ನಾಳೆ ಡಾ.ಬಾಬು ಜಗಜೀವನರಾಂ ಜನ್ಮ ದಿನಾಚರಣೆ
ತಿಪಟೂರು: ಪಟ್ಟಣದ ತಾಲೂಕು ಕಚೇರಿ ಸಭಾಂಗಣದಲ್ಲಿ ಡಾ.ಬಾಬು ಜಗಜೀವನರಾಂ ಅವರ ಜನ್ಮದಿನಾಚರಣೆಯನ್ನು ಏ.5ರ ಬೆಳಿಗ್ಗೆ 10ಗಂಟೆಗೆ ಆಯೋಜಿಸಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ. ಈ ದಿನಾಚರಣೆಗೆ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು, ಸಿಬ್ಬಂದಿ ವರ್ಗದವರು, ವಿವಿಧ ದಲಿತ ಸಂಘಟನೆಗಳ ಪ್ರತಿನಿಧಿಗಳು ಹಾಗೂ ನಾಗರಿಕರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದ್ದಾರೆ.
ಉಚಿತ ಕಾರ್ಯಾಗಾರ ಉದ್ಘಾಟನೆ
ತುಮಕೂರು: ಗ್ರಾಮೀಣ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಮನೋಭಾವ ಬೆಳೆಸಿಕೊಳ್ಳಬೇಕೆಂದು ತಿಪಟೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ. ಜಯದೇವಪ್ಪ ಕರೆ ನೀಡಿದರು.
ಅವರು ತಿಪಟೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸ್ಪರ್ಧಾಮಿತ್ರ ವತಿಯಿಂದ ಆಯೋಜಿಸಲಾಗಿದ್ದ ಉಚಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಸ್ಪರ್ಧಾತ್ಮಕ ಪರೀಕ್ಷೆಗಳು ವಿದ್ಯಾರ್ಥಿ ಜೀವನದಲ್ಲಿ ಅತಿ ಮುಖ್ಯವಾದ ಅಂಗವೆಂದು ಪರಿಗಣಿಸಬೇಕು ಅದರಲ್ಲೂ ಗ್ರಾಮೀಣ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವ ಬೆಳೆಯಲು ಇಂತಹ ಕಾರ್ಯಕ್ರಮಗಳು ಅಗತ್ಯವೆಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಸ್ಪರ್ಧಾಮಿತ್ರದ ನಿರ್ದೇಶಕ ಓಂಕಾರ ಪಟೇಲ್ ಅವರು ಹಲವು ಸ್ಪರ್ಧಾ ಪರೀಕ್ಷೆಗಳ ತರಬೇತಿ ಕುರಿತಾಗಿ ಮತ್ತು ತಮ್ಮ ಸಂಸ್ಥೆಯ ಕುರಿತಾಗಿ ತಿಳಿಸಿಕೊಟ್ಟರು. ಸಂಪನ್ಮೂಲ ವ್ಯಕ್ತಿಯಾಗಿದ್ದ ಗೌರವ್ ಕೆ.ಎ.ಎಸ್ನ ಪೂರ್ವಭಾವಿ ಪರೀಕ್ಷೆ ತಯಾರಿ, ಪರೀಕ್ಷೆಯ ವಿಷಯಾಂಶಗಳು ಹಾಗು ಅಧ್ಯಯನ ಸಾಮಗ್ರಿಗಳ ಕುರಿತಾಗಿ ತಿಳಿಸಿಕೊಟ್ಟರು. ಚಂದನ್ ಕೆ.ಎ.ಎಸ್ನ ಮುಖ್ಯ ಪರೀಕ್ಷೆ ಮತ್ತು ಸಂದರ್ಶನ
ಎದುರಿಸುವ ಬಗ್ಗೆ ತಿಳಿಸಿದರು.
ಅಧ್ಯಕ್ಷತೆಯನ್ನು ಕನ್ನಡ ವಿಭಾಗದ ಮುಖ್ಯಸ್ಥರು, ಹಾಗು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೋಶದ ಸಂಯೋಜನಾಧಿಕಾರಿ ಯಶೋದ ಅವರು ವಹಿಸಿದ್ದರು. ಸುಪ್ರಿತ ಪ್ರಾರ್ಥಿಸಿದರು, ಮನು ಸ್ವಾಗತಿಸಿದರು, ಬಸವರಾಜ್ ನಿರೂಪಿಸಿ, ಸುಂದರ್ನಾಗ್ ವಂದಿಸಿದರು.
ಡಾಕ್ಟರೇಟ್
ತುಮಕೂರಿನ ವಿಜಯನಗರದ ಸಿ.ಎಸ್. ವೆಂಕಟರಮಣ ಜೋಯಿಸ್ ಅವರಿಗೆ ಜ್ಯೋತಿಷ್ಯ ಶಾಸ್ತ್ರ ವಿಭಾಗದಲ್ಲಿ ಡಾಕ್ಟರೇಟ್ ಪದವಿ ಲಭಿಸಿದೆ.