ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ತುಮಕೂರು

ಎಡೆಯೂರು ಸಿದ್ಧಲಿಂಗೇಶ್ವರ ರಥೋತ್ಸವ

Rashmi Kasaragodu
Updated On : 7 Apr 2014, 1:06 am

ಕುಣಿಗಲ್: ತಾಲೂಕಿನ ಪ್ರಸಿದ್ಧ ಯಾತ್ರಾ ಕ್ಷೇತ್ರ ಎಡೆಯೂರು ಶ್ರೀಸಿದ್ಧಲಿಂಗೇಶ್ವರ ಸ್ವಾಮಿ ಮಹಾರಥೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.
ರಾಜ್ಯದ ವಿವಿಧೆಡೆಯಿಂದ ಅಸಂಖ್ಯಾತ ಮಂದಿ ಭಕ್ತರು ಶ್ರೀಸ್ವಾಮಿ ಮಹಾರಥೋತ್ಸವ ಕಾರ್ಯಕ್ರಮದಲ್ಲಿ ಉರಿಬಿಸಿಲನ್ನು ಲೆಕ್ಕಿಸದೆ ಪಾಲ್ಗೊಂಡರು. ಭಾನುವಾರ ಮಧ್ಯಾಹ್ನ 12ಗಂಟೆಗೆ ಅಭಿಜಿನ್ ಮುಹೂರ್ತದಲ್ಲಿ, ಮಠಾಧೀಶರಾದ  ಶಿವರುದ್ರ ಶಿವಾಚಾರ್ಯ, ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ, ದೇವಾಲಯ ಆಡಳಿತ ಮಂಡಳಿ ಅಧ್ಯಕ್ಷರಾದ ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ, ಶಾಸಕ ಡಿ.ನಾಗರಾಜಯ್ಯ ನಂದಿಧ್ವಜಕ್ಕೆ ಪೂಜೆ ಸಲ್ಲಿಸಿದ ನಂತರ ಭಕ್ತರು ರಥವನ್ನು ಎಳೆದು ಧನ್ಯರಾದರು.
ಬಿಸಿಲಿನ ಪ್ರಖರತೆ ಹೆಚ್ಚಾಗಿದ್ದು, ಎಡೆಯೂರಿಗೆ ಆಗಮಿಸುವ ಸುಮಾರು ನಾಲ್ಕು ಕಿಮಿ ದೂರದಿಂದಲೇ ಭಕ್ತರು ಪಾನಕ, ನೀರುಮಜ್ಜಿಗೆ, ಕೊಸಂಬರಿಯ ಅರವಟ್ಟಿಗೆಗಳನ್ನು ಸ್ಥಾಪಿಸಿ, ರಥೋತ್ಸವಕ್ಕೆ ಬಿಸಿಲಲ್ಲಿ ಬೆಂದು ಬಂದ ಭಕ್ತರಿಗೆ ಉಚಿತವಾಗಿ ವಿತರಿಸಿದರು. ರಥೋತ್ಸವ ಕಾರ್ಯಕ್ರಮ ಅಚ್ಚುಕಟ್ಟಾಗಿ ನಡೆಯಲು ದೇವಾಲಯ ಸಮಿತಿ ಆಡಳಿತಾಧಿಕಾರಿ ಕುಮಾರಯ್ಯ ಮತ್ತು ಸಿಬ್ಬಂದಿ ವತಿಯಿಂದ ಕುಡಿಯುವ ನೀರು ಪೂರೈಕೆ ಸೇರಿದಂತೆ, ರಥಬೀದಿಯಲ್ಲಿ ಕಾಂಕ್ರೀಟ್ ರಸ್ತೆಯಲ್ಲಿ ನಿರಂತರವಾಗಿ ನೀರು ಹರಿಸುವ ಮೂಲಕ ತಂಪಾಗಿರುವಂತೆ ಅಗತ್ಯ ಮುನ್ನಚ್ಚರಿಕೆ ಸಿದ್ಧತೆಗಳನ್ನು  ಕೈಗೊಂಡಿದ್ದರು.
ವಾಹನ ಸಂಚಾರ ಸೇರಿದಂತೆ ಸುಗಮ ರಥೋತ್ಸವ ಕಾರ್ಯಕ್ರಮ ನಿರ್ವಹಣೆಗೆ ಡಿವೈಎಸ್ಪಿ ಗಣೇಶ್, ಸಿಪಿಐ ಧರ್ಮೇಂದ್ರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬಿಸಿಲಿನ ಝಳ ತಾಳಲಾರದೆ ದೇವಾಲಯ ಆನೆ, ನೀರಿನ ಟ್ಯಾಂಕರ್ ಮೊರೆಹೋಗಿ, ಸೊಂಡಿಲಿನಿಂದ ಮನಸಾರೆ ನೀರನ್ನು ಮೈಮೇಲೆ ಸುರಿದುಕೊಳ್ಳುವ ಮೂಲಕ ತಾನು ತಂಪಾಗಿ, ಸುತ್ತಮುತ್ತಲಿದ್ದವರನ್ನು ತಂಪಾಗಿಸಿತು. ತಹಸೀಲ್ದಾರ್ ಶಂಭುಲಿಂಗಯ್ಯ ಉಪಸ್ಥಿರಿದ್ದು, ಚುನಾವಣೆ ನೀತಿಸಂಹಿತೆ ಪಾಲನಾಧಿಕಾರಿಗಳ ತಂಡ ರಥೋತ್ಸವ ಮತ್ತು  ಜಾತ್ರಾ ಕಾರ್ಯಕ್ರಮದ ಪ್ರದೇಶಲೆಲ್ಲಾ ಗಸ್ತು ಸಂಚರಿಸುತ್ತಾ, ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಎಚ್ಚರ ವಹಿಸಿದ್ದು ವಿಶೇಷವಾಗಿತ್ತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement