ಪರಮೇಶ್ವರ್ ಕೀಳು ಅಭಿರುಚಿ ಮಾತು: ಶಾಸಕ ಸುಧಾಕರಲಾಲ್
ತುಮಕೂರು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹಗುರವಾಗಿ ಮಾತನಾಡಿರುವುದು ಅವರ ಘನತೆಗೆ ಶೋಭೆ ತರುವುದಿಲ್ಲ ಎಂದು ಕೊರಟಗೆರೆ ಶಾಸಕ ಪಿ.ಆರ್. ಸುಧಾಕರಲಾಲ್ ತಿಳಿಸಿದ್ದಾರೆ. ರಾಜ್ಯಾಧ್ಯಕ್ಷ ಸ್ಥಾನದಲ್ಲಿರುವ ಡಾ.ಜಿ.ಪರಮೇಶ್ವರ್ ಮಾತಿನ ಮೇಲೆ ನಿಗಾ ಇರಬೇಕು ಎಂದರು. ಚುನಾವಣೆ ಸಂದರ್ಭದಲ್ಲಿ ಆರೋಪ ಪ್ರತ್ಯಾರೋಪ ಮಾಡುವುದು ಸಹಜ, ಹಿರಿಯ ರಾಜಕಾರಣಿಯ ಬಗ್ಗೆ ಅಣಕು ಮಾತುಗಗಳಾನ್ನಾಡಿರುವುದು ಸರಿಯಲ್ಲ, ಪರಮೇಶ್ವರ್ ಅವರ ಧೋರಣೆಯನ್ನು ಜೆಡಿಎಸ್ ಪಕ್ಷದ ಎಲ್ಲಾ ಕಾರ್ಯಕರ್ತರು ಖಂಡಿಸಲಿದ್ದಾರೆ ಎಂದರು.
ಡಾ.ಜಿ.ಪರಮೇಶ್ವರ್ ಹೇಳಿಕೆ ನಾಚಿಕೆಗೇಡಿನದು: ನಾಗರಾಜಯ್ಯ
ಕುಣಿಗಲ್ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಒಂದು ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಲ್ಲಿ ಕೂರಲು ಯೋಗ್ಯತೆ ಇಲ್ಲದಂಥ ವ್ಯಕ್ತಿ ಎಂಬುದನ್ನು ಸಾಬೀತು ಪಡಿಸಿದ್ದಾರೆ ಎಂದು ಶಾಸಕ ಡಿ.ನಾಗರಾಜಯ್ಯ ತಿಳಿಸಿದ್ದಾರೆ. ಶುಕ್ರವಾರ, ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪರಮೇಶ್ವರ ಅವರ ತಂದೆ ಗಂಗಾಧರಯ್ಯನವರಿಗೆ ಮೆಡಿಕಲ್ ಕಾಲೇಜು ಮಂಜೂರಿಗೆ ಸಂಬಂಧಿಸಿದಂತೆ ಅಂದಿನ ಸಿಎಂ ಅಗಿದ್ದ ದೇವೆಗೌಡರು ಸಹಾಯ ಮಾಡಿದ್ದರಿಂದಲೇ ಇಂದು ಪರಮೇಶ್ವರ್ ಈ ಹಂತಕ್ಕೆ ಬೆಳೆದಿದ್ದಾರೆ. ದೇವೇಗೌಡರು ಈ ಇಳಿವಯಸ್ಸಿನಲ್ಲೂ ಯುವಕರೂ ನಾಚಿಸುವಂತೆ ರಾಜಕಾರಣ ಮಾಡುತ್ತಿದ್ದಾರೆ. ಆದರೆ ಪರಮೇಶ್ವರ್ ಅವರು ಮಾಜಿ ಪ್ರಧಾನಿಯೊಬ್ಬರ ಕುರಿತು ಈ ರೀತಿ ಹಗುರ ಹೇಳಿಕೆ ನೀಡಿರುವುದು ಬೇಸರದ ಸಂಗತಿ ಎಂದರು.