ಸಮಸ್ಯೆ ನಿವಾರಣೆಗೆ ತಾಕೀತು
ಚಿಕ್ಕನಾಯಕನಹಳ್ಳಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿರುವ 715 ಗ್ರಾಮಗಳ ಸಮಸ್ಯೆ ಪರಿಹಾರಕ್ಕಾಗಿ ರು.15.40 ಕೋಟಿ ತೆಗೆದಿಡಲಾಗಿದೆ ಎಂದು ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದರಾಜು ತಿಳಿಸಿದರು.
ಪಟ್ಟಣ ತಾಪಂ ಸಭಾಂಗಣದಲ್ಲಿ ಶನಿವಾರ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರಿಗಳು ಸಮಸ್ಯೆ ಶೀಘ್ರ ಪರಿಹಾರಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಕುಡಿವ ನೀರಿನ ಸಮಸ್ಯೆ ಉಲ್ಬಣಿಸುವ ಎಲ್ಲಾ ಸೂಚನೆಗಳಿದ್ದು, ಗ್ರಾಮ ಪಂಚಾಯ್ತಿ ನೌಕರರು ಕೇಂದ್ರ ಸ್ಥಾನದಲ್ಲಿ ವಾಸಿಸುವುದು ಕಡ್ಡಾಯ.
ಒಂದು ವೇಳೆ ಸ್ಥಳೀಯರಿಂದ ದೂರು ಬಂದರೆ ಅಂತಹ ನೌಕರರನ್ನು ಅಮಾನತ್ತು ಮಾಡಲಾಗುವುದು. ಗ್ರಾಪಂಗಳಲ್ಲಿ ಲಭ್ಯವಿರುವ ಅನುದಾನದಲ್ಲಿ ಕುಡಿಯುವ ನೀರಿನ ಯೋಜನೆಗಳನ್ನು ಮಾತ್ರ ಕೈಗೆತ್ತಿಕೊಳ್ಳುವುದು ಕಡ್ಡಾಯವಾಗಿದೆ. ಅದರ ಬದಲು ರಸ್ತೆಗಳಿಗೆ ಮಣ್ಣು ಹಾಕಲು ಬಳಸಿದರೆ ಅಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ನೀರಿನ ಸಮಸ್ಯೆಯಿರುವ ಗ್ರಾಮಗಳಲ್ಲಿ ಹೊಸ ಕೊಳವೆ ಬಾವಿ ಕೊರೆಸಿ ಹಣ ಖರ್ಚುಮಾಡುವುದರ ಬದಲು, ಇರುವ ಕೊಳವೆ ಬಾವಿಗಳನ್ನೇ ಆಳಪಡಿಸುವುದು ಸೂಕ್ತ ಎಂದು ಕಿವಿಮಾತು ಹೇಳಿದರು.
ನೀತಿ ಸಂಹಿತೆ ನೆಪವೊಡ್ಡಿ ಕುಡಿವ ನೀರಿನ ಉಪಕರಣಗಳನ್ನು ಕೊಂಡ ಬಿಲ್ ಹಣದ ಚೆಕ್ಗೆ ಸಹಿ ಮಾಡದೆ ಸತಾಯಿಸುತ್ತಿರುವ ಅಧ್ಯಕ್ಷರ ಬಗ್ಗೆ ಕೇಳಿದಾಗ ಅಂತಹ ಅಧ್ಯರ ಚೆಕ್ ಸಹಿ ಅಧಿಕಾರವನ್ನು ವಾಪಸ್ ಪಡೆಯಲು ತಾಪಂ ಕಾರ್ಯನಿರ್ವಹಣಾಧಿಕಾರಿಗೆ ತಾಕೀತು ಮಾಡಿದರು. ಇಒ ಕೃಷ್ಣಾನಾಯಕ್, ಎಇಇ ಮಲ್ಲಿಕಾರ್ಜುನಯ್ಯ ಮತ್ತಿತರೆ ಅಧಿಕಾರಿಗಳು ಹಾಜರಿದ್ದರು.