ಕಾಂಗ್ರೆಸ್ ಅಭ್ಯರ್ಥಿಗೆಒಕ್ಕಲಿಗರ ಸಂಘ ಬೆಂಬಲ
ತುಮಕೂರು: ತುಮಕೂರು ಕಾಂಗ್ರೆಸ್ ಅಭ್ಯರ್ಥಿ ಎಸ್.ಪಿ. ಮುದ್ದಹನುಮೇಗೌಡರಿಗೆ ಒಕ್ಕಲಿಗರ ಸಂಘ ಬೆಂಬಲ ವ್ಯಕ್ತಪಡಿಸಿದೆ ಎಂದು
ಸಂಘದ ಮುಖಂಡ ಟಿ.ವಿ. ಮಾರುತಿ ತಿಳಿಸಿದ್ದಾರೆ.
ಈ ಸಂಬಂಧ ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಕಾಂಗ್ರೆಸ್ನಿಂದ ಯಾವುದೇ ಜಾತಿ, ಸಮುದಾಯದ ವ್ಯಕ್ತಿ ನಿಂತಿದ್ದರೂ ಅವರಿಗೆ ಬೆಂಬಲ ನೀಡುತ್ತಿದ್ದೆವು. ಇದರಲ್ಲಿ ಅನುಮಾನ ಬೇಡ ಎಂದರು.ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, ಮಾಜಿ ಪ್ರಧಾನಿ ದೇವೇಗೌಡರ ಕುರಿತ ಹೇಳಿಕೆಗೆ ಈಗಾಗಲೇ ವಿಷಾದ ವ್ಯಕ್ತಪಡಿಸಿದ್ದಾರೆ. ದೇವೇಗೌಡರ ಬಗ್ಗೆ ಅಪಾರವಾದ ಗೌರವವಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು. ಇದೇ ವೇಳೆ ಉಪಸ್ಥಿತರಿದ್ದ ಸಂಘದ ಮುಖಂಡ ಆಡಿಟರ್ ಯಲಚವಾಡಿ ನಾಗರಾಜ್ ಮಾತನಾಡಿ, ಮುದ್ದಹನುಮೇಗೌಡ ಸರಳ, ಸಜ್ಜನ ವ್ಯಕ್ತಿ. ಅವರಿಗೆ ಸಂಘ ಬೆಂಬಲ ವ್ಯಕ್ತಪಡಿಸಿದೆ ಎಂದರು. ಬಿ.ಆರ್. ರಾಮೇಗೌಡ, ಪ್ರಸನ್ನಕುಮಾರ್, ವೀರಣ್ಣ, ಸುವರ್ಣಮ್ಮ, ಬೋರೇಗೌಡ ಮತ್ತಿತರರು ಉಪಸ್ಥಿತರಿದ್ದರು.
ಅಪಘಾತ: ಆರೋಗ್ಯ ಸಹಾಯಕ ಸಾವು
ಭಾರತೀನಗರ: ಬಸ್ ಮತ್ತು ಸ್ಕೂಟರ್ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಆರೋಗ್ಯ ಸಹಾಯಕರೊಬ್ಬರ ಮೃತಪಟ್ಟ ಘಟನೆ ಮದ್ದೂರು-ಮಳವಳ್ಳಿ ಮುಖ್ಯ ರಸ್ತೆಯ ಐಟಿಐ ಕಾಲೇಜು ಬಳಿ ಸಂಭವಿಸಿದೆ. ಮೃತಪಟ್ಟ ವ್ಯಕ್ತಿಯನ್ನು ತುಮಕೂರು ಮೂಲದ ರಾಜೇಂದ್ರ ಸಾಗರ್(26) ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ಗುರುದೇವರಹಳ್ಳಿಯಿಂದ ಕೆಲಸ ಮುಗಿಸಿಕೊಂಡು ಕೆ.ಎಂ.ದೊಡ್ಡಿಗೆ ಬರುತ್ತಿದ್ದಾಗ ಮಳವಳ್ಳಿಯಿಂದ ಮದ್ದೂರಿಗೆ ಹೋಗುತ್ತಿದ್ದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ. ಆಗ ಗಾಯಗೊಂಡ ರಾಜೇಶ್ನನ್ನು ಮಂಡ್ಯ ಜಿಲ್ಲಾಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆಯೇ ಮೃತಪಟ್ಟಿದ್ದಾನೆ. ಕೆ.ಎಂ.ದೊಡ್ಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.