ಕಾಂಗ್ರೆಸ್ಗೆ ಸೇನಾನಿಯೇ ಇಲ್ಲ: ಬಿಎಸ್ವೈ ವ್ಯಂಗ್ಯ
ತುರುವೇಕೆರೆ: ಕಾಂಗ್ರೆಸ್ ಪಕ್ಷಕ್ಕೆ ಸೇನಾನಿಯೇ ಇಲ್ಲ. ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಮೊದಲೇ ರಣರಂಗದಿಂದ ಹೊರಬಿದ್ದಿದ್ದಾರೆ. ಇನ್ನು ರಾಹುಲ್ ಗಾಂಧಿ ಪಕ್ವವಾಗಿಲ್ಲ. ಸೋನಿಯಾ ಗಾಂಧಿಯನ್ನು ಜನ ನಂಬುವುದಿಲ್ಲ. ಇಂತಹ ವಿಷಮ ಸ್ಥಿತಿಯಲ್ಲಿರುವ ಕಾಂಗ್ರೆಸ್ ಒಂದು ಸೇನಾನಿಯೇ ಇಲ್ಲದ ಪಕ್ಷವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲೇವಡಿ ಮಾಡಿದರು.
ಪಟ್ಟಣದ ಬಯಲು ರಂಗಮಂದಿರದ ಆವರಣದಲ್ಲಿ ಮಾತನಾಡಿದ ಅವರು ಗುಜರಾತ್ ಅನ್ನು ಮಾದರಿ ರಾಜ್ಯವನ್ನಾಗಿ ಮಾಡಿರುವ ನರೇಂದ್ರ ಮೋದಿಯವರೇ ಮುಂದಿನ ಪ್ರಧಾನ ಮಂತ್ರಿ. ಇದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ಇಡೀ ದೇಶದಾದ್ಯಂತ ಮೋದಿಯವರ ಪರ ಅಲೆ ಎದ್ದಿದೆ. ಎಲ್ಲಾ ರಾಜ್ಯಗಳಿಗಿಂತ ಕರ್ನಾಟಕದಲ್ಲಿ ಹೆಚ್ಚು ಮೋದಿ ಅಲೆ ಇದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ 19 ಸ್ಥಾನ ಗಳಿಸಿದ್ದ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ 20 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದರು.
ಕಳೆದ ಚುನಾವಣೆಯಲ್ಲಿ ಶೇಕಡಾ 43 ರಷ್ಟು ಮತದಾರರು ಬಿಜೆಪಿಯನ್ನು ಬೆಂಬಲಿಸಿದ್ದರು. ಈ ಬಾರಿ ಶೇಕಡಾ 46 ರಷ್ಟು ಮಂದಿ ಬಿಜೆಪಿಯನ್ನು ಬೆಂಬಲಿಸಿದ್ದಾರೆ. ಸಿದ್ದರಾಮಯ್ಯನವರಿಗೆ ಸೋಲಿನ ಭೀತಿ ಎದುರಾಗಿದೆ. ಹಾಗಾಗಿ ರೈತರ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ. ಸತ್ತ ರೈತನಿಗೆ ಏಕೆ 10 ಲಕ್ಷ ರು.ಗಳ ಪರಿಹಾರ ನೀಡಿದ್ದೀರಿ. ಹಾಗಾದರೆ ಪ್ರತಿಯೊಬ್ಬ ಕುಡುಕ ಸತ್ತರೆ ಸರ್ಕಾರದಿಂದ 10 ಲಕ್ಷ ರು.ಗಳ ಪರಿಹಾರವನ್ನು ನೀಡಿವಿರಾ ಎಂದು ಪ್ರಶ್ನಿಸಿದರು.
ಮಾದರಿ ರಾಜ್ಯ: ಮುಂದಿನ ಚುನಾವಣೆಯಲ್ಲಿ ನಾನು ಹಾಗೂ ಜಿಲ್ಲಾ ಸಂಸದ ಜಿ.ಎಸ್. ಬಸವರಾಜು ಗೆಲವು ಸಾಧಿಸಿ ರಾಜ್ಯವನ್ನು ಮಾದರಿ ರಾಜ್ಯವನ್ನಾಗಿ ಮಾಡುವುದಾಗಿ ಹೇಳಿದರು. ತಮ್ಮ ಆಡಳಿತಾವಧಿಯಲ್ಲಿ ಕೈಗೊಂಡ ಹಲವಾರು ಪ್ರಗತಿಪರ ಕೆಲಸಗಳು, ರೈತರು, ಮಹಿಳೆಯರು, ವಿದ್ಯಾರ್ಥಿಗಳು ಹಾಗೂ ಜನಸಾಮಾನ್ಯರಿಗೆ ನೀಡಿದ ಕೊಡುಗೆಗಳೇ ತಮ್ಮ ಪಕ್ಷದ ಗೆಲವಿಗೆ ಕಾರಣವಾಗಿದೆ ಎಂದರು. ಕಾಂಗ್ರೆಸ್ ಪಕ್ಷದವರೇ ತಮ್ಮ ಪಕ್ಷ ಸೋಲಲಿದೆ ಎಂದು ಹೇಳಿಕೆ ನೀಡಿರುವುದು ಕಾಂಗ್ರೆಸ್ನ ಸ್ಥಿತಿಯನ್ನು ಬಿಂಬಿಸಿದಂತಾಗಿದೆ ಎಂದರು.
ಇದೇ ವೇಳೆ ತಾಲೂ ಕಿನ ಮಾಜಿ ಶಾಸಕ ಎಚ್.ಬಿ.ನಂಜೇಗೌಡರನ್ನು ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆ ಮಾಡಿಕೊಳ್ಳಲಾಯಿತು. ಸಭೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುರೇಶ್ ಗೌಡ, ಸಂಸದ ಹಾಗೂ ಪಕ್ಷದ ಅಭ್ಯರ್ಥಿ ಜಿ.ಎಸ್.ಬಸವರಾಜು, ನಂದೀಶ್, ಶಿವಪ್ರಸಾದ್, ಹೆಬ್ಬಾಕ ರವಿ, ತಾಲೂಕು ಅಧ್ಯಕ್ಷ ಅರಳೀಕೆರೆ ರವಿಕುಮಾರ್, ತಾಲೂಕು ಮಾಜಿ ಅಧ್ಯಕ್ಷ ಟಿ.ಎಸ್.ಬೋರೇಗೌಡ, ಮುಖಂಡರಾದ ರೇಣುಕಯ್ಯ, ವಕೀಲ ಡಿ.ಟಿ. ರಾಜಶೇಖರ್ ಮೊದಲಾದವರು ಹಾಜರಿದ್ದರು.
ಎಂಡಿ ಎಲ್ಬಗ್ಗೆ ಪ್ರತಿಕ್ರಿಯೆ ಇಲ್ಲ: ಕೆಜೆಪಿಯಲ್ಲಿ ತಮ್ಮ ಪಟ್ಟ ಶಿಷ್ಯರಾಗಿದ್ದ ಇದೇ ತಾಲೂಕಿನ ವಿಧಾನ ಪರಿಷತ್ ಸದಸ್ಯ ಎಂ.ಡಿ. ಲಕ್ಷ್ಮೀನಾರಾಯಣ್ ಅವರು ತಮ್ಮನ್ನು ಬಿಟ್ಟು ಕಾಂಗ್ರೆಸ್ ಸೇರಿದ ಕುರಿತು ಸಭೆಯಲ್ಲಿ ಮಾತನಾಡುವರು ಎಂಬ ಊಹಿಸಲಾಗಿತ್ತು. ಆದರೆ ಯಾವುದೇ ಚರ್ಚೆ ಮಾಡದಿರುವುದು ಅಚ್ಚರಿ ತಂದಿತ್ತು. ಸಭೆಯ ನಂತರ ಪತ್ರಕರ್ತರು ಎಂ.ಡಿ.ಲಕ್ಷ್ಮೀನಾರಾಯಣ್ ಬಗ್ಗೆ ಕೇಳಿದಾಗಲೂ ಸಹ ಯಾವುದೇ ಉತ್ತರ ಕೊಡಲು ಯಡಿಯೂರಪ್ಪ ನಿರಾಕರಿಸಿದರು.