ಮತದಾನದಿಂದ ದೇಶದ ಭವಿಷ್ಯ ನಿರ್ಧಾರ: ರಾಜು
ತುಮಕೂರು: ಭಾರತೀಯ ಪ್ರತಿಯೊಬ್ಬ ಪ್ರಜೆಯು ಮತದಾನ ಮಾಡುವುದರಿಂದ ದೇಶದ ಭವಿಷ್ಯ ನಿರ್ಧರಿಸುವ ಶಕ್ತಿ ಹೊಂದಿದೆ. ಹಾಗಾಗಿ ಎಲ್ಲರೂ ಮತಗಟ್ಟೆಗೆ ಬನ್ನಿ ದೇಶದಲ್ಲಿ ಬದಲಾವಣೆ ತನ್ನಿ ಎಂದು ಭಗತ್ ಫೌಂಡೇಷನ್ ಅಧ್ಯಕ್ಷ ರಾಜು.ಎಂ.ಎ ಅವರು ಜನತೆಗೆ ಕರೆ ನೀಡಿದರು.
ತಾಲೂಕಿನ ವೈ.ಎನ್. ಹೊಸಕೋಟೆಯಲ್ಲಿ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಗ್ರಾಮದ ಬಸ್ ತಂಗುದಾಣದಲ್ಲಿ ನೆರೆದಿದ್ದ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು ಗ್ರಾಮದಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಮತ ಚಲಾಯಿಸಬೇಕು. ಆ ಮೂಲಕ ಸದೃಢ ಮನಸ್ಸು ಮತ್ತು ದೇಶ ಭವಿಷ್ಯವನ್ನು ರೂಪಿಸುವ ಶಕ್ತಿಯುಳ್ಳ ವ್ಯಕ್ತಿಗಳನ್ನು ಚುನಾವಣೆಯಲ್ಲಿ ಆಯ್ಕೆ ಮಾಡಬೇಕು ಎಂದು ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು. ಇದೇ ಸಂದರ್ಭದಲ್ಲಿ ಭಗತ್ ಫೌಂಡೇಷನ್ ಕಾರ್ಯದರ್ಶಿ ಮಾತನಾಡಿ ಎ.ಎಸ್. ರಘುನಂದನ್ ನಮ್ಮ ದೇಶದಲ್ಲಿ ಯಾವುದೇ ಚುನಾವಣೆ ಬಂದರೆ ಗಣನೀಯವಾದ ಪ್ರಮಾಣದಲ್ಲಿ ಮತ ಚಲಾವಣೆ ಆಗುವುದಿಲ್ಲ. ಗ್ರಾಮೀಣ ಪ್ರದೇಶದಲ್ಲಿ ಹಿರಿಯ ನಾಗರಿಕರಿಗೆ ವಾಹನಗಳ ಸೌಲಭ್ಯವಿಲ್ಲದೆ ಮತದಾನ ಮಾಡಲು ಸಾಧ್ಯವಾಗುವುದಿಲ್ಲ. ಆದ್ದರಿಂದ ತಮ್ಮ ಮನೆಯಲ್ಲಿ ಯಾರಾದರು ಹಿರಿಯ ನಾಗರೀಕರು ಇದ್ದರೆ ಅಂತಹವರನ್ನು ಮತಗಟ್ಟೆ ಬಳಿ ಕರೆದುಕೊಂಡು ಹೋಗಿ ಮತದಾನ ಮಾಡುವಂತೆ ಸಹಕರಿಸಬೇಕು ಎಂದು ತಿಳಿಸಿಕೊಟ್ಟರು. ಯಾರು ಮತ ಚಲಾಯಿಸುವುದಿಲ್ಲವೊ ಅಂತಹವಿಗೆ ಯಾವುದೇ ರೀತಿಯ ಸರ್ಕಾರಿ ಸೌಲಭ್ಯ ದೊರೆಯಬಾರದು. ಅಂತಹ ವ್ಯವಸ್ಥೆ ನಿರ್ಮಾಣವಾದಲ್ಲಿ ದೇಶದಲ್ಲಿ ಮತದಾನ ಮಾಡಲು ಎಲ್ಲರಿಗೂ ಅವಕಾಶವಾಗುತ್ತದೆ. ಆ ಮೂಲಕ ದೇಶದಲ್ಲಿ ಪ್ರಗತಿ ತಾನಾಗಿಯೇ ಮೂಡುತ್ತದೆ ಎಂದರು.
ಗ್ರಾಮದ ಬೀದಿಗಳಲ್ಲಿ ಮನೆ ಮನೆಗೆ ತಲುಪಿ ಚುನಾವಣ ಕರಪತ್ರ ಹಂಚಿ ಮತಗಟ್ಟೆಗೆ ಕಡ್ಡಾಯವಾಗಿ ಹೋಗಿ ಮತ ಚಲಾಯಿಸಿ ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು. ಈ ಸಂದರ್ಭದಲ್ಲಿ ಪೌಂಡೇಶನ್‌ನ ನೂರುದ್ದೀನ್, ಲೋಕೇಶ್, ಪುರುಷೋತ್ತಮ, ಹನುಮಂತರಾಯ, ನವೀನ್, ರಾಘವೇಂದ್ರ, ಶಿವಕುಮಾರ್, ಎಚ್.ಟಿ. ರಾಮಾಂಜಿ, ಮಂಜುನಾಥ್ ಶಿಕ್ಷಕರಾದ ಹೊ.ಮ. ನಾಗರಾಜ್, ಕೃಷ್ಣಕುಮಾರ್ ಮುಂತಾದವರು ಭಾಗವಹಿಸಿದ್ದರು.