ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಇಂದಿನ ಮಕ್ಕಳಲ್ಲಿ ಸಂಸ್ಕೃತಿ ಅರಿವಿನ ಕೊರತೆ: ವಿಶಾಲಾಕ್ಷಿ

Rashmi Kasaragodu
Updated On : 4 Apr 2014, 2:15 am

ಕುಣಿಗಲ್: ದೇಶದ ಭವಿಷ್ಯದ ಪ್ರಜೆಗಳಾದ ಇಂದಿನ ಮಕ್ಕಳಲ್ಲಿ ದೇಶದ ಸಂಸ್ಕೃತಿ, ಸಂಸ್ಕಾರಗಳ ಅರಿವಿನ ಕೊರತೆಯ ಕಾರಣ, ಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿಯ ವ್ಯಾಮೋಹಕ್ಕೆ ಒಳಗಾಗುತ್ತಾ ಹಲವು ಸಮಸ್ಯೆಗಳಿಗೆ ಸಿಕ್ಕು ಪರದಾಡುವಂತಾಗಿರುವುದು ಖೇದಕರ ಎಂದು ವಕೀಲೆ ವಿಶಾಲಾಕ್ಷಿ ಅಭಿಪ್ರಾಯ ಪಟ್ಟರು.
ಪಟ್ಟಣದ ಚೌಡೇಶ್ವರಿ ದೇವಾಲಯದ ಸಭಾಭವನದಲ್ಲಿ ತಾಲೂಕು ಹಿಂದೂ ಜನಜಾಗೃತಿ ಸಮಿತಿ ಹಮ್ಮಿಕೊಂಡಿರುವ ಬಾಲಸಂಸ್ಕಾರ ಶಿಬಿರ ಉದ್ಘಾಟಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಕ್ಕಳ ದೈನಂದಿನ ಜೀವನದಲ್ಲಿ ಪ್ರತಿಯೊಂದು ಹಂತದಲ್ಲೂ ಪಾಶ್ಚಿಮಾತ್ಯ ಸಂಸ್ಕರಣೆಯ ಅಂಧಾನುಕರಣೆ ಎದ್ದು ಕಾಣುತ್ತಿದೆ. ಮಕ್ಕಳ ಉಡುಗೆ, ತೊಡುಗೆಗಳು ಅದರಲ್ಲೂ ಹೆಣ್ಣುಮಕ್ಕಳ ಉಡುಗೆಗಳು ಸಭ್ಯತೆಯ ಎಲ್ಲೆ ಮೀರಿರುವ ಕಾರಣ ಹಲವು ಸಮಸ್ಯೆಗಳಿಗೆ ಕಾರಣವಾಗಿ ಸ್ವಾಸ್ತ್ಯ ಸಮಾಜಕ್ಕೆ ಮಾರಕವಾಗುತ್ತಿದೆ. ಪೋಷಕರು ನಮ್ಮ ದೇಶದ ಸಂಸ್ಕೃತಿ. ಸಂಸ್ಕಾರಗಳ ಬಗ್ಗೆ ಅರಿವನ್ನು ಹೊಂದಿ, ತಮ್ಮ ಮಕ್ಕಳಿಗೂ ಇವುಗಳ ಬಗ್ಗೆ ಅರಿವು ಮೂಡಿಸಿದಾಗ, ಮಕ್ಕಳು ಎಳೆಯ ವಯಸ್ಸಿನಲ್ಲೆ ಉತ್ತಮ ಸಂಸ್ಕಾರವನ್ನು ಹೊಂದಿ ದೇಶದ ಉತ್ತಮ ಪ್ರಜೆಗಳಾಗುವುದರಲ್ಲಿ
ಅನುಮಾನವಿಲ್ಲ ಎಂದರು.   
ಮಾನಸಿಕ ಒತ್ತಡ: ಸಮಿತಿಯ ಪ್ರಮುಖರಾದ ಪ್ರತಿಭಾ ಸುಧಾಕರ್ ಮಾತನಾಡಿ, ಇಂದಿನ ಮಕ್ಕಳಲ್ಲಿ ಅವರು ಕಲಿಕಾ ಹಂತದಲ್ಲೆ ಹಲವು ಮಾನಸಿಕ ಒತ್ತಡಗಳಿಗೆ ಸಿಲುಕಿ ಅವುಗಳನ್ನು ಸಮರ್ಥವಾಗಿ ನಿಭಾಯಿಸಲು ಆಗದೆ ಪರದಾಡುವಂತಾಗಿ, ಕೆಲವೊಮ್ಮೆ ಆತ್ಮಹತ್ಯೆಗೂ ಶರಣಾಗುವಂತ ವಾತಾವರಣ ನಿರ್ಮಾಣವಾಗಿರುವುದು ನಿಜಕ್ಕೂ ಕಳವಳಕಾರಿ. ಅಲ್ಲದೆ ಇಂದಿನ ಮಕ್ಕಳ ಮನೋಸ್ಥಿತಿ ಎತ್ತ ಸಾಗುತ್ತಿದೆ ಎಂಬ ಜಿಜ್ಞಾಸೆ ಮೂಡುತ್ತಿದ್ದು, ಬೇಸಿಗೆಯ ರಜೆ ದಿನಗಳಲ್ಲಿ ಮಕ್ಕಳಿಗೆ ಬಾಲಸಂಸ್ಕಾರ ಕಾರ್ಯಕ್ರಮದಲ್ಲಿ ಧ್ಯಾನ, ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಸಮರ್ಪಕ ಅರಿವನ್ನು ಮೂಡಿಸಿ, ಮಕ್ಕಳ ನೈತಿಕತೆ, ಆತ್ಮವಿಶ್ವಾಸ ಮತ್ತು ಎಂತಹ ಸಮಸ್ಯೆಗಳನ್ನು ಧೈರ್ಯವಾಗಿ ನಿಭಾಯಿಸುವಂತ ವ್ಯಕ್ತಿತ್ವ ವಿಕಸನ ವೃದ್ಧಿಗೆ ಪೂರಕವಾದ ಅಂಶಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ ಎಂದರು.
ತಾಲೂಕಿನ ಹಿಂದೂ ಜನಜಾಗೃತಿ ಸಮಿತಿಯು ಕಳೆದ ಹನ್ನೆರಡು ವರ್ಷಗಳಿಂದ ಇಂತಹ ಶಿಬಿರಗಳನ್ನು ನಡೆಸಿಕೊಂಡು ಬರುತ್ತಿದ್ದು, ಈ ಬಾರಿಯ ಶಿಬಿರದಲ್ಲಿ ಪಟ್ಟಣದ ವಿವಿಧ ಬಡಾವಣೆಯ ನೂರಕ್ಕೂ ಹೆಚ್ಚು ಮಕ್ಕಳು ಪಾಲ್ಗೊಂಡು ಶಿಬಿರದ ಪ್ರಯೋಜನ ಪಡೆದುಕೊಂಡರು. ಸಮಿತಿಯ ಪ್ರಮುಖರಾದ ಶೀಲಾನಾರಾಯಣ, ಶಾರದರಂಗನಾಥ, ಉಮಾಸುರೇಶ, ಉಮಾ ಉದಯ, ಸುಮಾ ಮಂಜೇಶ, ಸರಳಾ, ಚೇತನಾಶಂಕರ ಇತರರು ಉಪಸ್ಥಿತರಿದ್ದರು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement