ಅನಿಲ್‌ಕುಮಾರ್‌ಗೆ ರು. 15000 ದಂಡ
ಶಿರಾ: ತಾಲೂಕು ಪಂಚಾಯಿತಿ ಸಾರ್ವಜನಿಕ ಮಾಹಿತಿ ಅಧಿಕಾರಿ ಅನಿಲ್‌ಕುಮಾರ್‌ಗೆ 15000 ರು. ಮಾಹಿತಿ ಆಯೋಗದಿಂದ ದಂಡ ವಿಧಿಸಲಾಗಿದೆ. ಮಹಾತ್ಮಗಾಂಧೀ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ 2009, 2010 ಮತ್ತು 2011 ಸಾಲುಗಳಲ್ಲಿ ಶಿರಾ ತಾಲೂಕಿನಲ್ಲಿ ಅನುಷ್ಠಾನಗೊಂಡ ಕಾಮಗಾರಿಗಳಿಗೆ ಸಂಬಂಧಪಟ್ಟ ಮಾಹಿತಿ ನೀಡುವಂತೆ ಮಾಹಿತಿ ಹಕ್ಕು ಕಾಯಿದೆಯಡಿ ಶಿರಾ ನಗರದ ಆನಂದ್ ಅವರು ಇಲ್ಲಿನ ಪಂಚಾಯಿತಿ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಮನವಿ ಸಲ್ಲಿಸಿದ್ದು ಮಾಹಿತಿ ಹಕ್ಕು ಕಾಯಿದೆಯಡಿ ನಿಗದಿಪಡಿಸಿದ್ದ ಅವಧಿಯಲ್ಲಿ ಮಾಹಿತಿ ನೀಡದಿರುವುದರಿಂದ ಮಾಹಿತಿ ಆಯೋಗಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಸದರಿ ಮೇಲ್ಮನವಿಯ ನಂತರವೂ ಮಾಹಿತಿ ನೀಡದಿರುವುದರಿಂದ ಕರ್ನಾಟಕ ಮಾಹಿತಿ ಆಯೋಗವು ಕೆಐಸಿ 5451 ಪಿಟಿಎನ್ 2013 ಮತ್ತು ಕೆಐಸಿ 5454 ಪಿಟಿಎನ್2013 ಮತ್ತು ಕೆಐಸಿ 5455 ಪಿಟಿಎನ್2013 ಈ ಮೂರು ಪ್ರಕರಣಗಳ ವಿಚಾರಣೆಯನ್ನು ನಡೆಸಿ ರಾಜ್ಯ ಮಾಹಿತಿ ಆಯುಕ್ತರಾದ ಟಿ.ರಾಮಾನಾಯಕ್ ಅವರು ಪ್ರಕರಣಗಳ ವಿಚಾರಣೆಯಲ್ಲಿ ಅರ್ಜಿದಾರರಿಗೆ ನಿಗದಿತ ಅವಧಿಯಲ್ಲಿ ಕೋರಿರುವ ಮಾಹಿತಿ ನೀಡದೇ ಇರುವುದಕ್ಕಾಗಿ, ಮಾಹಿತಿ ಕಾಯಿದೆ ವಿಧಿ 20 (1)ರಂತೆ ದಂಡ ವಿಧಿಸುವ ಕುರಿತು ಕಾರಣ ಕೇಳಿ ಜಾರಿ ಮಾಡಿದ ನೊಟೀಸಿಗೆ ಉತ್ತರಿಸದೇ ಇರುವುದಕ್ಕಾಗಿ, ಶಿರಾ ತಾಲೂಕು ಪಂಚಾಯಿತಿ ಸಾರ್ವಜನಿಕ ಮಾಹಿತಿ ಅಧಿಕಾರಿ ಅನಿಲ್‌ಕುಮಾರ್‌ಗೆ ತಲಾ 5000ರು.ಗಳಂತೆ ಮೂರು ಪ್ರಕರಣಗಳಲ್ಲಿ ಒಟ್ಟು 15000 ರು.ಗಳ ದಂಡವನ್ನು ವಿಧಿಸಿದ್ದಾರೆ.
ವಿದ್ಯಾರ್ಥಿ ವೇತನವಿಲ್ಲ: ಆರೋಪ
ಪಾವಗಡ: ಕಳೆದ 2ವರ್ಷಗಳಿಂದ ವಿದ್ಯಾರ್ಥಿ ವೇತನ ಹಾಗೂ ಪ್ರವಾಸ ಭತ್ಯ ನೀಡುವಲ್ಲಿ ತಾ. ಸಮಾಜ ಕಲ್ಯಾಣಾಧಿಕಾರಿಗಳು ಸತಾಯಿಸುತ್ತಿದ್ದಾರೆಂದು ಪಟ್ಟಣದ ವಿವೇಕಾನಂದ ವಿದ್ಯಾ ಸಂಸ್ಥೆಯ ಎಸ್‌ಸಿ, ಎಸ್‌ಟಿ ಬಡ ವಿದ್ಯಾರ್ಥಿಗಳು ಅಳಲು ವ್ಯಕ್ತಪಡಿಸಿದ್ದಾರೆ. ಪಟ್ಟಣದ ವಿವೇಕಾನಂದ ವಿದ್ಯಾ ಸಂಸ್ಥೆಯಲ್ಲಿ ಎಸ್‌ಸಿ, ಎಸ್‌ಟಿ ವರ್ಗಕ್ಕೆ ಸೇರಿದ ಅನೇಕ ಬಡ ವಿದ್ಯಾರ್ಥಿಗಳು ನರ್ಸಿಂಗ್ ಹಾಗೂ ಡಿಎಡ್ (ಶಿಕ್ಷಕರ ತರಬೇತಿ)ಪಡೆಯುತ್ತಿದ್ದು ತರಬೇತಿ ಪಡೆಯುತ್ತಿರುವ ಅನೇಕ ಮಂದಿ ಬಡ ವಿದ್ಯಾರ್ಥಿಗಳಿಗೆ ನಿಯಮನುಸಾರ ಪ್ರವಾಸ ಭತ್ಯ ಮತ್ತು ವಿದ್ಯಾರ್ಥಿ ವೇತನ ಮಂಜೂರಾತಿ ಕಲ್ಪಿಸುವಲ್ಲಿ ಕಳೆದ 2ವರ್ಷಗಳಿಂದ ಮೀನಮೇಷ ಎಣಿಸುತ್ತಿದ್ದಾರೆಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ಈ ಕುರಿತು ಸಂಸ್ಥೆಯ ಡಿಎಡ್ ತರಬೇತಿ ಸೆಂಟರ್ ವಿಭಾಗದ ಪ್ರಾಂಶುಪಾಲ ನಾಗೇಂದ್ರಪ್ಪ ಎಂಬುವರು ಮಾತನಾಡಿ ಕಾಲೇಜಿನಲ್ಲಿ ಅನೇಕ ಮಂದಿ ಎಸ್‌ಸಿ, ಎಸ್‌ಟಿ ಬಡ ವಿದ್ಯಾರ್ಥಿಗಳು ನರ್ಸಿಂಗ್ ಮತ್ತು ಶಿಕ್ಷಕರ ತರಬೇತಿ ಪಡೆಯುತ್ತಿದ್ದು ಬಡ ವಿದ್ಯಾರ್ಥಿಗಳಿಗೆ ನಿಯಮನುಸಾರ ಕಳೆದ 2ವರ್ಷಗಳಿಂದ ಪ್ರವಾಸ ಭತ್ಯ ಮತ್ತು ವಿದ್ಯಾರ್ಥಿ ವೇತನ ಕಲ್ಪಿಸುವಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಆಸಕ್ತಿ ವಹಿಸಿಲ್ಲವೆಂದು ಅವರು ತಿಳಿಸಿದ್ದಾರೆ.