ಹುಲಿನಾಯ್ಕರ್ ವಿರುದ್ದ ಘರ್ಜಿಸಿದ ಜಿಎಸ್ಬಿ
ತುಮಕೂರು: ಜೆಡಿಎಸ್ ಜಿಲ್ಲಾಧ್ಯಕ್ಷ, ಎಂಎಲ್ಸಿ ಡಾ.ಎಂ.ಆರ್. ಹುಲಿನಾಯ್ಕರ್ ವಿರುದ್ಧ ತುಮಕೂರು ಬಿಜೆಪಿ ಅಭ್ಯರ್ಥಿ, ಸಂಸದ ಜಿ.ಎಸ್. ಬಸವರಾಜ್ ಸುದ್ದಿಗೋಷ್ಠಿಯಲ್ಲಿ ಘರ್ಜಿಸಿದ್ದಾರೆ.
ಕ್ಷೇತ್ರಕ್ಕೆ ತಾವೇನೂ ಮಾಡಿಲ್ಲ ಎಂಬಂತೆ ಮಾತನಾಡಿರುವ, ಆರೋಪ ಮಾಡಿರುವ ಹುಲಿನಾಯ್ಕರ್ಗೆ ಈ ಮಾತುಗಳು ಶೋಭೆ ತರುವಂತದ್ದಲ್ಲ. ಹುಲಿ ಆರೋಪ ಸಂಪೂರ್ಣ ಸುಳ್ಳು. ತಾವು ಕ್ಷೇತ್ರಕ್ಕೆ ಹಲವು ಯೋಜನೆಗಳನ್ನು ತರಲು ಶ್ರಮಿಸಿದ್ದು, ಕೋಟ್ಯಂತರ ರು. ಅಭಿವೃದ್ಧಿ ಕಾಮಗಾರಿಗೆ ಕಾರಣರಾಗಿರುವುದಾಗಿ ತಿಳಿಸಿದರು.
ಪ್ರಜಾಪ್ರಭುತ್ವದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಮೇಲೆ ಪ್ರಭಾವ ಬೀರಿ ಹತ್ತು, ಹಲವು ಯೋಜನೆಗಳನ್ನು ತುಮಕೂರು ಜಿಲ್ಲೆಗೆ ತರಲು ಶ್ರಮಿಸಿದ್ದು, ಇದಕ್ಕೆ ದಾಖಲೆಗಳಿವೆ. ಇವೆಲ್ಲಾ ಗೊತ್ತಿದ್ದರೂ, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ತಾವೇನೂ ಮಾಡಿಲ್ಲ. ಕ್ಷೇತ್ರಕ್ಕೆ ಯಾವೊಂದು ಕೊಡುಗೆ ಕೊಟ್ಟಿಲ್ಲ ಎಂದು ಹುಲಿನಾಯ್ಕರ್ ತಮ್ಮ ವಿರುದ್ದ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ರೇಲ್ವೆ ಯೋಜನೆ, ಷಟ್ಪಥ ರಸ್ತೆ, ಗುಬ್ಬಿಯಲ್ಲಿ ಸ್ಥಾಪಿಸಲು ಉದ್ದೇಶಿಸಲಾಗಿರುವ ಹೆಲಿಕಾಪ್ಟರ್ ತಯಾರಿಕಾ ಘಟಕ, ಉಪ್ಪಾರಹಳ್ಳಿ ರೇಲ್ವೆ ಮೇಲ್ಸೇತುವೆ, ತುಮಕೂರು ಎರಡನೇ ಹಂತದ ಹೇಮಾವತಿ ನೀರು ಯೋಜನೆ, ತುಮಕೂರು ಅಮಾನಿಕೆರೆ ಸಮಗ್ರ ಅಭಿವೃದ್ಧಿ, ತುಮಕೂರಿನ ಎಪಿಎಂಸಿ ಮಾರುಕಟ್ಟೆ, ತುಮಕೂರಿನ ಖಾಸಗಿ ಬಸ್ ನಿಲ್ದಾಣ, ತುಮಕೂರು ನಗರಸಭೆ ಪಾಲಿಕೆಯಾಗಿ ಮೇಲ್ದರ್ಜೆಗೇರಿದ್ದು, ಹಿರೇಹಳ್ಳಿ ಕೃಷಿ ವಿಜ್ಞಾನ ಕೇಂದ್ರ ಉನ್ನತೀಕರಣ, ತುಮಕೂರಿಗೆ ಪ್ರಥಮ ದರ್ಜೆ ಕಾಲೇಜು ತಂದಿದ್ದು, ನ್ಯಾಯಾಲಯ ಸಂಕೀರ್ಣ ಸ್ಥಾಪನೆಗೆ ಒತ್ತು, ಬಯಲು ಸೀಮೆ ಪ್ರದೇಶದ ಬವಣೆ ನೀಗಿಸುವ ಪರಮಶಿವಯ್ಯ ಯೋಜನೆ ಜಾರಿಗೆ ನಿರಂತರ ಹೋರಾಟ, ತುಮಕೂರಿನಲ್ಲಿ ಪವರ್ಗ್ರಿಡ್ ಸ್ಥಾಪನೆಗೆ ಆದ್ಯತೆ, ಜಿಲ್ಲೆಯಲ್ಲಿ 12,500 ಎಕರೆ ಪ್ರದೇಶದಲ್ಲಿ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪನ್ನ ವಲಯದ ಮಂಜೂರಾತಿಗೆ ಶ್ರಮವಹಿಸಿದ್ದು, ದೊಡ್ಡಗುಣಿಗೆ ಕೆರೆಗೆ ಹೇಮಾವತಿ ನೀರು ಹರಿಸಿದ್ದು ಸೇರಿದಂತೆ ಹತ್ತು ಹಲವು ಯೋಜನೆಗಳ ಜಾರಿಗೆ ಶ್ರಮ ವಹಿಸಿರುವುದು ಗೋಚರಿಸುತ್ತಿದೆ. ಆದರೆ ವಿನಾ ಕಾರಣ ಖ್ಯಾತೆ ಮಾಡುವ ವಿರೋಧ ಪಕ್ಷದ ಬುದ್ಧಿ ಬಿಡದ ಹುಲಿನಾಯ್ಕರ್ ತಮ್ಮ ಸಾಧನೆ ಏನು ಎಂಬುದಕ್ಕೆ ತಾವು ಬಿಡುಗಡೆ ಮಾಡಿರುವ ಕೈಪಿಡಿ ನೋಡಿ ಮಾತನಾಡಲಿ. ಎದುರಾಳಿಗಳ ಪ್ರಶ್ನೆಗೆ ತಮ್ಮ ಸಾಧನಾ ಕೈಪಿಡಿಯೇ ಉತ್ತರ ಎಂದು ಮಾರ್ಮಿಕವಾಗಿ ನುಡಿದರು.
ಡಾ.ಸಿ. ಜಯರಾಮರಾವ್, ರಂಗಾನಾಯಕ್ ಮತ್ತಿತರರು ಉಪಸ್ಥಿತರಿದ್ದರು.