ಕಾಂಗ್ರೆಸ್ನಿಂದ ವಿವಿಧ ಆಮಿಷ: ಶಾಸಕ ನಾಗರಾಜಯ್ಯ ಆರೋಪ
ಕುಣಿಗಲ್: ತಾಲೂಕಿನಲ್ಲಿ ಲೋಕಸಭೆ ಚುನಾವಣೆಗಳಲ್ಲಿ ನೀತಿ ಸಂಹಿತೆ ಪಾಲನೆಯಾಗುತ್ತಿಲ್ಲ. ಸಹಾಯಕ ಚುನಾವಣಾಧಿಕಾರಿ ಕಾಂಗ್ರೆಸ್ ಪಕ್ಷದ ಏಜೆಂಟರಂತೆ ವರ್ತಿಸುತ್ತಿದ್ದು, ಆ ಪಕ್ಷದವರು ಮತದಾರರಿಗೆ ವಾಚ್ ಸೇರಿದಂತೆ ವಿವಿಧ ಆಮಿಷ ನೀಡುತ್ತಿದ್ದರೂ ಕಂಡೂ ಕಾಣದಂತೆ ಕುಳಿತಿದ್ದಾರೆ. ನೀತಿ ಸಂಹಿತೆಪಾಲನೆ ಮಾಡುವಲ್ಲಿ ಚುನಾವಣಾಧಿಕಾರಿ ವಿಫಲವಾಗಿದ್ದಾರೆ ಎಂದು ಶಾಸಕ ಡಿ.ನಾಗರಾಜಯ್ಯ ಆರೋಪಿಸಿದರು.
ಶುಕ್ರವಾರ ಚುನಾವಣೆ ಪ್ರಚಾರ ಕಾರ್ಯಾಲಯ ಉದ್ಘಾಟಿಸಿ ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಮತದಾರರಿಗೆ ಆಮಿಷ ನೀಡಲು ಸಚಿವ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಅವರ ಭಾವಚಿತ್ರ ಇರುವ ವಾಚ್ಗಳನ್ನು ಗ್ರಾಮಾಂತರ ಪ್ರದೇಶ ಸೇರಿದಂತೆ ಇಡೀ ಗ್ರಾಮಾಂತರ ಲೋಕಸಭೆ ಕ್ಷೇತ್ರದೆಲ್ಲೆಡೆ ಹಂಚುತ್ತಿರುವ ಜೊತೆಯಲ್ಲಿ ಮತದಾರರಿಗೆ ವಿವಿಧ ರೀತಿಯ ಆಮೀಷಗಳನ್ನು ನೀಡುತ್ತಿದ್ದಾರೆ.
ಚುನಾವಣೆ ನೀತಿ ಸಂಹಿಕೆ ಪಾಲನೆ ಮಾಡಬೇಕಾದ ಸಹಾಯಕ ಚುನಾವಣಾಧಿಕಾರಿಗಳು, ಕಾಂಗ್ರೆಸ್ ಅಭ್ಯರ್ಥಿ ಮತದಾರರಿಗೆ ಆಮಿಷ ನೀಡುತ್ತಿರುವುದರ ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೂ ಕಂಡೂ ಕಾಣದಂತೆ ಜಾಣ ಮೌನವಹಿಸಿರುವುದು ಅಚ್ಚರಿ ಸಂಗತಿಯೇ. ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಕ್ರಮ ಕೈಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಜೆಡಿಎಸ್ ವತಿಯಿಂದ ಅಧಿಕಾರಿಗಳಿಗೆ ತಕ್ಕ ಉತ್ತರ ನೀಡಬೇಕಾಗುತ್ತೆ ಎಂದು ಎಚ್ಚರಿಸಿದರಲ್ಲದೆ, ಇನ್ನಾದರೂ ಚುನಾವಣೆ ನೀತಿ ಸಂಹಿತೆ ಪಾಲನೆ ಮಾಡುವ ನಿಟ್ಟಿನಲ್ಲಿ ಚುನಾವಣಾಧಿಕಾರಿಗಳು ಬದ್ಧತೆಯಿಂದ ಕೆಲಸಮಾಡಿ ಚುನಾವಣೆ ಅಕ್ರಮ ತಡೆಗಟ್ಟುವಂತೆ ಆಗ್ರಹಿಸಿದರು.