ಮತದಾನದ ಅರಿವು ಮೂಡಿಸಿ
ಕ.ಪ್ರ. ವಾರ್ತೆ ತುಮಕೂರು ಏ.3
ಕಳೆದ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಾಗಿರುವಂತಹ ಪ್ರದೇಶಗಳಲ್ಲಿನ ಜನತೆಗೆ ಮತದಾನದ ಮಹತ್ವ ಕುರಿತು ಅರಿವು ಮೂಡಿಸುವ ಮೂಲಕ ಜಿಲ್ಲೆಯಲ್ಲಿ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಮಾಣ ಹೆಚ್ಚುವಂತೆ ಕಾರ್ಯಕ್ರಮ ಅನುಷ್ಠಾನಗೊಳಿಸುವಂತೆ ಸ್ವೀಪ್ ಸಮಿತಿ ಅಧ್ಯಕ್ಷರೂ ಹಾಗೂ ಜಿ.ಪಂ. ಸಿ.ಇ.ಓ. ಗೋವಿಂದರಾಜು ಅವರು ಸೂಚಿಸಿದರು.
ಅವರಿಂದು ಜಿ.ಪಂ. ಸಭಾಂಗಣದಲ್ಲಿ ನಡೆದ ಸ್ವೀಪ್ (ಸಿಸ್ಟಮ್ಯಾಟಿಕ್ ಓಟರ್ಸ್ ಎಜುಕೇಷನ್ ಅಂಡ್ ಎಲೆಕ್ಟರೋಲ್ ಪಾರ್ಟಿಸಿಪೇಷನ್) ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ನೆಹರು ಯುವಕ ಕೇಂದ್ರದ ಸ್ವಯಂ ಸೇವಕರು, ಎನ್ಎಸ್ಎಸ್ ಅಧಿಕಾರಿಗಳು ಹಾಗೂ ಯುವಜನ ಸೇವಾ ಕ್ರೀಡಾ ಇಲಾಖೆಯ ಯುವಕ ಸಂಘದವರಿಗೆ ಕಾರ್ಯಾಗಾರ ಏರ್ಪಡಿಸಿ, ಮತದಾನದ ಮಹತ್ವ ಕುರಿತು ಗ್ರಾಮೀಣ ಭಾಗಗಳಿಗೆ ತೆರಳಿ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲು ಯುವಜನ ಸೇವಾ ಕ್ರೀಡಾ ಇಲಾಖೆ, ಎನ್.ಎಸ್.ಎಸ್. ಅಧಿಕಾರಿಗಳಿಗೆ ಅವರು ತಿಳಿಸಿದರು. ಗ್ರಾಮಪಂಚಾಯತಿ ಮಟ್ಟಗಳಲ್ಲಿ ಸ್ತ್ರೀಶಕ್ತಿ ಸಂಘಗಳಿಂದ ಮತ್ತು ಆಶಾಕಾರ್ಯಕರ್ತೆಯರ ಸಹಯೋಗದೊಂದಿಗೆ ಬ್ಯಾನರ್ ಪ್ಲೇಕಾರ್ಡ್ಗಳನ್ನು ಹಿಡಿದು, ಮತದಾನದ ಮಹತ್ವ ಸಾರುವ ಘೋಷಣೆಗಳನ್ನು ಕೂಗುವ ಮೆರವಣಿಗೆಗಳನ್ನು ಏರ್ಪಡಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ಸೂಚಿಸಿದ ಅವರು, ವಿಕಲಚೇತನರು ಮತದಾನದಿಂದ ವಂಚಿತರಾಗದಂತೆ ಅವರಿಗೆ ಮತದಾನದ ಮಹತ್ವದ ಬಗ್ಗೆ ತಿಳಿ ಹೇಳುವ ಮೂಲಕ ವಿಕಲಚೇತನರೆಲ್ಲರೂ ಮತದಾನದ ದಿನ ಸಕ್ರಿಯವಾಗಿ ಪಾಲ್ಗೊಳ್ಳಲು ಕಾರ್ಯಕ್ರಮ ರೂಪಿಸಲು ತಿಳಿಸಿದರು.
ತೋಟಗಾರಿಕೆ ಇಲಾಖೆ, ಕೈಗಾರಿಕೆ ಇಲಾಖೆ, ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ, ಸ್ಥಳೀಯ ಸಂಸ್ಥೆಗಳು ಇಲಾಖಾ ವ್ಯಾಪ್ತಿಯಲ್ಲಿ ಕೈಗೊಳ್ಳಬಹುದಾದ ಸ್ವೀಪ್ ಸಂಬಂಧಿತ ಕಾರ್ಯಕ್ರಮಗಳನ್ನು ತ್ವರಿತಗತಿಯಲ್ಲಿ ರೂಪಿಸಿ ಅನುಷ್ಠಾನಗೊಳಿಸಿ ವರದಿ ನೀಡುವಂತೆ ಅವರು ತಿಳಿಸಿದರು. ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಕಡ್ಡಾಯ ಮತದಾನ
ಪಿ.ಯು. ಮತ್ತು ಫಸ್ಟ್ ಗ್ರೇಡ್ ಕಾಲೇಜುಗಳಲ್ಲಿ ಮತದಾನದ ಮಹತ್ವ ಸಾರುವ ಬ್ಯಾನರ್ಗಳನ್ನು ಹಾಕಿಸುವಂತೆ ತಿಳಿಸಿದ ಅವರು, ಶಾಲಾ ಹಾಗೂ ಕಾಲೇಜು ಮಕ್ಕಳ ಪೋಷಕರಿಂದ ಕಡ್ಡಾಯವಾಗಿ ಮತದಾನ ಮಾಡುತ್ತೇವೆಂದು ಪ್ರಮಾಣೀಕರಿಸುವ ಘೋಷಣಾ ಪತ್ರದಲ್ಲಿ ಸಹಿ ಹಾಕಿಸುವಂತೆ ತಿಳಿಸಿದರು. ತಾಯಂದಿರ ಸಭೆ, ಸ್ತ್ರೀಶಕ್ತಿ ಸಂಘದವರ ಸಭೆ, ಅಂಗನವಾಡಿ ಶಿಕ್ಷಕಿಯರ ಸಭೆ, ಸೂಪರ್ವೈಸರ್ಗಳ ಸಭೆ ನಡೆಸಿ, ಮತದಾನದ ಬಗ್ಗೆ ಅರಿವು ಮೂಡಿಸುವಂತೆ ಮತ್ತು ತಾಲೂಕು ಮಟ್ಟದಲ್ಲಿ ಯುವ ಕಾರ್ಯಾಗಾರಗಳನ್ನು ನಡೆಸಿ, ಮತದಾನದ ಬಗ್ಗೆ ವ್ಯಾಪಕ ಪ್ರಚಾರ ಮಾಡುವಂತೆ ಅವರು ತಿಳಿಸಿದರು.
ಕಾರ್ಯಾಗಾರ
ಜಿಲ್ಲಾ ವಯಸ್ಕರ ಶಿಕ್ಷಣ ಇಲಾಖೆ ವತಿಯಿಂದ ಆರ್ಯಬಾಲಿಕ ಪಾಠಶಾಲೆಯಲ್ಲಿ ಜಿಲ್ಲಾ ಸಂಯೋಜಕರು ಮತ್ತು ತಾಲೂಕು ಸರ್ಕಾರಿ, ಸರ್ಕಾರೇತರ ಮಟ್ಟದ ಸಂಯೋಜಕರಿಗೆ ಆಯೋಜಿಸಲಾಗಿದ್ದ ಒಂದು ದಿನದ ಕಾರ್ಯಾಗಾರವನ್ನು ಸ್ವೀಪ್ ಸಮಿತಿ ಅಧ್ಯಕ್ಷ ಗೋವಿಂದರಾಜು ಅವರು ಉದ್ಘಾಟಿಸಿದರು. ಏಪ್ರಿಲ್ 17 ರಂದು ನಡೆಯುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಮತದಾನ ಮಾಡಲು ಜಿಲ್ಲಾ ಮತ್ತು ತಾಲೂಕು ಸಂಯೋಜಕರು, ಗ್ರಾಮಲೋಕ ಶಿಕ್ಷಣ ಸಮಿತಿ ಕೇಂದ್ರಗಳ ಪ್ರೇರಕರು ಮತ್ತು ಸ್ವಯಂ ಸೇವಕರ ಪಾತ್ರ ಕುರಿತು ಅವರು ಮಾತನಾಡಿದರು.
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಗಳು, ಮಧುಗಿರಿ ವಿಭಾಗದ ತಾಲೂಕು ಸಂಯೋಜಕರು ಮತ್ತು ಜಿಲ್ಲಾಪಂಚಾಯತ್ ಯೋಜನಾ ಅಭಿಯಂತರರು ಉಪಸ್ಥಿತರಿದ್ದರು.