ಬಿಜೆಪಿ ಲೆಕ್ಕಕ್ಕಿಲ್ಲ, ಗೌಡರ ದಳ ಅಡ್ರೆಸ್ಸಿಗಿಲ್ಲ
ಪಾವಗಡ: ಮೋದಿ ಒಂದು ರೀತಿಯ ಸುಂಟರಗಾಳಿ ಇದ್ದ ಹಾಗೇ, ತಾಲೂಕಿನಲ್ಲಿ ಬಿಜೆಪಿ ಲೆಕ್ಕಕ್ಕಿಲ್ಲ, ಸಮಾರಂಭಗಳಲ್ಲಿ ಸದಾ ನಿದ್ರಿಸುವ ದೇವೇಗೌಡರ ಜೆಡಿಎಸ್ ವಿಳಾಸವಿಲ್ಲದೇ ಮಾಯವಾಗಲಿದೆ ಎಂದು ಮಾಜಿ ಸಚಿವ ವೆಂಕಟರಮಣಪ್ಪ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ತಾ.ಕಾಂಗ್ರೆಸ್ ವತಿಯಿಂದ ಶುಕ್ರವಾರ ಪಟ್ಟಣದ ಎಸ್ಎಸ್ಕೆ ಬಯಲು ರಂಗಮಂದಿರದಲ್ಲಿ ಏರ್ಪಡಿಸಿದ್ದ ಕಾರ್ಯಕರ್ತರ ಸಮಾವೇಶದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಜೆಪಿಯ ಪ್ರಧಾನಿ ಎಂದು ಬಿಂಬಿತರಾದ ನರೇಂದ್ರ ಮೋದಿ ಸುಂಟರಗಾಳಿ ಇದ್ದ ಹಾಗೇ. ಅವರಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ, ಮಾಜಿ ಪ್ರಧಾನಿ ದೇವೇಗೌಡರ ಜೆಡಿಎಸ್ ವಿಳಾಸವಿಲ್ಲದೇ ಮಾಯವಾಗಲಿದೆ ಎಂದು ಅವರು ವ್ಯಂಗವಾಡಿದರು.
ತಾಲೂಕಿನಲ್ಲಿ ಶಾಸಕರಾಗಿ ಆಯ್ಕೆಯಾದ ತಿಮ್ಮರಾಯಪ್ಪ 1ವರ್ಷ ಕಳೆದರೂ ಪ್ರಗತಿಗೆ ಸರ್ಕಾರದಿಂದ ಅನುದಾನ ತಂದಿಲ್ಲ, ವಿಧಾನ ಸಭೆ ಚುನಾವಣೆಯಲ್ಲಿ ತಮ್ಮ ವಿರುದ್ಧ ಅಪಪ್ರಚಾರ ಮತ್ತು ಅವಹೇಳನ ಮಾಡಿ ಜನತೆಯನ್ನು ದಿಕ್ಕು ತಪ್ಪಿಸಿ ಮತ ಸೆಳೆದ ಜೆಡಿಎಸ್ ಮುಖಂಡರ ಕಾರ್ಯ ವೈಖರಿ ವಿರುದ್ಧ ತೀವ್ರ ವಾಗ್ದಳಿ ನಡೆಸಿದರು.
ಸಂಸದ ಜನಾರ್ದನ ಸ್ವಾಮಿ ಏನು ಕೆಲಸ ಮಾಡಿಲ್ಲ. ಅಂತಹವರನ್ನು ಬೆಂಬಲಿಸಬೇಡಿ ಎಂದ ಅವರು ಸಿಎಂ ಸಿದ್ಧರಾಮಯ್ಯ ಅಭಿವೃದ್ಧಿ ಕಾರ್ಯಗಳ ಬಗ್ಗೆ ವಿವರಿಸಿದರು. ರಾಹಲ್ ಗಾಂಧಿ ಯುವಕರಾಗಿದ್ದು ಉತ್ತಮ ನಡವಳಿಕೆ ಯುಳ್ಳವರು, ದೇಶದ ಭದ್ರತೆ ಮತ್ತು ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್ ಬೆಂಬಲಿಸಬೇಕಿದೆ. ನುಡಿದಂತೆ ನಡೆಯುವ ಮತ್ತು ಸರಳ ಸಜ್ಜನಿಕೆಗೆ ಹೆಸರಾದ ಚಿತ್ರದುರ್ಗ ಲೋಕಸಭೆ ಅಭ್ಯರ್ಥಿ ಚಂದ್ರಪ್ಪ ಅವರ ಗೆಲವಿಗೆ ಶ್ರಮಿಸಬೇಕು. ಕಾರ್ಯಕರ್ತರು ಇಂದಿನಿಂದಲೇ ಶ್ರಮವಹಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನು ಜನರ ಮುಂದಿಟ್ಟು ಮತಯಾಚಿಸುವ ಕೆಲಸ ಮಾಡಬೇಕು. ತಾ. ಸುಮಾರು 1ಲಕ್ಷ ಮತಗಳು ಪಕ್ಷಕ್ಕೆ ಲಭ್ಯವಾಗಬೇಕು ಎಂದು ಕಾರ್ಯಕರ್ತರಿಗೆ ಕರೆ ನೀಡಿದರು. ತಾ.ಕಾಂಗ್ರೆಸ್ ಗ್ರಾಮಾಂತರ ಅಧ್ಯಕ್ಷ ಎಚ್.ವಿ. ವೆಂಕಟೇಶ್ ಮಾತನಾಡಿ ಅಧಿಕಾರದ ಆಸೆಗಾಗಿ ಜೆಡಿಎಸ್ ಅಪಪ್ರಚಾರದಲ್ಲಿ ನಿರತವಾಗಿದ್ದು ಶಾಸಕ ತಿಮ್ಮರಾಯಪ್ಪ ಅವರಿಂದ ಅಭಿವೃದ್ಧಿ ನಿರೀಕ್ಷಿಸಲು ಸಾಧ್ಯವಿಲ್ಲ ಎಂದರು.