ತಪ್ಪು ಪ್ರಕರಣ ದಾಖಲು: ಇಬ್ಬರು ಎಸ್ಐಗಳ ಅಮಾನತಿಗೆ ಆದೇಶ
ಬೆಂಗಳೂರು: ಪೊಲೀಸ್ ಕಿರುಕುಳದಿಂದ ಮೃತಪಟ್ಟ ವ್ಯಕ್ತಿಗೆ ಸಂಬಂಧಿಸಿದಂತೆ ತಪ್ಪು ಪ್ರಕರಣ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಡ್ಯದ ಕೊಪ್ಪ ಹಾಗೂ ತುಮಕೂರು ಜಿಲ್ಲೆಯ ಅಮೃತೂರಿನ ಸಬ್
ಇನ್ಸ್ಪೆಕ್ಟರ್ ಅಮಾನತುಗೊಳಿಸಿರುವ ಹೈಕೋರ್ಟ್, ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿ ಆದೇಶಿಸಿದೆ. ಆರೋಪಿ ಸಾವಿಗೆ ಸಂಬಂಧಿಸಿದಂತೆ ಪೊಲೀಸರ ವಿರುದ್ಧ 302(ಹತ್ಯೆ) ಪ್ರಕರಣಕ್ಕೆ ದಾಖಲಿಸುವ ಬದಲಿಗೆ ಕೇವಲ 498(ಎ) ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅನ್ನು ಅಮಾನತುಗೊಳಿಸಿ ನ್ಯಾ.ಎಸ್.ಎನ್.ಸತ್ಯನಾರಾಯಣ ಅವರಿದ್ದ ಏಕಸದಸ್ಯ ಪೀಠ ಆದೇಶಿಸಿದೆ.
ತಮ್ಮ ಮಗನಿಗೆ ಪೊಲೀಸರು ಕಿರುಕುಳ ನೀಡಿ ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಿ ಮೃತನ ತಂದೆ ಚನ್ನಯ್ಯ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ವಿವಾದವೇನು?: ತುಮಕೂರು ಜಿಲ್ಲೆಯ ಅಮೃತೂರಿನ ನಿವಾಸಿ ಧನಲಕ್ಷ್ಮೀ ಎಂಬುವರು ತಮ್ಮ ಪತಿ ಪುಟ್ಟಸ್ವಾಮಿ ಎಂಬುವರ ವಿರುದ್ಧ ಅಮೃತೂರು ಪೊಲೀಸ್ ಠಾಣೆಯಲ್ಲಿ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಪೊಲೀಸರು ಪುಟ್ಟಸ್ವಾಮಿಯನ್ನು ಬಂಧಿಸಿದ್ದರು. ಆದರೆ, ಠಾಣೆಯಲ್ಲಿ ಪೊಲೀಸರು ಥಳಿಸಿದ ಪರಿಣಾಮ ಆತ ಅಸ್ವಸ್ಥಗೊಂಡಿದ್ದನು. ನಂತರ ಆತನನ್ನು ಮಂಡ್ಯದ ಕೊಪ್ಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದನು. ಆದರೆ, ಪೊಲೀಸರು ಹತ್ಯೆಯ ಪ್ರಕರಣವನ್ನು ಮುಚ್ಚಿಟ್ಟು ಕೇವಲ ಕೌಟುಂಬಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಇದನ್ನು ಪ್ರಶ್ನಿಸಿ ಪುಟ್ಟಸ್ವಾಮಿ ತಂದೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಯಕ್ಷಗಾನ ಪ್ರಸಂಗ ಇಂದು
ತುಮಕೂರು: ಬೆಂಗಳೂರಿನ ಸಮಸ್ಥರು ರಂಗ ಸಂಶೋಧನಾ ಕೇಂದ್ರದ ವತಿಯಿಂದ ತುಮಕೂರಿನ ಮೆಳೇಹಳ್ಳಿಯ ವಿ. ರಾಮಮೂರ್ತಿ ರಂಗಸ್ಥಳದಲ್ಲಿ ಏ. 5 ರಂದು ಸಂಜೆ 7 ಗಂಟೆಗೆ ಗಂಗಾತ್ಮಜ ಗಾಂಗೇಯ ಯಕ್ಷಗಾನ ಏರ್ಪಾಟಾಗಿದೆ. ಗುಬ್ಬಿ ಕಂಪನಿಯ ಹಿರಿಯ ಕಲಾವಿದ ಹೆಬ್ಬಾಕ ಸಿದ್ದಲಿಂಗಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ರಂಗ ನಿರ್ದೇಶಕ ಗೋಪಾಲಕೃಷ್ಣ ನಾಯರಿ ವಹಿಸಲಿದ್ದಾರೆ. ಪ್ರಸಿದ್ಧ ಸ್ತ್ರೀವೇಷಧಾರಿ ಶಿವಕುಮಾರ ಬೇಗಾರ್ ನಿರ್ದೇಶಿಸಿದ್ದಾರೆ.