ಹೋರಾಟದಿಂದ ಒತ್ತಡದ ರಾಜಕಾರಣಕ್ಕೆ
ತುಮಕೂರು: ಹೋರಾಟದ ರಾಜಕಾರಣದಿಂದ ಒತ್ತಡದ ರಾಜಕಾರಣಕ್ಕೆ ಎಡಪಕ್ಷಗಳು ಧುಮುಕಿದ್ದು, ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಸಿಪಿಐ ಅಭ್ಯರ್ಥಿ ಚಿನ್ನಪ್ಪ ಅವರಿಗೆ ಸಿಪಿಎಂ ಬೆಂಬಲ ಘೋಷಿಸಿದೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಸೈಯದ್ ಮುಜೀಬ್ ಘೋಷಿಸಿದರು.
ಅವರು ತುಮಕೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಡಪಕ್ಷಗಳು ಅನ್ಯಾಯಗಳ ವಿರುದ್ಧ ಈವರೆಗೆ ನಿರಂತರವಾಗಿ ಹೋರಾಟ ಮಾಡುತ್ತಲೇ ಬಂದಿವೆ. ಆದರೆ ರಾಜಕಾರಣದಲ್ಲಿ ಸಕ್ರಿಯವಾಗಿರಲಿಲ್ಲ.
ಆದರೆ ತುಮಕೂರಿನಲ್ಲಿ ಈಗ ಕಾಲ ಬದಲಾಗಿದೆ. ರಾಜಕಾರಣದಲ್ಲಿ ಸಕ್ರಿಯವಾಗಿರಬೇಕು. ಆ ಮೂಲಕ ಜನತೆಗೆ ಮತ್ತಷ್ಟು ಧನಿಯಾಗಬೇಕು, ಪರ್ಯಾಯ ರಾಜಕಾರಣಕ್ಕೆ, ಪರ್ಯಾಯ ಆರ್ಥಿಕ ನೀತಿಗಳನ್ನು ಜಾರಿ ಮಾಡಬೇಕು, ಎಲ್ಲ ವರ್ಗದ ಸಾಮಾನ್ಯ ಜನತೆಗೆ, ಕಾರ್ಮಿಕರಿಗೆ ಒಳಿತನ್ನು ಬಯಸುವ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣಾ ಅಖಾಡಕ್ಕೆ ಧುಮುಕಿರುವ ಸಿಪಿಐ ಪಕ್ಷಕ್ಕೆ, ಅಭ್ಯರ್ಥಿ ಚಿನ್ನಪ್ಪನವರಿಗೆ ಸಿಪಿಎಂ ನೀಡಲಿದೆ. ನೀತಿಗಳ ಆಧಾರದಲ್ಲಿ, ದೇಶದ ಹಿತದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು, ಸೈದ್ಧಾಂತಿಕವಾಗಿ ಎಡಪಕ್ಷಗಳು ರಾಜಕಾರಣ ಮಾಡುತ್ತಿವೆ. ಆರ್ಥಿಕ ನೀತಿ ಬದಲಾಗದೆ, ದೇಶೋದ್ಧಾರ ಸಾಧ್ಯವಿಲ್ಲ. ರೈತರ
ಆತ್ಮಹತ್ಯೆ, ಬಡತನ, ಕಾರ್ಮಿಕರ ಬವಣೆ ನೀಗಲು ಸಾಧ್ಯವಿಲ್ಲ. ವ್ಯಕ್ತಿ ಬದಲಾಗಬಹುದು. ಆದರೆ ವ್ಯವಸ್ಥೆ ಬದಲಾಗದೆ ದೇಶಕ್ಕೆ ಒಳಿತಾಗಲು ಸಾಧ್ಯವಿಲ್ಲ. ಮುಖ್ಯವಾಗಿ ಹಾಲಿಯಿರುವ ಆರ್ಥಿಕ ನೀತಿ ದೇಶಕ್ಕೆ ಮಾರಕವಾಗಿದ್ದು, ಇದನ್ನು ಬದಲಿಸುವ ನಿಟ್ಟಿನಲ್ಲಿ ಹೋರಾಟ, ರಾಜಕಾರಣದ ತುರ್ತಿದೆ. ಜನಪರ, ಪರ್ಯಾಯ ರಾಜಕಾರಣ ಬರಬೇಕೆನ್ನುವ ಹಿನ್ನೆಲೆಯಲ್ಲಿ ಎಡಪಕ್ಷಗಳು ಹೋರಾಟ ನಡೆಸಲಿವೆ. ಈ ನಿಟ್ಟಿನಲ್ಲಿ ಸಿಪಿಎಂ, ತುಮಕೂರಿನಲ್ಲಿ ಸಿಪಿಐ ಅಭ್ಯರ್ಥಿಗೆ ಬೆಂಬಲ ಘೋಷಿಸಿದೆ ಎಂದರು.
ಸಿಪಿಐ ರಾಜ್ಯ ಮುಖಂಡ ಹಾಗೂ ಎಐಟಿಯೂಸಿ ಉಪಾಧ್ಯಕ್ಷ ಶಿವಣ್ಣ ಮಾತನಾಡಿ, ದೇಶದಲ್ಲಿ ಎಡಪಕ್ಷಗಳು ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡುತ್ತಿವೆ. ಶ್ರೀ ಸಾಮಾನ್ಯರ ಪರ ರಾಜಕಾರಣ ಮಾಡಬೇಕೆನ್ನುವ ಹಿನ್ನೆಲೆಯಲ್ಲಿ ಪಕ್ಷದ ವತಿಯಿಂದ ಅಭ್ಯರ್ಥಿಯನ್ನು ಕಣಕ್ಕಳಿಸಲಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿ ಜೆಡಿಯು ಜತೆ ಒಪ್ಪಂದ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಜೆಡಿಯು ಬೆಂಬಲ ಕೂಡ ತಮ್ಮ ಪಕ್ಷಕ್ಕೆ ಲಭ್ಯವಾಗಿದೆ ಎಂದು ತಿಳಿಸಿದರು.
ಗುಪ್ತ ಒಲವಿದೆ: ದೇಶದಲ್ಲಿ ಎಡಪಕ್ಷಗಳ ಬಗ್ಗೆ ಗುಪ್ತ ಒಲವಿದೆ. ಆದರೆ ಅಭ್ಯರ್ಥಿಗಳೇ ಇಲ್ಲದೇ ಹೋಗಿದ್ದರಿಂದ ಒಲವು ಬಹಿರಂಗಗೊಳ್ಳಳು ಸಾಧ್ಯವಾಗಿಲ್ಲ. ಆದರೆ ಈ ಬಾರಿ ಅಭ್ಯರ್ಥಿಯನ್ನು ಕಣಕ್ಕಳಿಸಿರುವುದರಿಂದ ಒಲವು ವ್ಯಕ್ತವಾಗಲಿದೆ ಎಂಬ ವಿಶ್ವಾಸವನ್ನು ಶಿವಣ್ಣ ವ್ಯಕ್ತಪಡಿಸಿದರು.
4 ಲಕ್ಷ ವೆಚ್ಚದಲ್ಲಿ ಪ್ರಚಾರ: ಚುನಾವಣಾ ಆಯೋಗ ಅಭ್ಯರ್ಥಿ ಖರ್ಚು ವೆಚ್ಚಕ್ಕೆಂದು 70 ಲಕ್ಷ ರು. ನಿಗದಿಪಡಿಸಿದೆ. ಆದರೆ ಎಡಪಕ್ಷಗಳ ಬೆಂಬಲಿತ ಸಿಪಿಐ ಅಭ್ಯರ್ಥಿ ಚಿನ್ನಪ್ಪ ಕೇವಲ 4 ಲಕ್ಷ ರು. ಗಳಲ್ಲಿ ಚುನಾವಣೆ ಮುಗಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಿಪಿಎಂ ಮುಖಂಡರಾದ ಬಿ. ಉಮೇಶ್, ಎನ್.ಕೆ. ಸುಬ್ರಹ್ಮಣ್ಯ, ಸಿಪಿಐನ ಜಿಲ್ಲಾ ಕಾರ್ಯದರ್ಶಿ ಕಂಬೇಗೌಡ, ಪ್ರಚಾರ ಸಮಿತಿಯ ಗಿರೀಶ್, ಶಶಿಕಾಂತ್, ಸ್ವಾತಂತ್ರ್ಯ ಹೋರಾಟಗಾರ ಹಾಗೂ ಪಕ್ಷದ ಹಿರಿಯ ಮುಖಂಡ ಟಿ.ಆರ್. ರೇವಣ್ಣ ಸೇರಿದಂತೆ ಸಿಪಿಐ, ಸಿಪಿಎಂ ಕಾರ್ಯಕರ್ತರು, ಮುಖಂಡರು ಉಪಸ್ಥಿತರಿದ್ದರು.