಕಲ್ಪ ಮಾಡಿರುವ ಆಮ್ ಆದ್ಮಿ ಪಕ್ಷವನ್ನು ಬೆಂಬಲಿಸುವಂತೆ ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದ ಎಎಪಿ ಅಭ್ಯರ್ಥಿ ರವಿಕೃಷ್ಣರೆಡ್ಡಿ ಮನವಿ ಮಾಡಿದರು.
ಬುಧವಾರ ಮಧ್ಯಾಹ್ನ ಪಟ್ಟಣದ ಹುಚ್ಚಮಾಸ್ತಿಗೌಡ ವೃತ್ತದಲ್ಲಿ ಮತಯಾಚನೆ ಮಾಡಿದ ಅವರು, ಕಳೆದ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಎರಡೂ ಒಂದಾಗಿ ಕಾಂಗ್ರೆಸ್ ಎದುರಿಸಲು ಸಿದ್ಧತೆ ನಡೆಸಿದ್ದವು. ಈಗ ನೋಡಿದರೆ ಪ್ರತ್ಯೇಕವಾಗಿ ಕಣಕ್ಕಿಳಿದಿದ್ದಾರೆ. ಜೆಡಿಎಸ್ ಹಾಗೂ ಬಿಜೆಪಿ ಅಭ್ಯರ್ಥಿಗಳಿಬ್ಬರು ರಿಯಲ್ ಎಸ್ಟೆಟ್ ದಂಧೆಯಲ್ಲಿ ಅಕ್ರಮವಾಗಿ ಕೋಟ್ಯಂತರ ರು. ಲೂಟಿ ಮಾಡಿದವರಾಗಿದ್ದು ಇಂತಹ ಅಕ್ರಮಿಗಳಿಂದ ಜನತೆಯ ಸಮಸ್ಯೆ ಬಗೆಹರಿಸಲು ಸಾಧ್ಯವೆ ಎಂಬುದನ್ನು ಮತದಾರರು ಮನಗಾಣಬೇಕಿದೆ. ಇನ್ನು ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಸಚಿವರ ಸೋದರ ಡಿ.ಕೆ.ಸುರೇಶ್, ಎಂತೆಂಥಾ ಗಂಭೀರ ಕ್ರಿಮಿನಲ್ ಅಪರಾಧಗಳ ಆರೋಪ ಹೊಂದಿದ್ದಾರೆಂಬುದು ಇಡೀ ಜನತೆಗೆ ಗೊತ್ತಿರುವ ವಿಷಯವಾಗಿದೆ, ಸಾಮಾನ್ಯ ಜನತೆಯೆ ಸಮಸ್ಯೆ ಬಗೆಹರಿಸಬೇಕಾದ ಜನತೆಯ ಪ್ರತಿನಿಧಿ ಸಚ್ಚಾರಿತ್ರರಾಗಿರಬೇಕು ಎಂದರು. ಈ ಚುನಾವಣೆಯಲ್ಲಿ ಹಣ, ಹೆಂಡವನ್ನು ತಿರಸ್ಕರಿಸಿ ನಿಮ್ಮ ಹಿತ ಕಾಪಾಡುವ ಜನಪರ ಅಭ್ಯರ್ಥಿಗಳನ್ನು ಬೆಂಬಲಿಸಿ ಸಚ್ಚಾರಿತ್ರ ಮತ್ತು ಪವಿತ್ರ ರಾಜಕಾರಣ ನಿರ್ಮಿಸುವ ದಿಸೆಯಲ್ಲಿ ಎಎಪಿ ಪಕ್ಷದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು. ಪಕ್ಷದ ಪ್ರಮುಖರಾದ ಮೋಟೇಗೌಡ,ಅರುಣಗೌಡ,ಶಿವರಾಂ,ಶಿವಾನಂದ,ನಾಯಕ್, ಹನುಮಂತೇಗೌಡ,ಸುಮಿತ್ರ ಲಲಿತಾ ಇತರರು ಇದ್ದರು.